ಶಿಲ್ಪಾ ಮೆಡಿಕೇರ್ ಕಾರ್ಮಿಕರ ಸಂಘದಿಂದ ಮೆರವಣಿಗೆ
ರಾಯಚೂರು: ತಾಲೂಕಿನ ಶಕ್ತಿನಗರದ ಶಿಲ್ಪಾ ಮೆಡಿಕೇರ್ ಕಂಪನಿಯ ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತ ಶಿಲ್ಪಾ ಮೆಡಿಕೇರ್ ಕಾರ್ಮಿಕರ ಸಂಘದಿಂದ ವಿಶ್ವ ಕಾರ್ಮಿಕ ದಿನಾಚರಣೆ ಏರ್ಪಡಿಸಲಾಗಿತ್ತು.
ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದ ಕಾರ್ಮಿಕರು, ವಿಶ್ವದ ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ, ಕಾರ್ಮಿಕರ ಏಕತೆ ಚಿರಾಯುವಾಗಲಿ, ಶಿಲ್ಪಾ ಮೆಡಿಕೇರ್ ಲಿ. ಕಾರ್ಮಿಕರ ಹೋರಾಟ ಚಿರಾಯುವಾಗಲಿ ಮುಂತಾದ ಘೋಷಣೆ ಕೂಗಿದರು.
ನಂತರ ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಹಾಗೂ ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಂಚಾಲಕ ಎನ್.ಎಸ್. ವೀರೇಶ್ ಹುತಾತ್ಮ ಸ್ತಂಭಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣ ನಡೆಸಿ ಮಾತನಾಡಿ, ಕಾರ್ಮಿಕ ದಿನ ಹಬ್ಬದ ದಿನವಲ್ಲ. ಬದಲಿಗೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡಿ ಮಡಿದ ದಿನವಾಗಿದೆ ಎಂದರು.
ದಿನಕ್ಕೆ ಕೇವಲ 8 ಗಂಟೆಗಳ ಕಾರ್ಯನಿರ್ವಹಣೆಯ ಹಕ್ಕು ಅನೇಕ ಹೋರಾಟಗಳ ನಂತರ ದೊರೆತದ್ದಾಗಿದೆ. ಆದ್ದರಿಂದ ಇಂತಹ ಸ್ಫೂರ್ತಿ ದಿನವನ್ನು ಹೋರಾಟದ ಸಂಕಲ್ಪ ದಿನವಾಗಿ ಆಚರಿಸಬೇಕಾಗಿದೆ ಎಂದರು.
ಶಿಲ್ಪಾ ಮೆಡಿಕೇರ್ ಕಂಪನಿಯ ಕಾರ್ಮಿಕರ ಸಂಘದ ಉಪಾಧ್ಯಕ್ಷ ನರಸಪ್ಪ, ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಸಲೀಂ ಪದಾಧಿಕಾರಿಗಳಾದ ಯಲ್ಲಪ್ಪ, ವೆಂಕಟರೆಡ್ಡಿ, ಪ್ರವೀಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೋವೀಂದದಾಸ್ ಕ್ರಾಂತಿಗೀತೆ ಹಾಡಿದರು. ಕಾರ್ಮಿಕರ ಸಂಘದವರು ಇದ್ದರು.