ವಚನಗಳ ಸಾರ ಅಳವಡಿಕೆಯಿಂದ ಉತ್ತಮ ಸಮಾಜ
ರಾಯಚೂರು: ದಿಕ್ಕು ತಪ್ಪಿದ ಸಮಾಜದಲ್ಲಿ ಬಸವಣ್ಣನವರ ಹಾಗೂ ಶರಣರ ವಚನಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದ ವೀರಶೈವ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ವೀರಶೈವ ಸಮಾಜ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವೀಯ ಮೌಲ್ಯಗಳ ಕುಸಿತ ಹಾಗೂ ಶರಣರ ಸಾಹಿತ್ಯದ ಅರಿವಿನ ಕೊರತೆ ಸಮಾಜದಲ್ಲಿ ಅನಾಚಾರಕ್ಕೆ ದಾರಿ ಮಾಡಿದೆ. ಅನಾಚಾರ, ದುರ್ಮಾರ್ಗದಲ್ಲಿ ಸಾಗುತ್ತಿರುವ ಸಮಾಜವನ್ನು ಕಾನೂನಿನ ಮೂಲಕ ತಿದ್ದುವುದು ಕಷ್ಟಸಾಧ್ಯ. ಸಮಾಜದ ಪ್ರತಿಯೊಬ್ಬರು ಶರಣರ, ಸಾಧು ಸಂತರ ಆದರ್ಶ ಮೈಗೂಡಿಸಿಕೊಂಡಾಗ ಶಿಷ್ಟಾಚಾರ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಚನ ರಚನೆ: ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ 12ನೇ ಶತಮಾನದಲ್ಲಿಯೇ ಸಮಾನತೆ ಸಾಧಿಸಿದ ಮಹಾನ್ ಮಾನವತವಾದಿ ಬಸವಣ್ಣನವರು, ಜಾತಿ, ಅಸಮಾನತೆ, ಅಸ್ಪಶ್ಯತೆ, ಲಿಂಗಬೇಧ ನಿವಾರಣೆಗೆ ಹೋರಾಡಿದವರಾಗಿದ್ದಾರೆ.
ಬಿಜ್ಜಳ ಅರಸನ ಆಡಳಿತದಲ್ಲಿ ಮಂತ್ರಿಯಾಗಿದ್ದು, ಅನುಭವ ಮಂಟಪದಲ್ಲಿ ಸರ್ವರನ್ನೂ ಒಗ್ಗೂಡಿಸುವ ಕೆಲಸ ಮಾಡಿದ ಅವರು, ಸಮಾಜದ ಕೊಳೆ ತೊಳೆಯಲು ಸರಳ ಭಾಷೆಯಲ್ಲಿ ವಚನ ರಚಿಸಿದ್ದಾರೆ. ಅವರ ವಚನಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನ ನೀಡುವ ತತ್ವಗಳಾಗಿವೆ ಎಂದು ಹೇಳಿದರು.
ಜಾತಿ ಭೂತ: ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎಂ.ಎನ್. ನಾಗರಾಜ ಮಾತನಾಡಿ, ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದ್ದು, ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ ಅಪ್ರತಿಮ ಸಾಧನೆ ಮಾಡಿದ್ದರೂ, ಜಾತಿ ಭೂತ ದೂರವಾಗಿಲ್ಲ ಎಂದು ವಿಷಾದಿಸಿದರು. ಬಸವಣ್ಣ ಜಯಂತಿ ಕೇವಲ ಅವರ ನೆನಪಿಗೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶವನ್ನು ಪ್ರತಿಯೊಬ್ಬರೂ ಆಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ವಿಜಯ ಜೋತ್ಸ್ನಾ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎನ್. ಶಂಕ್ರಪ್ಪ ಮಾತನಾಡಿದರು. ಚೌಕಿಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮೊದಲು ಬಸವೇಶ್ವರರ ಪುತ್ಥಳಿಗೆ ಜಿಲ್ಲಾಧಿಕಾರಿ ಮಾಲಾರ್ಪಣೆ ಮಾಡುವ ಮೂಲಕ ಪ್ರಮುಖರು ಗೌರವ ಸಲ್ಲಿಸಿದರು.
ವೀರಶೈವ ಸಮಾಜದ ಮುಖಂಡ ವಿ. ಬಸವರಾಜಪ್ಪ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕಿ ರೇಖಾ ಪಾಟೀಲ್, ನಗರಸಭೆ ಪೌರಾಯುಕ್ತ ವೆಂಕಟೇಶ, ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ವೀರಶೈವ ಸಮಾಜದ ಮುಖಂಡರಾದ ಗಿರಿಜಾ ಶಂಕರ್, ಅಮರೇಶ ಪಾಟೀಲ್ ಬಲ್ಲಟಗಿ, ರಾಜೇಂದ್ರ ಪಾಟೀಲ್, ದಾನಮ್ಮ ಸುಭಾಷಚಂದ್ರ, ಸಿ.ಡಿ. ಪಾಟೀಲ್ ಸೇರಿ ಅನೇಕರಿದ್ದರು.