ಹಲವೆಡೆ ಕಾರ್ಮಿಕ ದಿನಾಚರಣೆ ಹಕ್ಕುಗಳ ರಕ್ಷಣೆಗೆ ಹೋರಾಟಕ್ಕೆ ಕರೆ
ಕ.ಪ್ರ. ವಾರ್ತೆ ರಾಯಚೂರು ಮೇ 1
ನಗರ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ಕಾರ್ಮಿಕರ ದಿನಾಚರಣೆಯನ್ನು ವಿವಿಧ ಕಾರ್ಮಿಕ ಸಂಘಟನೆಗಳಿಂದ ಆಚರಿಸಲಾಯಿತು.
ನಗರದ ಸಿಐಟಿಯು ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಎಚ್. ಪದ್ಮಾ ಧ್ವಜಾರೋಹಣ ನೆರವೇರಿಸಿದರು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕಾರ್ಮಿಕರ ಶೋಷಣೆ ಮುಂದುವರಿದಿದ್ದು, ಗುತ್ತಿಗೆ, ಗೌರವಧನ, ಪ್ರೋತ್ಸಾಹಧನದ ಹೆಸರಿನಲ್ಲಿ ಕಾರ್ಮಿಕರ ಶೋಷಣೆ ಜಾರಿಯಲ್ಲಿದೆ ಎಂದು ಆರೋಪಿಸಿದರು.
ಕಾರ್ಮಿಕರ ಬಹುದಿನದ ಬೇಡಿಕೆ ಕನಿಷ್ಠ ಕೂಲಿ ದೊರೆಯುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆಯೇರಿಕೆ ಬಡ ಕಾರ್ಮಿಕರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾರ್ಮಿಕರ ಆರ್ಥಿಕ ಪ್ರಗತಿಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ಕಾರ್ಮಿಕರು ಒಗ್ಗೂಡಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕಿದೆ ಎಂದು ಕರೆ ನೀಡಿದರು.
ಮುಖಂಡ ವೀರಭದ್ರ ವಕೀಲರು ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್. ಶರಣಬಸವ, ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ಜೆ.ಎಂ. ಚನ್ನಬಸಯ್ಯ, ಕೆ. ನಾರಾಯಣ, ಪ್ರಹ್ಲಾದರೆಡ್ಡಿ, ವೈ. ಈರಣ್ಣ, ಪ್ರದೀಪ್, ಮಲ್ಲೇಶ್ ಸೇರಿದಂತೆ ಅನೇಕರಿದ್ದರು.
ಶಿಲ್ಪಾ ಮೆಡಿಕೇರ್: ತಾಲೂಕಿನ ದೇವಸೂಗೂರು ಬಳಿಯ ಕೈಗಾರಿಕೆ ಪ್ರದೇಶದಲ್ಲಿ ಗುರುವಾರ ಶಿಲ್ಪಾ ಮೆಡಿಕೇರ್ ನೌಕರರ ಸಂಘದಿಂದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಉದ್ಘಾಟಿಸಿ, ಜಗತ್ತಿನ ಎಲ್ಲೆಡೆ ಬಂಡವಾಳ ಶಾಹಿಗಳು ಕಾರ್ಮಿಕರನ್ನು ತಮ್ಮ ಗುಲಾಮರಂತೆ ಕಾಣುತ್ತಿದ್ದಾರೆ. ಆಳುವ ಸರ್ಕಾರಗಳು ಇಂದಿಗೂ ಕಾರ್ಮಿಕರ ಹಿತಕಾಯಲು ರೂಪಿಸಿದ ಕಾನೂನುಗಳ ಜಾರಿಗೆ ಅವಕಾಶ ನೀಡುತ್ತಿಲ್ಲ ಎಂದು ಟೀಕಿಸಿದರು.
ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ, ಕಂಪನಿಗಳ ಮಾಲೀಕರು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕಾನೂನು ಉಲ್ಲಂಘಿಸಿ ಕಾರ್ಮಿಕ ವಿರೋಧಿ ಆದೇಶ ಹೊರಡಿಸಲಾಗುತ್ತಿದೆ. ಕಾರ್ಮಿಕರಿಗೆ ಮುನ್ಸೂಚನೆ ನೀಡದೇ ಎಂಪಿಸಿಎಲ್ ಕಂಪನಿ ಮುಚ್ಚಿದ್ದು ಇದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಸುರಾನಾ ಕಂಪನಿಯ ಮಾಲೀಕರು ಯಾವುದೇ ಕಾರ್ಮಿಕ, ಔದ್ಯಮಿಕ ಕಾನೂನು ಪಾಲಿಸದೇ ಕಾರ್ಮಿಕರನ್ನು ವಜಾಗೊಳಿಸುವ ಕಾರ್ಯ ಮಾಡಿದೆ. ಆ ಮೂಲಕ ಕಾರ್ಮಿಕ ವಿರೋಧಿ ನೀತಿ ಪ್ರದರ್ಶಿಸಿದೆ. ಸರ್ಕಾರ ಸಹ ಕಾರ್ಮಿಕರ ವಿರುದ್ಧ ಕಂಪನಿಗಳ ಮಾಲೀಕರ ಪರವಾಗಿ ನಿಲ್ಲುವ ಕಾರ್ಯ ಮಾಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿಲ್ಪಾ ಮೆಡಿಕೇರ್ ನೌಕರರ ಸಂಘದ ಅಧ್ಯಕ್ಷ ಎಂ. ಶರಣಗೌಡ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣರೆಡ್ಡಿ, ಬಸನಗೌಡ ಪೊಲೀಸ್ ಪಾಟೀಲ್ ಇದ್ದರು.
ಜಿಲ್ಲಾ ಜೆಡಿಎಸ್: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಕಾರ್ಮಿಕ ಘಟಕದಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಜಿಲ್ಲಾ ವಕ್ತಾರ ಎಂ. ವಿರೂಪಾಕ್ಷಿ ಮಾತನಾಡಿ, ಖಾಸಗೀಕರಣದಿಂದ ಕಾರ್ಮಿಕರ ಮೇಲೆ ಶೋಷಣೆ ಹೆಚ್ಚುತ್ತಿದೆ. ಕಾರ್ಮಿಕರು ಇಂಥ ಶೋಷಣೆ ತಡೆಗೆ ಖಾಸಗೀಕರಣ ಪ್ರಕ್ರಿಯೆಗೆ ತಡೆಯೊಡ್ಡಬೇಕಿದೆ ಎಂದು ಕರೆ ನೀಡಿದರು. ಶಿವಶಂಕರ್, ಜಂಬುನಾಥ ಯಾದವ್, ಪಿ. ಯಲ್ಲಪ್ಪ, ನರಸಿಂಹಲು, ಸುಭಾಷ್, ಭೀಮಣ್ಣ ಮಂಚಾಲ, ರಾಮಕೃಷ್ಣ, ಆಂಜಿನಯ್ಯ ಯಾದವ್ ಸೇರಿದಂತೆ ಅನೇಕರಿದ್ದರು.