ಬಾಬಾ ರಾಮದೇವ್ ಬಂಧನಕ್ಕೆ ಆಗ್ರಹ
ಲಿಂಗಸ್ಗೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ದಲಿತರ ಮನೆಗೆ ಪಿಕ್ನಿಕ್, ಹನಿಮೂನ್ಗೆ ಹೋಗುತ್ತಾರೆಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಾಬಾ ರಾಮದೇವ್ರನ್ನು ಕೂಡಲೇ ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಕುರಿತು ಸಮಿತಿ ಮುಖಂಡರಾದ ಚಂದ್ರಕಾಂತ, ಸಂಜಯ ಗೋಸಲೆ, ದೇವಿಂದ್ರ, ರಮೇಶ, ಮಾರುತಿ ಹೊಸಮನಿ ಪತ್ರಿಕಾ ಪ್ರಕಟಣೆ ನೀಡಿ, ಸ್ವಾಭಿಮಾನದಿಂದ ಬದುಕುವ ದಲಿತರು ದೇಶದ ಬೆನ್ನೆಲಬು, ಮಹಾತ್ಮ ಗಾಂಧಿಜೀ ಅವರು ದಲಿತರನ್ನು ದೇವರ ಮಕ್ಕಳೆಂದು ಬಣ್ಣಿಸಿದ್ದಾರೆ. ಆದರೆ ರಾಮದೇವ್ ಅವರ ಇಂತಹ ಹೇಳಿಕೆಯಿಂದ ದಲಿತರಿಗೆ ನೋವು ಉಂಟು ಮಾಡಿದೆ. ಜನರಿಗೆ ಯೋಗ ಹೇಳಿ ಕೊಡುವುದು ಬಿಟ್ಟು ಭೋಗದ ಆಸೆಗೆ ರಾಜಕೀಯಕ್ಕೆ ಬಂದು ಇಂತಹ ಅವಹೇಳನಕಾರಿ ಹೇಳಿಕೆ ನೀಡಿ ಶಾಂತಿ ಕದಡಿದ್ದಾರೆ. ಕೂಡಲೇ ರಾಮದೇವ್ರನ್ನು ಬಂಧಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಶ್ವಮಾನವ ಬಸವಣ್ಣ: ಐ.ಆರ್. ಮಠಪತಿ
ಸಿಂಧನೂರು: ಬದುಕನ್ನು ಕಟ್ಟಿಕೊಳ್ಳಲು ಬಾರದ ಕೆಳವರ್ಗದವರಿಗೆ ಬದುಕನ್ನು ಕಟ್ಟಿಕೊಟ್ಟು, ಸಮಾನತೆ ಸಾರಿದ ಬಸವಣ್ಣ ಸಮ ಸಮಾಜಕ್ಕಾಗಿ ಹೋರಾಡಿದ ವಿಶ್ವಮಾನವ ಎಂದು ಬೆಳಗಾಂ ಬಸವ ಕೇಂದ್ರದ ಮಾಜಿ ಅಧ್ಯಕ್ಷ ಐ.ಆರ್. ಮಠಪತಿ ಹೇಳಿದರು. ಬಸವ ಜಯಂತಿ ನಿಮಿತ್ತ ಬಸವ ಕೇಂದ್ರ, ಯುವ ಬಸವ ಕೇಂದ್ರ, ಮಹಿಳಾ ಬಸವಕೇಂದ್ರ ಹಾಗೂ ಅಕ್ಕನ ಬಳಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ರಾತ್ರಿ ಆರ್ಜಿಎಂ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜಾತಿ ನಿರ್ಮೂಲನಾ ಚಳುವಳಿ ರಾಜ್ಯ ಸಂಚಾಲಕ ಎಚ್.ಎನ್.ಬಡಿಗೇರ್ ಮಾತನಾಡಿದರು. ಕಾರ್ಯಕ್ರಮವನ್ನು ಖ್ಯಾತ ರಂಗಭೂಮಿ ಕಲಾವಿದ ಹುಸೇನಪ್ಪ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ನಾಗಭೂಷಣ ನವಲಿ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನ: ಸಿಂಧನೂರಿನ ಮಕ್ಕಳ ತಜ್ಞ ಡಾ.ಕೆ. ಶಿವರಾಜ ಅಮೇರಿಕದ ಪ್ರತಿಷ್ಠಿತ ಬೂಸ್ಟಾನ್ ವಿಶ್ವವಿದ್ಯಾಲಯದ ಮಕ್ಕಳ ಪೌಷ್ಠಿಕತೆಯ ಸ್ನಾತಕೋತ್ತರ ಪದವಿಗೆ ಆಯ್ಕೆಯಾಗಿದ್ದರಿಂದ ಬಸವ ಕೇಂದ್ರದಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ಕೆ. ಶಿವರಾಜ ಮಾತನಾಡಿದರು.