ಮಠಗಳು ಸಂಸ್ಕಾರ ಸಂವರ್ಧಿಸಲಿ
ಶ್ರೀಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಶ್ರೀ ಅಭಿಮತ
ರಾಯಚೂರು: ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಧರ್ಮಪ್ರಜ್ಞೆ ಅಗತ್ಯ. ಸಂಸ್ಕೃತಿ, ಸಂಸ್ಕಾರ, ಪರಂಪರೆ ಆದರ್ಶಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆಯಿದೆ. ಜನಸಮುದಾಯದಲ್ಲಿ ಸತ್ಯಶುದ್ಧ ಜೀವನ, ಕಾಯಕ ನಿಷ್ಠೆ, ದೇಶಾಭಿಮಾನ ಬೆಳೆಸುವ ಜವಾಬ್ದಾರಿ ಮಠಗಳ ಮೇಲಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಸುಲ್ತಾನಪುರ ಸಂಸ್ಥಾನ ಬೃಹನ್ಮಠದ ಶ್ರೀಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭೌತಿಕ ಬದುಕು ಶ್ರೀಮಂತಗೊಂಡರೆ ಸಾಲದು. ಆಂತರಿಕ ಬದುಕು ಬಲಗೊಳ್ಳುವ ಅಗತ್ಯವಿದೆ. ಅಂತರಂಗ ಬಹಿರಂಗ ಶುದ್ಧಿಯೇ ವೀರಶೈವ ಧರ್ಮದ ಗುರಿ ಎಂದು ಹೇಳಿದರು.
ಧರ್ಮಸೂತ್ರ: ಜ್ಞಾನ ಕರ್ಮಗಳ ಜತೆಗೆ ಸಾಮಾಜಿಕ ಸಂವೇದನಾಶೀಲ ಭಾವನೆಗಳನ್ನು ಬೆಳೆಸುವುದು ವೀರಶೈವ ಧರ್ಮದ ಗುರಿ. ಆಚಾರ್ಯ ಶ್ರೇಷ್ಠರಾದ ಜಗದ್ಗುರು ರೇಣುಕಾಚಾರ್ಯರು ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯ, ಕ್ಷಮಾ, ದಾನ, ಪೂಜಾ, ಜಪ, ಧ್ಯಾನ ಎಂಬ ದಶವಿಧ ಧರ್ಮಸೂತ್ರ ಬೋಧಿಸಿ ಬೆಳಕು ಬೀರಿದ್ದಾರೆಂದರು.
ಸುಲ್ತಾನಪುರ ಸಂಸ್ಥಾನ ಬೃಹನ್ಮಠ ಬಾಳೆಹೊನ್ನೂರು ರಂಭಾಪುರೀ ಪೀಠದ ಶಾಖಾಮಠವಾಗಿದೆ. ಈ ಶ್ರೀಮಠಕ್ಕೆ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮಿಗಳವರಿಗೆ ಪಟ್ಟಾಧಿಕಾರ ಅನುಗ್ರಹಿಸಿ ಆಶೀರ್ವದಿಸಲಾಗಿದೆ. ನೂತನ ಶ್ರೀಗಳ ಕಾಲದಲ್ಲಿ ಶ್ರೀಮಠ ಅಭಿವೃದ್ಧಿಯಾಗಿ ಭಕ್ತರಿಗೆ ಕಲ್ಯಾಣವಾಗಲೆಂದು ಹಾರೈಸಿದರು.
ಬ್ರಹ್ಮೋಪದೇಶ: ಗಬ್ಬೂರು ಬೂದಿಬಸವೇಶ್ವರ ಸಂಸ್ಥಾನ ಮಠದ ಶ್ರೀ ಬೂದಿಬಸವ ಶಿವಾಚಾರ್ಯರ ನೇತೃತ್ವದಲ್ಲಿ ರಾಯಚೂರು ಕಿಲ್ಲೇ ಸಂಸ್ಥಾನ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ನೂತನ ಶ್ರೀಗಳಿಗೆ ಷಟ್‌ಸ್ಥಲ ಬ್ರಹ್ಮೋಪದೇಶ ನೀಡಿ ಗುರುತ್ವಾಧಿಕಾರ ಅನುಗ್ರಹಿಸಿದರು.
ಬಾಳೆಹೊನ್ನೂರು ಶ್ರೀ ರಂಭಾಪುರೀ ಜಗದ್ಗುರುಗಳು ನೂತನ ಶ್ರೀಗಳಿಗೆ ಶ್ರೀ ಷ.ಬ್ರ. ಶಂಭು ಸೋಮನಾಥ ಶಿವಾಚಾರ್ಯ ಸ್ವಾಮಿ ಎಂಬ ನೂತನ ಅಭಿದಾನವನ್ನಿತ್ತು ದಂಡಕಮಂಡಲ ಪಂಚಮುದ್ರೆ ನೀಡಿ, ಆಶೀರ್ವದಿಸಿದರು. ದೇವದುರ್ಗ ಶಾಸಕ ಎ.ವೆಂಕಟೇಶ ನಾಯಕ ಸಮಾರಂಭ ಉದ್ಘಾಟಿಸಿದರು.
ಈ ಧರ್ಮ ಸಮಾರಂಭದಲ್ಲಿ ಹಲವಾರು ಮಠಾಧೀಶರು, ಗಣ್ಯರು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡಿದ್ದರು. ಸಮಾರಂಭದ ನಂತರ ನೂತನ ಶ್ರೀಗಳವರ ಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು.