ಕೃವಿವಿ ಹಂಗಾಮಿ ನೌಕರರ ಉಪವಾಸ ಧರಣಿ ಆರಂಭ
ರಾಯಚೂರು: ಕಳೆದ ಕೆಲ ದಿನಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇವಾ ಭದ್ರತೆ ಹಾಗೂ ಹೊರಗುತ್ತಿಗೆ ರದ್ದತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಕೃಷಿ ವಿವಿ ಹಂಗಾಮಿ ನೌಕರರ ಸಂಘದ ಕಾರ್ಮಿಕರು ಕೃಷಿ ವಿವಿ ನಿರ್ಲಕ್ಷ್ಯ ಖಂಡಿಸಿ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಕಳೆದ 11 ದಿನಗಳಿಂದ ಧರಣಿ ಹಾಗೂ ಕಾರ್ಮಿಕರ ದಿನಾಚರಣೆಯನ್ನು 'ಸಂಘರ್ಷ ದಿನಾಚರಣೆ'ಯಾಗಿ ಆಚರಿಸಿದರೂ ಕೃಷಿ ವಿವಿ ಬೇಡಿಕೆಗಳಿಗೆ ಮನ್ನಣೆ ನೀಡದಿದ್ದರಿಂದ ಹೋರಾಟ ಚುರುಕುಗೊಳಿಸಲು ನಿರ್ಧರಿಸಿರುವ ಕಾರ್ಮಿಕರು ಉಪವಾಸ ಧರಣಿಗೆ ಮುಂದಾಗಿದ್ದಾರೆ.
ಪ್ರತಿ 48 ಗಳಿಗೊಮ್ಮೆ 10 ಜನರಂತೆ ಸರದಿ ಉಪವಾಸ ಧರಣಿ ಆರಂಭಿಸಿದ್ದು, ಧರಣಿಯ ಮೊದಲ ದಿನವಾದ ಶನಿವಾರ ಈರಮ್ಮ, ಮಾಣಿಕಮ್ಮ, ಗಂಗಮ್ಮ, ಜಯಮ್ಮ, ತಾಯಮ್ಮ, ತಿಮ್ಮಾರೆಡ್ಡಿ, ಯಂಕಮ್ಮ, ಜಂಗ್ಲಪ್ಪ, ಗೋವಿಂದ, ವೆಂಕಟೇಶ ಉಪವಾಸ ನಡೆಸಿದರು.
ವಿವಿಯಲ್ಲಿ ಯಾವುದೇ ಸೌಲಭ್ಯವಿಲ್ಲದೆ 828 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಸೇವಾ ಭದ್ರತೆಗೆ ಒತ್ತಾಯಿಸಿದ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿ ಹೊರಗುತ್ತಿಗೆ ನೀಡಲು ವಿವಿ ಆಡಳಿತ ಟೆಂಡರ್ ಕರೆದಿದೆ. ಹಲವು ವರ್ಷಗಳಿಂದ ಹಾಜರಿ ಪುಸ್ತಕ, ವೇತನ ಚೀಟಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡದೆ ಕಾರ್ಮಿಕರ ಶೋಷಣೆ ಮಾಡಲಾಗುತ್ತಿದ್ದು, ಸೌಲಭ್ಯ ನೀಡುವಂತೆ ಕೇಳಿದ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಸೇವಾ ಭದ್ರತೆ, ದಾಖಲೆ ಪುಸ್ತಕ ನಿರ್ವಹಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದು, ನಿರ್ಲಕ್ಷ್ಯ ಮುಂದುವರಿದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ, ಅಧ್ಯಕ್ಷ ಟಿ. ಬಸವರಾಜ ಯಾದವ್, ಮುಖಂಡರಾದ ಪಿ. ಈಶಪ್ಪ, ಪ್ರಭುರಾಯ, ಭೀಮಪ್ಪ ದಾದಾಸ್ ಸೇರಿ ಅನೇಕರಿದ್ದರು.