ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ಸಹಕರಿಸಿ

Rashmi Kasaragodu
Updated On : 2 May 2014, 11:50 am

ಕ.ಪ್ರ. ವಾರ್ತೆ   ಲಿಂಗಸ್ಗೂರು   ಮೇ 1
ಗುರುಗುಂಟಾ ಗ್ರಾಮವನ್ನು ಬಯಲು ಮಲವಿಸರ್ಜನೆ ಮುಕ್ತ ಗ್ರಾಮವನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡುವುದು ಅಗತ್ಯ ಎಂದು ದೆಹಲಿಯ ಫೀಲ್ಡ್‌ಬ್ಯಾಕ್ ಫೌಂಡೇಶನ್ ಅಧಿಕಾರಿ ಶಿವಕುಮಾರ ಶರ್ಮಾ ಮನವಿ ಮಾಡಿದರು.
ತಾಲೂಕಿನ ಗುರುಗುಂಟಾ ಗ್ರಾಪಂ ಆವರಣದಲ್ಲಿ ಜಲನಿರ್ಮಲ, ಜಿಪಂ ಹಾಗೂ ಗ್ರಾಪಂ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬಯಲು ಶೌಚಾಲಯದಿಂದ ಅನೇಕ ರೋಗಗಳು ಹರಡುವ ಸಾಧ್ಯತೆಯಿದ್ದು, ಇದುವರೆಗೆ ವೈಯಕ್ತಿಕ ಶೌಚಾಲಯ ನಿರ್ಮಿಸದಿರುವುದು ವಿಷಾದನೀಯ ಸಂಗತಿ ಎಂದರು.
ಸರ್ಕಾರ ಗ್ರಾಪಂ ನೇತೃತ್ವದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಹಕಾರ ನೀಡುತ್ತಿದೆ. ರಾಯಚೂರು ಜಿಲ್ಲೆಯಲ್ಲಿ 15 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಬಯಲು ಮಲವಿಸರ್ಜನೆ ಮುಕ್ತ ಗ್ರಾಮವನ್ನಾಗಿಸಲು ಮುಂದಾಗಿದೆ. ಇದರಲ್ಲಿ ಗುರುಗುಂಟಾ ಗ್ರಾಮ ಸೇರ್ಪಡೆಗೊಂಡಿದ್ದು, ಗ್ರಾಪಂ ಆಡಳಿತ ಮಂಡಳಿ ಜೂ.25ರೊಳಗೆ ಬಯಲು ಮಲವಿಸರ್ಜನೆ ಮುಕ್ತ ಗ್ರಾಮವನ್ನಾಗಿಸಲು ನಿರ್ಧರಿಸಿದೆ.
ಪ್ರೋತ್ಸಾಹ ಧನ: ಗ್ರಾಪಂ ವತಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 4,700 ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ 5,400 ಮತ್ತು ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 5 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಗ್ರಾಮಸ್ಥರು ಸಹಕಾರ ನೀಡುವ ಮೂಲಕ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಜಲನಿರ್ಮಲ ಇಲಾಖೆ ಅಧಿಕಾರಿ ಡಾ.ರಾಜು, ಸಹನಿರ್ದೇಶಕ ಜಗದೀಶ, ರಾಮಣ್ಣ, ಗ್ರಾಪಂ ಮಾಜಿ ಉಪಾಧ್ಯಕ್ಷ ಶೇಖರಪ್ಪ ದೊಡ್ಡಮನಿ, ಮುಖಂಡರಾದ ಗೋವಿಂದ ನಾಯಕ, ಗುರುಬಸವ ನಾಯಕ, ಯಲ್ಲಪ್ಪ, ಅಂಬಣ್ಣ, ಇಸ್ಮಾಯಿಲ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement