ಪರಿಹಾರಕ್ಕೆ ಆಗ್ರಹಿಸಿ ಕರವೇ ಮನವಿ
ರಾಯಚೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತರುವ ಕೃಷಿ ಉತ್ಪನ್ನಗಳಿಗೆ ಮಳೆ ನೀರಿನಿಂದ ಸೂಕ್ತ ರಕ್ಷಣೆ ಒದಗಿಸುವ ಕಾರ್ಯ ಮಾಡಲು ಒತ್ತಾಯಿಸಿ ಸೋಮವಾರ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮತ್ತಿತರರು, ಈಚೆಗೆ ನಗರದಲ್ಲಿ ಸುರಿದ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದಿರಿಸಿದ್ದ ಬತ್ತ ಮತ್ತಿತರೆ ಬೆಳೆಯು ನೀರಿನಿಂದ ತೊಯ್ದು ರೈತರು ಆತಂಕಕ್ಕೆ ಸಿಲುಕಿದ್ದಾರೆಂದು ದೂರಿದರು.
ಎಪಿಎಂಸಿಯಿಂದ ರು. 22 ಕೋಟಿ ವೆಚ್ಚದಲ್ಲಿ ಈಗಾಗಲೇ ಮಳೆ ನೀರಿನಿಂದ ರೈತರ ಕೃಷಿ ಉತ್ಪನ್ನ ಸಂರಕ್ಷಣೆಗೆ ನಿರ್ಮಿಸಿದ ಶೆಡ್ ಪ್ರಯೋಜನಕ್ಕೆ ಬಾರದಂತೆ ನಿರ್ಮಿಸಲಾಗಿದೆ. ಶೆಡ್ಗಳಿದ್ದರೂ ನೀರು ಬೆಳೆ ಸಂಗ್ರಹಿಸಿದ ಸ್ಥಳಕ್ಕೆ ನುಗ್ಗುತ್ತಿರುವುದು ಕಾಮಗಾರಿಯ ವೈಫಲ್ಯ ಪ್ರದರ್ಶಿಸಿದೆ ಎಂದು ಟೀಕಿಸಿದರು.
ಈಚೆಗೆ ಸುರಿದ ಮಳೆಗೆ ಎಪಿಎಂಸಿಯಲ್ಲಿರಿಸಿದ್ದ ವಿವಿಧ ಬೆಳೆಗಳು ನೀರಿನಿಂದ ಒದ್ದೆಯಾಗಿ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಈ ಹಾನಿಗೆ ಎಪಿಎಂಸಿ ಆಡಳಿತವೇ ನೇರ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರೈತರಿಗೆ ಆಗಿರುವ ಹಾನಿಗೆ ಪರಿಹಾರ ಒದಗಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಶೆಡ್ಗಳನ್ನು ನಿರ್ಮಿಸುವಂತೆ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದರು. ಸಂಘಟನೆಯ ಪ್ರಮುಖರಾದ ಅಮರಯ್ಯಸ್ವಾಮಿ, ಎಂ.ಭೀಮಣ್ಣ, ಬಾಬಾ, ನರಸಪ್ಪ ಏಗನೂರು, ನರಸಿಂಹ, ವೀರೇಶ್, ನಿಜಾಮುದ್ದೀನ್, ದೇವರೆಡ್ಡಿ ಸೇರಿದಂತೆ ಅನೇಕರಿದ್ದರು.