ಶೇಂಗಾ ದರ ಕುಸಿತ: ರೈತರು ಕಂಗಾಲು
ವಿಶೇಷ ವರದಿ
ಕ.ಪ್ರ. ವಾರ್ತೆ ಟಿ ರಾಯಚೂರು ಟಿ ಮೇ 6
ಜಿಲ್ಲೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದಿರುವುದು ಮತ್ತೆ ಆಕ್ರೋಶಕ್ಕೆ ದಾರಿ ಮಾಡಿದೆ. ಶೇಂಗಾ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ದೊರೆಯುತ್ತಿಲ್ಲ ಎಂಬ ಕೂಗು ವ್ಯಾಪಕವಾಗುತ್ತಿದ್ದು, ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸಲು ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದ್ದು, ರೈತರು ಉತ್ತಮ ಬೆಳೆ ಬಂದರೂ ಆರ್ಥಿಕ ನಷ್ಟದ ಭೀತಿಯಲ್ಲಿದ್ದಾರೆ.
ಜಿಲ್ಲೆಯ ವಿವಿಧೆಡೆ ಶೇಂಗಾ ಬೆಳೆದ ರೈತರ ಸದ್ಯದ ದುಸ್ಥಿತಿಯಿದು. ರಾಯಚೂರು ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಶೇಂಗಾ ಬೆಳೆ ಭಾರೀ ಪ್ರಮಾಣದಲ್ಲಿ ಆವಕವಾಗುತ್ತಿದೆ. ಆದರೆ ಅದಕ್ಕೆ ರೈತರ ನಿರೀಕ್ಷೆಗೆ ತಕ್ಕಂತೆ ಬೆಲೆ ಮಾತ್ರ ದೊರೆಯುತ್ತಿಲ್ಲ. ದಿನವೂ ಸಾವಿರಾರು ಟನ್ ಶೇಂಗಾ ಮಾರುಕಟ್ಟೆಗೆ ಬರುತ್ತಿದ್ದು ಸಮರ್ಪಕ ಬೆಲೆ ದೊರೆಯದ್ದರಿಂದ ರೈತರು ನಷ್ಟದಲ್ಲಿಯೇ ಶೇಂಗಾ ಮಾರಾಟ ಮಾಡುವಂಥ ಸ್ಥಿತಿಯಿದೆ.
ರೈತರಲ್ಲಿ ಆರ್ಥಿಕ ನಷ್ಟದ ಭೀತಿ: ಜಿಲ್ಲೆಯ ದೇವದುರ್ಗ, ರಾಯಚೂರು ಮತ್ತು ಲಿಂಗಸ್ಗೂರು ತಾಲೂಕುಗಳ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಪ್ರಸಕ್ತ ವರ್ಷ ರೈತರು ಶೇಂಗಾ ಬೆಳೆದಿದ್ದಾರೆ. ಶೇಂಗಾ ಬೆಳೆ ಉತ್ತಮ ಇಳುವರಿ ನೀಡಿದೆ. ಪ್ರತಿ ಎಕರೆಗೆ ರೈತರು 20ರಿಂದ 25 ಸಾವಿರ ರು. ವೆಚ್ಚ ಮಾಡಿ ಉತ್ತಮ ಫಸಲು ಕಂಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಶೇಂಗಾ ಮಾರಾಟವಾಗುತ್ತಿರುವುದು ರೈತರಲ್ಲಿ ಆರ್ಥಿಕ ನಷ್ಟದ ಭೀತಿ ತಂದಿದೆ.
ಸದ್ಯ ಮಾರುಕಟ್ಟೆಯಲ್ಲಿ 2800ಗಳಿಂದ 3 ಸಾವಿರ ರು.ಗೆ ಪ್ರತಿ ಕ್ವಿಂಟಾಲ್ಗೆ ದರವಿದ್ದು, ಸರ್ಕಾರವು 4 ಸಾವಿರ ಪ್ರತಿ ಕ್ವಿಂಟಾಲ್ ಬೆಂಬಲ ನಿಗದಿ ಮಾಡಿದೆ. ಸರ್ಕಾರದ ಬೆಂಬಲ ಬೆಲೆಗೆ ಬೆಲೆಯಿಲ್ಲವಾಗಿದೆ. ಮನೆಯಲ್ಲಿ ದಾಸ್ತಾನಿರಿಸಲು ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಅನೇಕ ರೈತರು ಮಾರುಕಟ್ಟೆಗೆ ಶೇಂಗಾ ಸಾಗಿಸಿ ಲಭ್ಯ ದರಕ್ಕೆ ಮಾರಾಟ ಮಾಡುವಂಥ ಅನಿವಾರ್ಯತೆಗೆ ಸಿಲುಕಿದ್ದಾರೆ.
ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ: ಪ್ರತಿ ಬೇಸಿಗೆಯಲ್ಲಿ ಚಿತ್ರದುರ್ಗದಿಂದ ಶೇಂಗಾ ಖರೀದಿದಾರರು ನಗರಕ್ಕೆ ಆಗಮಿಸುತ್ತಿದ್ದರು. ಅದರಿಂದ ರೈತರಿಗೆ ಉತ್ತಮ ಬೆಲೆಯೂ ದೊರೆಯುತ್ತಿತ್ತು. ಹೊರಗಿನಿಂದ ವರ್ತಕರು ಖರೀದಿಗೆ ಆಗಮಿಸುತ್ತಿದ್ದುದರಿಂದ ಸ್ಥಳೀಯವಾಗಿಯೂ ದರ ಏರಿಕೆಯಾಗುತ್ತಿತ್ತು.
ಆದರೆ ಪ್ರಸಕ್ತ ಬೇಸಿಗೆಯಲ್ಲಿ ಶೇಂಗಾ ಖರೀದಿಗೆ ಚಿತ್ರದುರ್ಗದ ವರ್ತಕರು ನಿರೀಕ್ಷೆಯಂತೆ ಆಸಕ್ತಿ ತೋರಿಲ್ಲ. ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿಯೂ ದರ ಏರಿಕೆಯಾಗಿಲ್ಲ. ಹಾಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತೆಯೇ ಜಿಲ್ಲಾದ್ಯಂತ ವಿವಿಧೆಡೆ ಶೇಂಗಾ ಬೆಳೆಗಾರರು ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸುತ್ತಿದ್ದಾರೆ.
ಕೆಒಎಫ್ ನಿರಾಕರಣೆ: ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪ್ರತಿ ವರ್ಷ ಕರ್ನಾಟಕ ಆಯಿಲ್ ಫೆಡರೇಷನ್ನಿಂದ ಎಣ್ಣೆ ತಯಾರಿಕೆಗೆ ಶೇಂಗಾ ರೈತರಿಂದ ಖರೀದಿಸಲಾಗುತ್ತಿತ್ತು. ಆದರೆ ಕಳೆದ ಬಾರಿ ಕೋಟ್ಯಂತರ ರು. ನಷ್ಟವಾಗಿದ್ದರಿಂದ ಪ್ರಸಕ್ತ ವರ್ಷ ಶೇಂಗಾ ಖರೀದಿಗೆ ಕೆಒಎಫ್ ನಿರಾಸಕ್ತಿ ತೋರಿದೆ ಎಂದು ತಿಳಿಸಿದ್ದಾರೆ.
ಮಾರಾಟ ಮಾಡುವುದು ತಡವಾದರೆ ಶೇಂಗಾ ಬೆಳೆಗೆ ಹಾನಿಯ ಭೀತಿ ಮತ್ತು ಸಂಗ್ರಹಣೆಗೆ ಸೂಕ್ತ ವ್ಯವಸ್ಥೆಯಿಲ್ಲದಿರುವುದು ರೈತರನ್ನು ಕಂಗೆಡಿಸಿದೆ. ಸರ್ಕಾರ ಬೆಂಬಲ ಬೆಲೆ ಪ್ರಕಟಿಸಿದ್ದರೂ ಮಾರುಕಟ್ಟೆಯಲ್ಲಿ ಅದರಂತೆ ಮಾರಾಟವಾಗದ ಕೃಷಿ ಉತ್ಪನ್ನಗಳು. ಈ ರೀತಿಯ ಗೊಂದಲದ ಪರಿಸ್ಥಿತಿಯಲ್ಲಿ ರೈತರು ಖರೀದಿ ಕೇಂದ್ರ ಆರಂಭಗೊಂಡರಾದರೂ ಮಾರುಕಟ್ಟೆಯಲ್ಲಿನ ದರ ಏರಿಕೆ ಕಾಣುತ್ತದೆ. ಆ ಮೂಲಕ ರೈತರು ಆರ್ಥಿಕವಾಗಿ ತಕ್ಕಮಟ್ಟಿಗೆ ಸುಧಾರಣೆ ಕಾಣಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.