ತುಂಗಭದ್ರಾ ಕಾಲುವೆ ಆಧುನೀಕರಣ ಮತ್ತಷ್ಟು 'ಎಡ'
ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ ರಾಯಚೂರು ಮೇ 2
ಲೋಕಸಭೆ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಪ್ರಸಕ್ತ ವರ್ಷ ಬೇಸಿಗೆಯಲ್ಲಿ ತುಂಗಭದ್ರಾ ಎಡದಂಡೆ ಆಧುನೀಕರಣ ನಿರೀಕ್ಷೆಯಂತೆ ಆರಂಭಗೊಳ್ಳುವುದು ಬಹುತೇಕ ಅನುಮಾನವಾಗಿದೆ. ಚುನಾವಣೆ ಆಯೋಗದಿಂದ ಎಡದಂಡೆ ಕಾಲುವೆ ಆಧುನೀಕರಣಕ್ಕೆ ಸಂಬಂಧಿಸಿ ಅನುಮತಿ ಪಡೆದು ಕಾಮಗಾರಿ ಆರಂಭಿಸುವತ್ತ ಸರ್ಕಾರದ ನಿರಾಸಕ್ತಿ ಮೂಲ ಆಶಯಕ್ಕೆ ಹಿನ್ನಡೆಯುಂಟು ಮಾಡಿದೆ. ಪರಿಣಾಮ ಪ್ರಸಕ್ತ ಕಾಮಗಾರಿ ನಡೆಯುವುದೇ ಅನುಮಾನ ಎಂಬಂತಾಗಿದೆ.
ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ನೀರಾವರಿ ಯೋಜನೆ ಅಡಿಯ ಕಾಲುವೆಗಳ ಆಧುನೀಕರಣಕ್ಕೆ ಚುನಾವಣೆಯೇ ಅಡ್ಡಿಯಾಗುತ್ತಿರುವುದು ರೈತರಲ್ಲಿ ಆತಂಕಕ್ಕೆ ದಾರಿಯಾಗಿದೆ. ಪ್ರತಿ ವರ್ಷ ತುಂಗಭದ್ರಾ ನೀರಾವರಿ ಯೋಜನೆಯ ಕಾಲುವೆಗಳ ಆಧುನೀಕರಣ ಪ್ರಕ್ರಿಯೆಗೆ ಬೇಸಿಗೆ ಆರಂಭದೊಂದಿಗೆ ಚಾಲನೆ ದೊರೆಯುತ್ತಿತ್ತು.
ಪ್ರಕ್ರಿಯೆ ಸ್ಥಗಿತ: ಆದರೆ ಕಳೆದ ಬಾರಿ ವಿಧಾನಸಭೆಯಾದರೆ ಈ ಬಾರಿ ಲೋಕಸಭೆ ಚುನಾವಣೆಯ ಹಿನ್ನೆಲೆ ಆಧುನೀಕರಣ ಕಾಮಗಾರಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ಆಧುನೀಕರಣಕ್ಕೆ ಚುನಾವಣೆ ಪೂರ್ವದಲ್ಲಿಯೇ ಸುಮಾರು # 380 ಕೋಟಿ ವೆಚ್ಚದ ಕಾಮಗಾರಿಗೆ ಉದ್ದೇಶಿಸಿತ್ತೆಂದು ಹೇಳಲಾಗಿತ್ತು.
ಅಡಚಣೆ: ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾಮಗಾರಿಯ ವಿವಿಧ ಹಂತಗಳಿಗೆ ನೀತಿ ಸಂಹಿತೆ ಜಾರಿಯೇ ಅಡಚಣೆಯಾಯಿತು. ಕಳೆದ ವರ್ಷವೂ ವಿಧಾನಸಭೆ ಚುನಾವಣೆ ಹಿನ್ನೆಲೆ ಆಧುನೀಕರಣ ಕಾಮಗಾರಿ ತಡವಾಗಿತ್ತು. ಆ ವೇಳೆ ಜಿಲ್ಲಾಡಳಿತ ಚುನಾವಣೆ ಆಯೋಗದಿಂದ ಅನುಮತಿ ಪಡೆದು ಕಾಮಗಾರಿ ಕೈಗೊಳ್ಳಲು ನೆರವಾಗಿತ್ತು.
ನಿರಾಸಕ್ತಿ: ರಾಜ್ಯ ಸರ್ಕಾರ ಶತಾಯಗತಾಯ ಲೋಕಸಭೆ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಛಲದಲ್ಲಿ ರಾಜ್ಯದ ರೈತರ ಹಿತ ಕಡೆಗಣಿ ಸಿದೆ. ಅಂತೆಯೇ ಕಾಲುವೆಯ ಆಧುನೀಕರಣದ ಅವಶ್ಯಕತೆ ಮತ್ತು ಅದಕ್ಕೆ ಅವಕಾಶ ನೀಡದಿದ್ದಲ್ಲಿ ರೈತರಿಗಾಗುವ ತೊಂದರೆಯ ಬಗ್ಗೆ ವಾಸ್ತವಾಂಶವನ್ನು ಚುನಾವಣೆ ಆಯೋಗಕ್ಕೆ ಮನವರಿಕೆ ಮಾಡುವ ಕಾರ್ಯ ಮಾಡಲಿಲ್ಲ.
ಪ್ರಸಕ್ತ ಲೋಕಸಭೆ ಚುನಾವಣೆಯ ಹಿನ್ನೆಲೆ ಕಾಲುವೆ ಆಧುನೀಕರಣಕ್ಕೆ ಅನುಮತಿಸಲು ಜಿಲ್ಲಾಡಳಿತ ಕೋರಿತ್ತು. ಆದರೆ ರಾಜ್ಯ ಸರ್ಕಾರ ವಹಿಸಿದ ಮೌನದಿಂದ ಚುನಾವಣೆ ಆಯೋಗವು ಸರ್ಕಾರದಿಂದ ಈ ಬಗ್ಗೆ ಮನವಿ ಬಂದಿಲ್ಲ ಎಂದು ಹೇಳಿ ನಿರಾಕರಿಸಿತು.
ಸದ್ಯ ಚುನಾವಣೆ ಮುಗಿದಿದೆ. ನೀತಿ ಸಂಹಿತೆಯ ಸಡಿಲಿಕೆ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಡ್ಡಿಯಿಲ್ಲ ಎಂಬುದು ಸ್ಪಷ್ಟ. ಆದರೆ ರಾಜ್ಯ ಸರ್ಕಾರಕ್ಕೆ ಕಾಲುವೆಗಳ ಭದ್ರಗೊಳಿಸುವ ಕಾಮಗಾರಿಯತ್ತ ಆಸಕ್ತಿಯೇ ಕಾಣುತ್ತಿಲ್ಲ. ಹಾಗಾಗಿ ಮೇ ತಿಂಗಳಲ್ಲಿ ಚುನಾವಣೆಯ ಫಲಿತಾಂಶದ ನಂತರವೇ ಈ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭಗೊಳ್ಳುವ ನಿರೀಕ್ಷೆಯಿದೆ.
ಆತಂಕ: ಮೇ ತಿಂಗಳಾಂತ್ಯಕ್ಕೆ ಕಾಲುವೆಗಳ ಆಧುನೀಕರಣ ಕಾಮಗಾರಿ ಆರಂಭಗೊಂಡಲ್ಲಿ ಜೂನ್ ಅಂತ್ಯದವರೆಗೆ ಕಾಮಗಾರಿ ಸಾಗಬಹುದು. ಅಲ್ಲಿಗೆ ಮುಂಗಾರು ಮಳೆಯ ಸಮಸ್ಯೆ ಕಾಮಗಾರಿ ನಿರ್ವಹಣೆಗೆ ಎದುರಾಗಿ ತರಾತುರಿಯ ಕಾಮಗಾರಿ ನಿಶ್ಚಿತ ಎಂಬ ಆತಂಕ ರೈತರದ್ದಾಗಿದೆ.