ಸೊಸೈಟಿ ಚುನಾವಣೆ ಪ್ರಕ್ರಿಯೆಗೆ ತಡೆ: ಜಿಲ್ಲಾಧಿಕಾರಿ ಆದೇಶ
ರಾಯಚೂರು: ನಗರದ ನ್ಯೂ ಎಜ್ಯುಕೇಷನ್ ಸೊಸೈಟಿಯ ಪದಾಧಿಕಾರಿಗಳ ಆಯ್ಕೆಗೆ ಮೇ 4 ರಂದು ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ಒಂದು ತಿಂಗಳು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಅವರು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ನೂರ್ ಅಹ್ಮದ್ ಸೇರಿ ಅನೇಕರು ತಕರಾರು ವ್ಯಕ್ತಪಡಿಸಿದ್ದು, ನಿಯಮಾವಳಿಯಂತೆ ಚುನಾವಣೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ತಕರಾರು ವ್ಯಕ್ತವಾಗಿದ್ದು, ಈ ಸಂದರ್ಭದಲ್ಲಿ ಚುನಾವಣೆ ನಡೆಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂಬ ಅನುಮಾನದ ಹಿನ್ನೆಲೆ ಚುನಾವಣೆ ಪ್ರಕ್ರಿಯೆಯನ್ನು 1 ತಿಂಗಳ ಮಟ್ಟಿಗೆ ಸ್ಥಗಿತಗೊಳಿಸುವಂತೆ ಚುನಾವಣಾಧಿಕಾರಿ ಬಸಪ್ಪ ಗೋಪಿಶೆಟ್ಟಿಗೆ ಸೂಚಿಸಿದ್ದಾರೆ.
ನ್ಯೂ ಎಜುಕೇಷನ್ ಸೊಸೈಟಿ ಬಗ್ಗೆ ಸುಳ್ಳು ಮಾಹಿತಿ: ಸಿದ್ದಿಖಿ
ರಾಯಚೂರು: ನಗರದ ನ್ಯೂ ಎಜುಕೇಷನ್ ಸೊಸೈಟಿಯ ಪದಾಧಿಕಾರಿಗಳ ಆಯ್ಕೆ ಸಂಬಂಧಿ ಚುನಾವಣೆ ವಿಚಾರದಲ್ಲಿ ಜೆಡಿಯು ಪಕ್ಷದ ಮುಖಂಡ ನೂರ್ ಮಹ್ಮದ್ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆಂದು ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಖಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ, ಹಾಲಿ ನ್ಯೂ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಸೈಯದ್ ತಾಜುದ್ದೀನ್ ಅವರು ಸರ್ಕಾರಿ ನೌಕರರಾಗಿದ್ದು, ಚುನಾವಣೆಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾ.18ರಂದು ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಾಲಿ ಅಧ್ಯಕ್ಷ ಸೇರಿ ಇತರರು ಚುನಾವಣೆಯ ಕಡತಗಳನ್ನು ಕಳವು ಮಾಡಿದ್ದು, ಈ ಬಗ್ಗೆ ದೂರು ದಾಖಲಿಸಿದಾಗ ಪೊಲೀಸರು ಕಡತಗಳನ್ನು ವಶಪಡಿಸಿಕೊಂಡು ಚುನಾವಣಾಧಿಕಾರಿಗಳಿಗೆ ಮರಳಿಸಿದ್ದಾರೆ. ಹಾಗೆಯೇ ಮಾ.26ರಂದು ಜಿಲ್ಲಾಧಿಕಾರಿ ಲೋಕಸಭೆ ಚುನಾವಣೆ ನಂತರ ಜಿಲ್ಲಾ ನೋಂದಣಾಧಿಕಾರಿಗಳ ಅನುಮತಿ ಪಡೆದು ನ್ಯೂ ಎಜುಕೇಷನ್ ಸೊಸೈಟಿಗೆ ಚುನಾವಣೆ ನಡೆಸಲು ಸೂಚಿಸಿದ್ದರಿಂದ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ನೋಂದಣಾಧಿಕಾರಿಗಳು ಸದ್ಯದ ಗೊಂದಲಕ್ಕೆ ಸಂಬಂಧಿಸಿ ನೋಟಿಸ್ ಜಾರಿ ಮಾಡಿದ್ದರು. ಆ ನೋಟಿಸ್ಗೆ ಸೊಸೈಟಿಯು ಉತ್ತರ ನೀಡಿದ ನಂತರವೇ ಚುನಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಸೊಸೈಟಿಯ ಅಡಿ ನಾಲ್ಕೈದು ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಯಾರದೇ ಸ್ವಂತ ಖಾತೆಗೆ ಸಂಗ್ರಹವಾಗುವ ಹಣ ಸೇರುತ್ತಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಎಬ್ಬಿಸಲಾಗಿದೆ ಎಂದು ದೂರಿದರು.
ಸಂಸ್ಥೆಯ ವಿರುದ್ಧ ಜೆಡಿಯು ಮುಖಂಡ ನೂರ್ ಮಹಮ್ಮದ್ ಅನಗತ್ಯ ಆರೋಪ ಮಾಡುವುದು ಬಿಟ್ಟು ಸಮಾಜದ ಅಭಿವೃದ್ಧಿಯೆಡೆಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ