ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಠಗಳಲ್ಲಿ ಪಂಕ್ತಿಭೇದ ನಿಷೇಧಿಸಿ

Rashmi Kasaragodu
Updated On : 6 May 2014, 12:33 pm

ಕ.ಪ್ರ. ವಾರ್ತೆ    ರಾಯಚೂರು    ಮೇ 5
ರಾಜ್ಯದ ಮಠ- ದೇವಸ್ಥಾನಗಳಲ್ಲಿ ಪಂಕ್ತಿಭೇದ ಪದ್ಧತಿ ಆಚರಿಸುವುದನ್ನು ನಿಷೇಧಿಸಲು ಮತ್ತು ಆಚರಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಸೋಮವಾರ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ರಾಜ್ಯದ ವಿವಿಧ ಮಠ ಹಾಗೂ ದೇವಸ್ಥಾನಗಳಲ್ಲಿ ಈಗಲೂ ಪಂಕ್ತಿಭೇದ ಪದ್ಧತಿ ಆಚರಣೆಯಲ್ಲಿದೆ ಎಂದು ಆರೋಪಿಸಿದರು.
ಮಹಿಳಾ ದೌರ್ಜನ್ಯ, ಜಾತಿಪದ್ಧತಿ ಆಚರಣೆ: ಈ ಹಿಂದೆಯೂ ಸಿಪಿಎಂ ಪಕ್ಷದಿಂದ ಇಂಥ ಅನಿಷ್ಟ ಆಚರಣೆ ವಿರುದ್ಧ ಹೋರಾಟ ನಡೆಸಲಾಗಿತ್ತು. ಆದರೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಪರಿಣಾಮ ಈಚೆಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಪ್ರಸಾದ ಸ್ವೀಕರಿಸಲು ತೆರಳಿದ್ದ ಅತ್ರಾಡಿ ವನಿತಾ ಶೆಟ್ಟಿ ಅವರಿಗೆ ಅಲ್ಲಿನ ಶ್ರೀಮಠದ ಆಡಳಿತದವರು ಅನ್ಯ ಜಾತಿಯವರೆಂಬ ಕಾರಣಕ್ಕೆ ಹೊರಹಾಕಿರುವುದು ಮಹಿಳಾ ದೌರ್ಜನ್ಯವಷ್ಟೇ ಅಲ್ಲ ಜಾತಿಪದ್ಧತಿಯ ಆಚರಣೆಯಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇಂಥ ಘಟನೆಗಳು ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಮೌನ ವಹಿಸಿದೆ. ಕಳೆದ ಅನೇಕ ವರ್ಷಗಳಿಂದ ಇಂಥ ಆಚರಣೆಗಳು ಜಾರಿಯಲ್ಲಿದ್ದು ಅನೇಕ ಸಂದರ್ಭದಲ್ಲಿ ಬೆಳಕಿಗೆ ಬಾರದೇ ಹೋಗುತ್ತಿವೆ ಎಂದು ಟೀಕಿಸಿದರು.
ಪೇಜಾವರ ಶ್ರೀ ಮೌನವೇಕೆ?: ಉಡುಪಿ ಮಠದಲ್ಲಿ ನಡೆಯುತ್ತಿರುವ ಪಂಕ್ತಿಭೇದದಂಥ ಅನಿಷ್ಟ ಪದ್ಧತಿಯ ಬಗ್ಗೆ ಪೇಜಾವರ ಮಠಾಧೀಶರು ಮೌನ ವಹಿಸಿರುವುದು ಸರಿಯಲ್ಲ. ಅನಗತ್ಯ ವಿಷಯಗಳ ಬಗ್ಗೆ ಹೇಳಿಕೆ ನೀಡಿ ಗೊಂದಲ ಎಬ್ಬಿಸುವ ಪೇಜಾವರ ಶ್ರೀಗಳು ಶ್ರೀಮಠದಲ್ಲಿ ನಡೆಯುತ್ತಿರುವ ಆಚರಣೆಯ ಬಗ್ಗೆ ಚಕಾರ ಎತ್ತದಿರುವುದು ಸಲ್ಲದು ಎಂದು ಎಚ್ಚರಿಸಿದರು.
ಉಡುಪಿಯ ಮಠದಲ್ಲಿ ನಡೆಯುತ್ತಿರುವ ಪಂಕ್ತಿಭೇದವನ್ನು ಬ್ರಾಹ್ಮಣ ಸಮಾಜದ ಎಲ್ಲರೂ ಬೆಂಬಲಿಸುವುದಿಲ್ಲ ಎಂಬುದನ್ನು ಪೇಜಾವರ ಶ್ರೀಗಳು ಅರಿಯಬೇಕಿದೆ. ಉಡುಪಿಯಲ್ಲಿಯೇ ವಾಸವಾಗಿರುವ ಅನೇಕ ಮಾಧ್ವ ಬ್ರಾಹ್ಮಣರು ಈ ಕಾರಣಕ್ಕಾಗಿಯೇ ಮಠಕ್ಕೆ ಕಾಲಿಡುತ್ತಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಿದೆ ಎಂದು ಹೇಳಿದರು.
ಪ್ರಕರಣ ದಾಖಲಿಸಲು ಆಗ್ರಹ: ಕೂಡಲೇ ರಾಜ್ಯ ಸರ್ಕಾರ ವನಿತಾ ಶೆಟ್ಟಿ ಅವರ ಮೇಲೆ ಉಡುಪಿ ಮಠದಲ್ಲಿ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ ಕೇಸ್ ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಬೇಕು. ಪಂಕ್ತಿಭೇದ ಪದ್ಧತಿ ಆಚರಣೆಗೆ ನಿಷೇಧ ಹೇರುವಂತೆ ಹೋರಾಟಗಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಎಚ್.ಪದ್ಮಾ, ಕೆ.ಜಿ. ವೀರೇಶ್, ರಂಗಪ್ಪ ಯಾಪಲದಿನ್ನಿ, ಡಿ.ಎಸ್. ಶರಣಬಸವ, ಚನ್ನಬಸಯ್ಯ, ಪ್ರಕಾಶ್ ರೆಡ್ಡಿ, ಫರೀದಾ ಬೇಗಂ, ಶಂಕ್ರಮ್ಮ, ಸಂತೋಷಮ್ಮ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement