ಗಬ್ಬೂರಲ್ಲಿ ಶಿವಾನುಭವಗೋಷ್ಠಿ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ಬೂದಿಬಸವೇಶ್ವರ ಸಂಸ್ಥಾನ ಮಠದಲ್ಲಿ ಇತ್ತೀಚೆಗೆ 183ನೇ ಮಾಸಿಕ ಶಿವಾನುಭವ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಗೋಷ್ಠಿಯಲ್ಲಿ ರಾಯಚೂರಿನ ಉಪನ್ಯಾಸಕ ಪರಮೇಶ್ವರ ಸಾಲಿಮಠ ನೀಡಿ, ಭೌತಿಕ ಸಂಪತ್ತು ಗಳಿಕೆಗಿಂತ ಧಾರ್ಮಿಕ ಆಚಾರ ವಿಚಾರಗಳ ಅಳವಡಿಕೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ಪ್ರಭಯ್ಯ ತಾತ, ಸದಾಶಿವಪ್ಪ, ಚಂದ್ರಶೇಖರಯ್ಯ ಸ್ವಾಮಿ, ಏಳುಭಾವೆಪ್ಪಗೌಡ, ಶೆಟ್ಟಿ ಬಸವರಾಜಪ್ಪ ಸಾಹು ಸೇರಿದಂತೆ ಅನೇಕರಿದ್ದರು. ಸಂಸ್ಥಾನ ಮಠದ ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಗಬ್ಬೂರು ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಬಸ್ ಪ್ರಯಾಣ ದರ ಏರಿಕೆಗೆ ಎಸ್ಯುಸಿಐ(ಸಿ) ಖಂಡನೆ
ರಾಯಚೂರು: ತೈಲ ಬೆಲೆ ಮತ್ತು ಸಿಬ್ಬಂದಿ ವೇತನ ಹೆಚ್ಚಳದ ನೆಪವೊಡ್ಡಿ ಸಾರಿಗೆ ಸಂಸ್ಥೆಯು ಬಸ್ ಪ್ರಯಾಣ ದರ ಏರಿಕೆ ಮಾಡಿದ್ದನ್ನು ಎಸ್ಯುಸಿಐ(ಸಿ) ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ಕಾರ್ಯದರ್ಶಿ ಡಾ. ಸುನೀತ್ಕುಮಾರ್, ಈಗಾಗಲೇ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಜನರು ದುಬಾರಿ ದರ ತೆರುತ್ತಿದ್ದಾರೆ. ಈಗ ಮತ್ತೆ ಶೇ.8ರಷ್ಟು ದರ ಏರಿಕೆ ಮಾಡುವ ಮೂಲಕ ಜನತೆಗೆ ಆಘಾತವುಂಟು ಮಾಡುವ ಕಾರ್ಯ ಸಾರಿಗೆ ಸಂಸ್ಥೆ ಮಾಡಿದೆ ಎಂದು ದೂರಿದ್ದಾರೆ.
ಸಾರಿಗೆ ಸಚಿವರ ನಾಟಕ: ಡಿಸೇಲ್ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ಹೆಚ್ಚಳದಿಂದ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಶೇ.15ರಷ್ಟು ಬಸ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಅದನ್ನು ಶೇ.8ಕ್ಕಿಳಿಸಿದೆ ಎಂದು ಸಾರಿಗೆ ಸಚಿವ ರಾಂಮಲಿಂಗಾ ರೆಡ್ಡಿ ಅವರು ಔದಾರ್ಯತೆ ಮೆರೆದಂತೆ ನಾಟಕವಾಡಿ ಕ್ರಮವನ್ನು ಸಮರ್ಥಿಸಿಕೊಂಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.
ಬೆಲೆ ಏರಿಕೆಯ ಮುಂದುವರಿದ ಭಾಗವಾಗಿ ಶೀಘ್ರವೇ ಬಸ್ ಪಾಸ್ ದರವನ್ನೂ ಏರಿಕೆ ಮಾಡಲು ಹೊರಟ ಸರ್ಕಾರದ ಕ್ರಮ ಜನ ವಿರೋಧಿ ಧೋರಣೆ ಸ್ಪಷ್ಟಗೊಳಿಸಿದೆ. ಖಾಸಗಿ ಬಸ್ಗಳಿಗೆ ಮುಕ್ತ ಪರವಾನಗಿ ನೀಡುತ್ತಿರುವ ಸರ್ಕಾರಗಳು ಸರ್ಕಾರಿ ಸಾರಿಗೆ ಸಂಸ್ಥೆಯನ್ನು ಧನದಾಹಿ ಖಾಸಗಿ ಸಂಸ್ಥೆಗಳ ಮಡಿಲಿಗೆ ಹಾಕಲು ಹುನ್ನಾರ ನಡೆಸಿದಂತಿರುವುದು ಇದರಿಂದ ನಿಚ್ಚಳವಾಗಿದೆ ಎಂದು ಆರೋಪಿಸಿದ್ದಾರೆ.
ಜನರ ಜೇಬಿಗೆ ಕತ್ತರಿ: ಸಂಸ್ಥೆಯೊಳಗಿನ ಭ್ರಷ್ಟಾಚಾರದಿಂದ ಆಗುತ್ತಿರುವ ಭಾರಿ ನಷ್ಟವನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಬಸ್ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಿ ನಷ್ಟ ಸರಿದೂಗಿಸುವ ತಂತ್ರ ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಸರ್ಕಾರದ ಈ ನೀತಿಯು ಹಗಲು ದರೋಡೆಗೆ ಸಮಾನ ಎಂದು ಬಣ್ಣಿಸಿದ್ದಾರೆ.
ಒಂದೆಡೆ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಗಳು ಕಾರ್ಪೋರೇಟ್ ಮನೆತನಗಳಿಗೆ ಕೋಟ್ಯಂತರ ರು. ಲಾಭ ತಂದುಕೊಡುವ ಕಾರ್ಯ ಮಾಡುತ್ತಿರುವುದು ಸರ್ಕಾರದ ಬಂಡವಾಳಶಾಹಿ ಪರ ಹಾಗೂ ಜನ ವಿರೋಧಿ ಧೋರಣೆ ಬಹಿರಂಗಗೊಳಿಸಿದೆ ಎಂದು ಟೀಕಿಸಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ನಿತ್ಯ ಪ್ರಯಾಣ ಮಾಡುವ ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದ ಜನರು ಸೇರಿದಂತೆ ಎಲ್ಲಾ ಜನಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಬಸ್ ದರ ಏರಿಕೆ ಕೈಬಿಡಬೇಕೆಂದು ಅವರು ಆಗ್ರಹಿಸಿದ್ದು, ರಾಜ್ಯಾದ್ಯಂತ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಸರ್ಕಾರದ ಬೆಲೆಯೇರಿಕೆ ನೀತಿ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ.