ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಪಾಯ ಕಾದಿದ್ದರೂ ಕಣ್ದೆರೆಯದ ಜೆಸ್ಕಾಂ

Rashmi Kasaragodu
Updated On : 5 May 2014, 12:47 pm

ಕ.ಪ್ರ. ವಾರ್ತೆ    ಆಳಂದ    ಮೇ 4
ತಾಲೂಕಿನಲ್ಲಿ ಇತ್ತೀಚೆಗೆ ಆಗಾಗ ಸುರಿದ ಮಳೆ, ಬಿರುಗಾಳಿಗೆ ವಿದ್ಯುತ್ ಕಂಬಗಳು ಬಾಗಿ ನಿಂತು ಸಂಚಾರಕ್ಕೆ ಅಡಚಣೆ ತಂದಿವೆ. ಅಲ್ಲದೆ ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡುವುದೋ ಎಂದು ಆತಂಕದಲ್ಲಿ ಸಂಚರಿಸುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಶನಿವಾರ ಬೀಸಿದ ಬಿರುಗಾಳಿಯಿಂದ ಕಂಬವು ಬಾಗಿ ಸಾರ್ವಜನಿಕರಿಗೆ ಭಯವನ್ನುಂಟು ಮಾಡಿದೆ.
ಜೆಸ್ಕಾಂ ನಿರ್ಲಕ್ಷ್ಯ: ಕಳೆದ ಒಂದು ವಾರದಿಂದ ಕಡಗಂಚಿಯಲ್ಲಿ ಬಿರುಗಾಳಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳು ನೆಲಕಚ್ಚಿವೆ. ಬಸ್ ನಿಲ್ದಾಣದಿಂದ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಹಳೆಯ ನೀರಿನ ಟ್ಯಾಂಕಿನ ಹತ್ತಿರ ವಿದ್ಯುತ್ ಕಂಬ ಕುಸಿದು ಅಪಾಯದ ಮಟ್ಟದಲ್ಲಿ ನಿಂತಿದೆ. ಜಿಪಂ ಸದಸ್ಯರ ಮನೆ ಪಕ್ಕದಲ್ಲಿ ಈ ಅವಘಡ ನಡೆದಿದೆ. ಆದರೆ ಗ್ರಾಮದಲ್ಲಿರುವ ಜೆಸ್ಕಾಂ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
1961ರಲ್ಲಿ ಕಡಗಂಚಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಕಬ್ಬಿಣದ ಕಂಬಗಳನ್ನು ಅಳವಡಿಸಲಾಗಿತ್ತು. ಈಗ ಅವು ಅಪಾಯದ ಸ್ಥಿತಿಯಲ್ಲಿವೆ. ನೆಲದಲ್ಲಿ ತಮ್ಮ ಸತ್ವ ಕಳೆದುಕೊಂಡಿವೆ. ಹೀಗಾಗಿ ಯಾವ ವೇಳೆಯಲ್ಲಿ ಈ ವಿದ್ಯುತ್ ಕಂಬಗಳು ಕುಸಿದು ಬೀಳುತ್ತವೆಯೋ ಎಂಬ ಆತಂಕ ಕಾಡುತ್ತಿದೆ.
ಅಪಾಯದ ತೂಗುಗತ್ತಿ: ರಸ್ತೆಯ ಮೇಲ್ಭಾಗದಲ್ಲಿ ಬಾಗಿ ನಿಂತ ಕಂಬದ ಕೆಳಗಡೆಯಿಂದಲೇ ವಾಹನಗಳು ಸಂಚರಿಸುತ್ತವೆ. ಭಾರಿ ಗಾತ್ರದ ವಾಹನಗಳು ಸಂಚರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಅಪಾಯದ ಸ್ಥಿತಿಯಲ್ಲಿ ಕಂಬದ ಪಕ್ಕದಲ್ಲಿಯೇ ವಾಹನಗಳನ್ನು ತಿರುಗಿಸಿಕೊಂಡು ಹೋಗಬೇಕಾಗುತ್ತದೆ.
ಕಡಗಂಚಿ ತಾಂಡಾದಲ್ಲಿ ಟ್ರಾನ್ಸ್‌ಫಾರ್ಮರ್ ಮಳೆ ಬಿರುಗಾಳಿಗೆ ಕುಸಿದು ಬಿದ್ದಿದೆ. ರೈತರ ಹೊಲಗಳಲ್ಲಿ ಅನೇಕ ಕಂಬಗಳು ಬಾಗಿ ನಿಂತಿವೆ. ಈ ಕುರಿತು ಗ್ರಾಮದ ಮುಖಂಡರು ಕಂಬಗಳ ಕುರಿತು ಸಂಬಂಧಿತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜೆಸ್ಕಾಂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಲಾಗಿದೆ.
ವಿದ್ಯುತ್ ತಂತಿ ತಗುಲಿ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ, ಶೀಘ್ರವೇ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆಗೆದುಹಾಕಿ ಹೊಸ ಕಂಬಗಳನ್ನು ಅಳವಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು  ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ಕಡಗಂಚಿ ಜೆಸ್ಕಾಂ ಕಚೇರಿ ಎದುರು ಗ್ರಾಮಸ್ಥರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಯೋಗೇಶ ಮಾದಗೊಂಡ ಮತ್ತು ಪ್ರಮೋದ ಡೋಣಿ ಗ್ರಾಮದ ಯುವಕರು ಎಚ್ಚರಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement