ಹಳ್ಳದ ನೀರು ಮಿಶ್ರಣ: ಮುನ್ನೆಚ್ಚರಿಕೆಗೆ ಮನವಿ
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಏ. 5ರಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸಿರುವುದರಿಂದ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಆದ್ದರಿಂದ ಈಗಾಗಲೇ ಕುಡಿಯುವ ನೀರಿನ ಕೆರೆಗಳಲ್ಲಿ ಸಂಗ್ರಹಿಸಿರುವ ತುಂಗಭದ್ರಾ ನದಿ ನೀರಿನ ಜೊತೆಗೆ ಇನ್ನು ಮುಂದೆ ಧರ್ಮ ಚಂದ್ ಶೇಟ್ ಹೊಲದ ಹತ್ತಿರ ಹರಿಯುವ ಹಿರೇಹಳ್ಳದ ನೀರನ್ನು ಮಿಶ್ರಣ ಮಾಡಿ ಸರಬರಾಜು ಮಾಡಲಾಗುತ್ತದೆ. ಕಾರಣ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂಡೆ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನಳಗಳಿಗೆ ಸರಬರಾಜಾಗುವ ನೀರನ್ನು ಕಾಯಿಸಿ, ಆರಿಸಿ ಸೋಸಿ ಕುಡಿಯುವಂತೆ ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ, ಉಪಾಧ್ಯಕ್ಷೆ ಲಕ್ಷ್ಮೀ ರಮೇಶ ಮತ್ತು ಪೌರಾಯುಕ್ತರು ಮನವಿ ಮಾಡಿದ್ದಾರೆ.
ಪೈಪ್‌ಲೈನ್ ಒಡೆದು ಜೀವಜಲ ಪೋಲು
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಬಸ್‌ನಿಲ್ದಾಣ ವೃತ್ತದ ಬಳಿ ಒಡೆದ ಪರಿಣಾಮ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ.
ಲಿಂಗಸ್ಗೂರು ಪಟ್ಟಣ, ಕಸಬಾಲಿಂಗಸ್ಗೂರು, ಹುಲಿಗುಡ್ಡ ಹಾಗೂ ಕರಡಕಲ್ ವ್ಯಾಪ್ತಿಯ ಎಲ್ಲ ವಾರ್ಡುಗಳಿಗೆ ಕುಡಿಯುವ ನೀರು ಪೂರೈಸಲು ಕಳೆದ ಹಲವು ವರ್ಷಗಳ ಹಿಂದೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಆ ವೇಳೆ ಗುಣಮಟ್ಟದ ಸಾಮಗ್ರಿ ಬಳಸದ ಪ್ರಯುಕ್ತ ಮೇಲಿಂದ ಮೇಲೆ ಮುಖ್ಯಪೈಪ್ ಒಡೆಯುತ್ತಿದ್ದು, ಪ್ರತಿ ಬಾರಿ ಒಡೆದ ಸಮಯದಲ್ಲಿ ಸಾವಿರಾರು ರೂ. ಖರ್ಚು ಮಾಡಲಾಗುತ್ತದೆ. ಪ್ರತಿ ಸಾರಿ ಹಣ ವ್ಯಯ ಮಾಡುವ ಬದಲು ಗುಣಮಟ್ಟದ ಪೈಪ್‌ಲೈನ್ ಅಳವಡಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ. ಮುಖ್ಯಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿರುವ ಸಿದ್ದಿ ತಿಳಿದ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಭೇಟಿ ನೀಡಿ ಸಿಬ್ಬಂದಿ ಸಹಕಾರದಿಂದ ದುರಸ್ತಿಗೊಳಿಸಿದರು.