ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 2 May 2014, 11:53 am

ಗುಲ್ಬರ್ಗ: ನಗರದ ಹೊರವಲಯದ ಹೀರಾಪುರ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರಜ್ಞಾ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಹೀರಾಪುರ ಕ್ರಾಸ್‌ನಿಂದ ಬಬಲಾದ್‌ಗೆ ಹೊಗುವ ಮುಖ್ಯ ರಸ್ತೆಯನ್ನು ದುರಸ್ತಿಗೊಳಿಸಬೇಕು. ಗ್ರಾಮದಲ್ಲಿ ಒಳಚರಂಡಿ ದುರಸ್ತಿ ಕಾಮಗಾರಿ ತಕ್ಷಣವೇ ಆರಂಭಿಸಬೇಕು. ರಸ್ತೆ, ಸಮರ್ಪಕ ಕುಡಿಯುವ ನೀರು ಒದಗಿಸಬೇಕು. ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಶಂಕರಲಿಂಗ ನಗರದ ಹೀರಾಪುರದ ಉತ್ತರ ಭಾಗದಹೊಸ ಬಡಾವಣೆಯಲ್ಲಿ ಬೀದಿ ದೀಪ, ಸ್ಮಶಾನ ಭೂಮಿಗಳ ಅಭಿವೃದ್ಧಿಪಡಿಸಬೇಕು. ಹೀರಾಪುರ ಬಡಾವಣೆಯನ್ನು ಗ್ರಾಮೀಣ ಪೊಲೀಸ್ ಠಾಣೆಯಿಂದ ಬೇರ್ಪಡಿಸಿ ಸಮೀಪದ ಅಶೋಕ ನಗರದ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ಗ್ರಾಮಕ್ಕೆ ಹೊಂದಿಕೊಂಡಿರುವ ಜಾಫರಾಬಾದ್ ಗ್ರಾಮದ ಸರ್ಕಾರಿ ಗೈರಾಣ ಭೂಮಿಯನ್ನು ರಕ್ಷಣೆ ಮಾಡಬೇಕು. ಸಂಘದ ಅಧ್ಯಕ್ಷ ಸಂತೋಷ ಮೇಲ್ಮನಿ, ಮುಖಂಡರಾದ ಅಲ್ಲಮಪ್ರಭು ನಿಂಬರ್ಗಿ, ಸೋಮಶೇಖರ ಕೋಳಕೂರ್, ಪಾಶಾಮಿಯಾ ಹೀರಾಪುರ, ಸಿದ್ದಮ್ಮ ಬಡಿಗೇರ್ ಇದ್ದರು.
ಬಾವಿಗೆ ಬಿದ್ದು ವೃದ್ಧೆ ಸಾವು
ಶಹಾಬಾದ್: ಗ್ರಾಮದ ಕೋರಿಸಿದ್ದೇಶ್ವರ ಮಠದ ಹಿಂದುಗಡೆ ಇರುವ ಖಾಸಗಿ ಬಾವಿಯಲ್ಲಿ ವೃದ್ಧೆಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಗ್ರಾಮದ ಶಂಕ್ರಮ್ಮ ಸಿದ್ದಣ್ಣ ಅರಿ(75) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ತನ್ನ ಪತಿಯ ವಿಯೋಗದಿಂದ ಮಾನಸಿಕವಾಗಿ ಖಿನ್ನಳಾಗಿದ್ದಳು. ಕುಟುಂಬ ಸಮೇತ ಗ್ರಾಮ ತೊರೆದಿದ್ದಳು ಎನ್ನಲಾಗಿದೆ. ಅಕ್ಷತ್ತದಗಿ ಅಮಾವಾಸ್ಯೆ ನಿಮಿತ್ತ ಕೋರಿಸಿದ್ದೇಶ್ವರ ಮಠದ ಹಳೆ ಜಾತ್ರೆಗೆ ಬಂದಿದ್ದಳು. ಮಠಕ್ಕೆ ಬಂದ ಭಕ್ತರು ಸ್ನಾನಕ್ಕಾಗಿ ಬಾವಿ ಬಳಿ ಬಂದಾಗ ಶವ ಪತ್ತೆಯಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಣಿಕಪ್ಪಗೆ ಗೌರವ ಡಾಕ್ಟರೇಟ್
ಗುಲ್ಬರ್ಗ: ಮಲೇಷಿಯಾದ ಕೌಲಾಲಂಪುರದಲ್ಲಿ ಮೇ 4ರಂದು ನಡೆಯಲಿರುವ ಶ್ರೀಲಂಕಾ ಮುಕ್ತ ವಿಶ್ವವಿದ್ಯಾಲಯದ 52ನೇ ಘಟಿಕೋತ್ಸವದಲ್ಲಿ ಗುಲ್ಬರ್ಗದ ನಿವೃತ್ತ ಎಸ್‌ಪಿ ಮಾಣಿಕಪ್ಪಾ ಪಾಟೀಲ್ ಅವರು ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದು ಪ್ರೊ. ಶಿವರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಲಹೆ ನೀಡಲು ಮನವಿ
ಗುಲ್ಬರ್ಗ: ನಗರದ ಶೇಖ್ ರೋಜಾದಲ್ಲಿ ಸರ್ವೆ ನಂ. 49, 50/1, 53/2, 53/3 ಮತ್ತು 54/5ರಲ್ಲಿ ನಿವೇಶನದಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣ ಮಾಡಲು ಅನುಮತಿ ದೊರಕಿದೆ. ಈ ಪ್ರಯುಕ್ತ ಸಾರ್ವಜನಿಕರು 15 ದಿನದೊಳಗೆ ತಮ್ಮ ಸಲಹೆಗಳನ್ನು ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ.
ವಿದ್ಯಾರ್ಥಿಗಳ ಸಭೆ
ಗುಲ್ಬರ್ಗ: ಶರಣ ಬಸವೇಶ್ವರ ಮಹಾವಿದ್ಯಾಲಯ ಸಂಸ್ಥೆಯ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಮೇ 4ರಂದು ಬೆಳಗ್ಗೆ 11 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಭೆ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement