ರೋಗಿಗಳಿಗೆ ಉತ್ತಮ ಸೇವೆ ನೀಡಿ: ಸಚಿವ ಪಾಟೀಲ್
ಶಹಾಬಾದ್: ರೋಗಿಗಳನ್ನು ದೇವರೆಂದು ತಿಳಿದು ಸೇವೆ ಸಲ್ಲಿಸಿದಾಗ ಮಾತ್ರ ವೈದ್ಯರ ವೃತ್ತಿಗೆ ಸಮರ್ಪಕ ಗೌರವ ಸಲ್ಲುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಹೊನಗುಂಟಾ ರಸ್ತೆಯಲ್ಲಿರುವ ನೂತನ ನವಜೀವನ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಯ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ವೈದ್ಯಕೀಯ ಸೇವೆ ಎಂಬುದು ವ್ಯಾಪಾರಿಕರಣವಾಗುತ್ತಿರುವ ಈ ಸಂಧರ್ಭದಲ್ಲಿ ಶಹಾಬಾದ್ ನಗರದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದು ಅವಶ್ಯ. ನವಜೀವನ ಆಸ್ಪತ್ರೆ ಈ ಭಾಗದ ಜನರ ಆರೋಗ್ಯ ಸೇವೆ ಸಲ್ಲಿಸಲು ಮುಂದಾಗಿರುವುದು ಸಂತೋಷದ ಸಂಗತಿ ಎಂದರು.
ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ. ರಶೀದ್ ಮರ್ಚಂಟ್, ಡಾ. ಎಸ್.ಎನ್. ಪಾಟೀಲ್, ಶಿವಾನಂದ ಮಾನಕರ್, ಸಿದ್ದಣ್ಣಗೌಡ ಕೆಂಭಾವಿ, ಬಾಗಲಕೋಟೆಯ ಆಯುಕ್ತ ಶಿವಯೋಗಿ ಕಳಸದ, ಜಿಲ್ಲಾ ಭೋವಿ(ವಡ್ಡರ) ಸಮಾಜದ ಅಧ್ಯಕ್ಷ ಸುಭಾಷ ಪವಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮೃತ್ಯುಂಜಯ ಸ್ವಾಮಿ ಹಿರೇಮಠ ನಿರೂಪಿಸಿದರು. ಶರಣು ಬಿರಾಳ ಸ್ವಾಗತಿಸಿದರು. ನವಜೀವನ ಆಸ್ಪತ್ರೆಯ ಡಾ. ಅನುಪಮಾ ಹಾಗೂ ಡಾ. ವಿನೋದ ಕವಲಗಿ, ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ಡಾ. ಸದಾನಂದ ಕೋರಿ, ಅನೀಲ ಮರಗೋಳ, ಶರಣಬಸಪ್ಪ ಕೋಬಾಳ, ದಾಲಮಿಲ್ ಅಸೋಷಿಯೇಶನ್ ಹಾಗೂ ಅಡತಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಿವಕುಮಾರ ಇಂಗಿನಶೆಟ್ಟಿ, ಡಾ. ಜಹೀರ್ ಇದ್ದರು.