ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಡಿಸಿ ಆದೇಶ ಉಲ್ಲಂಘಿಸಿ ಚುನಾವಣೆ: ಆರೋಪ

Rashmi Kasaragodu
Updated On : 3 May 2014, 12:14 pm

ಕ.ಪ್ರ. ವಾರ್ತೆ    ರಾಯಚೂರು    ಮೇ 2
ಇಲ್ಲಿನ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ನ್ಯೂ ಎಜುಕೇಷನ್ ಸೊಸೈಟಿ ಸಂಸ್ಥೆಯಲ್ಲಿ 2014-16ನೇ ಸಾಲಿಗೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತಿದೆ ಎಂದು ಜೆಡಿಯು ರಾಜ್ಯ ಕಾರ್ಯದರ್ಶಿ ನೂರ್ ಮಹ್ಮದ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿಗಳು ಚುನಾವಣೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯಬದ್ಧ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಚುನಾವಣೆಗೆ ಆಡಳಿತ ಮಂಡಳಿಯು ಮುಂದಾಗಿದೆ ಎಂದು ಟೀಕಿಸಿದರು.
ಚುನಾವಣೆಯೇ ಗೊಂದಲ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿಯುವರೆಗೂ ಶಿಕ್ಷಣ ಸಂಸ್ಥೆಗೆ ಚುನಾವಣೆ ನಡೆಸದಂತೆ ಆದೇಶಿಸಿದ್ದರೂ ನ್ಯೂ ಎಜುಕೇಷನ್ ಸೊಸೈಟಿ ಸಂಸ್ಥೆ ಕೇವಲ ಒಬ್ಬ ವ್ಯಕ್ತಿಯ ಹಿಡಿತದಲ್ಲಿದ್ದು, ಅವರ ಅಣತಿಯಂತೆಯೇ ಚುನಾವಣೆ ಅಧಿಕಾರಿ ಬಸಪ್ಪ ಗೋಪಿಶೆಟ್ಟಿ ಚುನಾವಣೆ ನಡೆಸಲು ತರಾತುರಿಯ ಸಿದ್ಧತೆಯಲ್ಲಿದ್ದಾರೆಂದು ಆರೋಪಿಸಿದರು.
ಸಂಸ್ಥೆಯಲ್ಲಿ ನಾಮಪತ್ರ ಸಲ್ಲಿಕೆ ದಾಖಲೆಗಳು ಕಳುವಾಗಿವೆ ಎಂದು ಮಾ.18ರಂದು ಚುನಾವಣಾಧಿಕಾರಿ ಬಸಪ್ಪ ಗೋಪಿಶೆಟ್ಟಿ ಸದರ ಬಜಾರ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಮಾ.25ರಂದು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಪ್ರಕಟಣೆ ನೀಡುವ ಮೂಲಕ ಗೊಂದಲ ಹುಟ್ಟಿಸಿದ್ದಾರೆಂದು ಆರೋಪಿಸಿದರು.
ಭ್ರಷ್ಟಾಚಾರ ತಾಂಡವ: ಶಿಕ್ಷಣ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಹಿಡಿತವಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ ಅವರು, ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಬಡ ಅಲ್ಪಸಂಖ್ಯಾತರ ಮಕ್ಕಳ ಮಾಹಿತಿ ಜಿಲ್ಲಾಧಿಕಾರಿಗೆ ತಪ್ಪಾಗಿ ಒದಗಿಸುವ ಮೂಲಕ ವಿದ್ಯಾರ್ಥಿ ವೇತನ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ತಲಾ 300 ನೀಡಿದಲ್ಲಿ ಮಾತ್ರ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗೆ ಈಗಾಗಲೇ 350ರಿಂದ 400 ಚೆಕ್ ಮಂಜೂರಾಗಿದ್ದು, ಅವುಗಳಲ್ಲಿ ಬಹುತೇಕರು ಹಣ ನೀಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆಂದು ದೂರಿದರು.
ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಸಂಸ್ಥೆಯಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚುನಾವಣೆ ರದ್ದುಪಡಿಸಬೇಕು. ಅಲ್ಪಸಂಖ್ಯಾತರ ಮಕ್ಕಳ ಹಿತಕ್ಕಾಗಿ ಮುಂದಿನ ದಿನಗಳಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಮುಖಂಡರಾದ ಮಹ್ಮದ್ ಹಾಜಿ, ಎ.ಆರ್. ಸಮ್ದಾನಿ, ಸೈಯದ್ ಇಸ್ಮಾಯಿಲ್, ಮಹ್ಮದ್ ಶಫಿ ಸೇರಿ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement