ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇನ್ನೂ ಸಿಗದ ಶುದ್ಧ ಕುಡಿವ ನೀರು

Rashmi Kasaragodu
Updated On : 4 May 2014, 3:00 am

ಅಮರೇಶಸ್ವಾಮಿ ಬಲ್ಲಟಗಿ
ಕ.ಪ್ರ. ವಾರ್ತೆ    ಲಿಂಗಸ್ಗೂರು    ಮೇ 3
ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್ ಅಂಶವುಳ್ಳ ಹಳ್ಳಿಗಳನ್ನು ಗುರುತಿಸಿ ಆಧುನಿಕ ತಂತ್ರಜ್ಞಾನ ಬಳಸಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಹುತೇಕ ಗ್ರಾಮಸ್ಥರಿಗೆ ಗಗನಕುಸುಮವಾಗಿದೆ.
ಅಂತರ್ಜಲದಲ್ಲಿ ಫ್ಲೋರೈಡ್, ಆರ್ಸೆನಿಕ್ ಹಾಗೂ ನೈಟ್ರೇಟ್ ಅಂಶವುಳ್ಳ 24 ಗ್ರಾಮಗಳನ್ನು ಗುರುತಿಸಿ ಆಧುನಿಕ ತಂತ್ರಜ್ಞಾನ ಬಳಸಿ ಫಿಲ್ಟರೇಷನ್, ಓಜೋನೈಜೇಷನ್, ಪ್ಯೂರಿಫೈಡ್ ಟೆಕ್ನಾಲಜಿ ಬಳಸಿ ಶುದ್ಧ ಕುಡಿವ ನೀರು ಪೂರೈಸುವ ಉದ್ದೇಶದಿಂದ ರಾಜ್ಯ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯು ಹೈದ್ರಾಬಾದ್ ಮೂಲದ ಸ್ಮಾರ್ಟ್ ಕಮ್ಯುನಿಟಿ ವಾಟರ್ ಸೆಂಟರ್‌ಗೆ 10 ವರ್ಷಗಳ ಜವಾಬ್ದಾರಿ ವಹಿಸಿತು.
ಈ ಯೋಜನೆ ವ್ಯಾಪ್ತಿಯ ಹಳ್ಳಿಗಳ ಜನರು ಶುದ್ಧ ಕುಡಿವ ನೀರು ಪಡೆಯಲು ಪ್ರತಿ ಲೀಟರ್‌ಗೆ 20 ಪೈಸೆಯಂತೆ 3 ವರ್ಷಗಳವರೆಗೆ, ನಂತರ ಪ್ರತಿ ಲೀಟರ್‌ಗೆ 30 ಪೈಸೆಯಂತೆ 3 ವರ್ಷಗಳವರೆಗೆ ಹಾಗೂ ಮೂರನೇ ಹಂತದಲ್ಲಿ ಪ್ರತಿ ಲೀಟರ್‌ಗೆ 30 ಪೈಸೆಯಂತೆ 4 ವರ್ಷಗಳವರೆಗೆ ನೀಡಬೇಕೆಂದು ಸೂಚಿಸಲಾಗಿತ್ತು.
24 ಗ್ರಾಮಗಳ ಆಯ್ಕೆ: ತಾಲೂಕಿನ ಗೋನವಾರ, ಗುರುಗುಂಟಾ, ಯಲಗಟ್ಟ, ಮೆದಿಕಿನಾಳ, ಗೆಜ್ಜಲಗಟ್ಟಾ, ಬುದ್ದಿನ್ನಿ, ಕಾಟಗಲ್, ಸಾನಬಾಳ, ನಿಲೋಗಲ್, ವೆಂಕಟಾಪುರ, ನಂದಿಹಾಳ, ಕುಪ್ಪಿಗುಡ್ಡ, ಶೀಲಹಳ್ಳಿ, ಮೇದಿನಾಪುರ, ಹುನಕುಂಟಿ, ಪಿಕಳಿಹಾಳ, ಮುದಬಾಳ, ಹಟ್ಟಿಹೊಸೂರು, ಛತ್ತರ, ಕುಮಾರಖೇಡ ಸೇರಿದಂತೆ ಒಟ್ಟು 24 ಹಳ್ಳಿಗಳನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ಬರುವ ಹಳ್ಳಿಗಳ ಆಯಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಭೆ ನಡೆಸಿ ಜಲಶುದ್ಧೀಕರಣ ಘಟಕ ಸ್ಥಾಪನೆಗೆ ಜಾಗ ಹಾಗೂ ಅಂತರ್ಜಲದ ಮೋಟಾರ್ ಪಂಪ್, ವಿದ್ಯುತ್ ಪೂರೈಕೆ ಮಾಡುವ ಜವಾಬ್ದಾರಿ ನೀಡಿ ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ಘಟಕಗಳ ಮೂಲಕ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿತ್ತು.
ಹಟ್ಟಿ ಚಿನ್ನದ ಗಣಿ ಸುತ್ತಲಿನ 20 ಕಿಮೀ ಅಂತರದ ಗ್ರಾಮಗಳಲ್ಲಿ ಆರ್ಸೆನಿಕ್ ಸಮಸ್ಯೆ ಉದ್ಭವಿಸಿದೆ ಎಂದು ಭೂ ವಿಜ್ಞಾನಿ ಡಾ. ಸಾಹುಕಾರ ಹಾಗೂ ಡಾ. ಸುದರ್ಶನ್‌ರವರು 2013 ಜುಲೈನಲ್ಲಿ ವರದಿ ನೀಡಿತ್ತು. ಇದರನ್ವಯ ತಾಲೂಕಿನಲ್ಲಿ ಅಂತಹ ಹಳ್ಳಿಗಳನ್ನು ಗುರುತಿಸಿ 6- 12 ಲಕ್ಷದವರೆಗೆ ಘಟಕಕ್ಕೆ ಖರ್ಚು ಮಾಡಲು ನಿರ್ಧರಿಸಲಾಗಿತ್ತು.
ಕೆಲವೇ ಗ್ರಾಮಕ್ಕೆ ನೀರು: ಖಾಸಗಿ ಕಂಪನಿ ಹೈದ್ರಾಬಾದ್ ಮೂಲದ ಸ್ಮಾರ್ಟ್ ಅಕ್ವಾಟೆಕ್ನಾಲಜೀಸ್ ಪ್ರೈ.ಲಿ. ಸಂಸ್ಥೆಯ 24 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಜಿಪಂ ಎಂಜಿನಿಯರಿಂಗ್ ಉಪವಿಭಾಗ ಹಾಗೂ ಭೂಸೇನಾ ನಿಗಮ ಕುಡಿವ ನೀರಿನ ಘಟಕ ಸ್ಥಾಪಿಸಲು ಕಳೆದ ಎರಡು ವರ್ಷದಿಂದ ಹೆಣಗಾಡುತ್ತಿದ್ದರೂ ಕೆಲವೇ ಕೆಲವು ಗ್ರಾಮಗಳಿಗೆ ಮಾತ್ರ ನೀರು ಪೂರೈಸಲು ಸಾಧ್ಯವಾಗಿದೆ.
ಸ್ಮಾರ್ಟ್ ಕಮ್ಯುನಿಟಿ ವಾಟರ್ ಸೆಂಟರ್ ಮುದಬಾಳ, ಬುದ್ದಿನ್ನಿ, ಸಾನಬಾಳ, ಗೆಜ್ಜಲಗಟ್ಟಾ, ವೀರಾಪುರ, ನಿಲೋಗಲ್, ಮೆದಿಕಿನಾಳ, ಮಸ್ಕಿ, ಹುನಕುಂಟಿ, ಗೋನವಾರ, ಬಸಾಪುರ, ಶೀಳಹಳ್ಳಿ ಗ್ರಾಮಗಳಲ್ಲಿ ಯೋಜನೆ ಪೂರ್ಣಗೊಳಿಸಿದ್ದು, ಕಾಟಗಲ್, ಆನ್ವರಿ, ಆದಾಪುರ ಗ್ರಾಮಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಬಯ್ಯಾಪುರ, ಹಟ್ಟಿಯಲ್ಲಿ ಜಾಗದ ಕೊರತೆಯಿಂದ ನೀರು ಪೂರೈಕೆ ಮಾಡಲಾಗುತ್ತಿಲ್ಲ.
ವಿದ್ಯುತ್ ಸಂಪರ್ಕ ಕೊರತೆ: ಒಂದೆಡೆ ಗ್ರಾಮಸ್ಥರು ಜಾಗ ನೀಡಲು ಮುಂದೆ ಬರಲು ಹಿಂದೇಟು ಹಾಕುತ್ತಿರುವುದು, ಮತ್ತೊಂದೆಡೆ ಕುಡಿವ ನೀರಿನ ಅಂತರ್ಜಲ ಕೊರತೆಯಿಂದ ಹಾಗೂ ಘಟಕ ಕೆಲಸ ಪೂರ್ಣಗೊಂಡರೂ ವಿದ್ಯುತ್ ಸಂಪರ್ಕ ಕೊರತೆಯಿಂದ ಶುದ್ಧ ಕುಡಿವ ನೀರಿನ ಘಟಕಗಳು ಕಾರ್ಯಾರಂಭ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ರಾಜ್ಯ ಸರ್ಕಾರ ಅಂತರ್ಜಲದಲ್ಲಿ ಫ್ಲೋರೈಡ್, ಆರ್ಸೆನಿಕ್ ಹಾಗೂ ನೈಟ್ರೇಟ್ ಅಂಶವುಳ್ಳ 24 ಗ್ರಾಮಗಳನ್ನು ಗುರುತಿಸಿ ಆಧುನಿಕ ತಂತ್ರಜ್ಞಾನ ಬಳಸಿ ಶುದ್ಧ ಕುಡಿವ ನೀರು ಘಟಕ ಸ್ಥಾಪಿಸುವ ಉದ್ದೇಶಿತ ಯೋಜನೆ ವಿಳಂಬ ಮಾಡದೆ ಯೋಜನೆ ವ್ಯಾಪ್ತಿಯ ಹಳ್ಳಿಗಳ ಜನರಿಗೆ ಶುದ್ಧ ನೀರು ಪೂರೈಕೆ ಮಾಡಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.



ಕೆಲವೆಡೆ ಕಾಮಗಾರಿ ಆರಂಭವಿಲ್ಲ

ಜಿಪಂ ಎಂಜಿನಿಯರಿಂಗ್ ಉಪವಿಭಾಗದಿಂದ ವೆಂಕಟಾಪುರ, ಮೆದಿಕಿನಾಳ, ನಾಗಲಾಪುರಗಳಲ್ಲಿ ಘಟಕ ಕಾರ್ಯ ಪೂರ್ಣಗೊಳಿಸಿದ್ದು, ಕೋಮಲಾಪುರ, ಗೌಡೂರು, ಕುಮಾರಖೇಡ, ಛತ್ತರ ಗ್ರಾಮಗಳಲ್ಲಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಜಾಗೀರನಂದಿಹಾಳ, ದೇವರಭೂಪುರ, ಗುರುಗುಂಟಾ, ಹೊನ್ನಳ್ಳಿ, ಪಿಕಳಿಹಾಳ ಗ್ರಾಮಗಳಲ್ಲಿ ಜಾಗದ ಕೊರತೆಯಿಂದ ಕೆಲಸ ಆರಂಭಿಸಲಾಗಿಲ್ಲ. ಭೂಸೇನಾ ನಿಗಮದಿಂದ 7 ಗ್ರಾಮಗಳಲ್ಲಿ ಘಟಕ ಪ್ರಾರಂಭಿಸುವ ಗುರಿ ಹೊಂದಲಾಗಿದ್ದು, ಇದುವರೆಗೂ ಎಂದೇ ಒಂದು ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗಿಲ್ಲ. ತೀರ್ಥಭಾವಿ, ಅಂತರಗಂಗಿ, ಬುದ್ದಿನ್ನಿ, ಹಲ್ಕಾವಟಗಿ, ನವಲಿ, ಮಲ್ಲಾಪುರ, ಕಿಲಾರಹಟ್ಟಿ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement