ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಡಿವ ನೀರಿನ ಅಭಾವ ನೀಗಿಸಲು ಸಜ್ಜಾಗಿ

Mainashree
Updated On : 8 May 2014, 11:20 am

ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 7
ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಅಭಾವ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯಿಂದ ಸಜ್ಜಾಗಿರಬೇಕು. ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಪಿಡಿಒ ಗಳು ಈ ನಿಟ್ಟಿನಲ್ಲಿ ಹೆಚ್ಚಿನ ಹೊಣೆ ಹೊತ್ತು ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಶಿಸ್ತುಕ್ರಮ ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇ. ವೆಂಕಟಯ್ಯ ಎಚ್ಚರಿಸಿದರು.
ಅವರು ತಾಲೂಕಿನ ಶಕ್ತಿನಗರದ ಕೆಪಿಸಿ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಅಭಾವ ಪರಿಸ್ಥಿತಿ ಕುರಿತ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರುಗಳಿಗೆ ಮೇವಿನ ಅಭಾವ ಆಗದಂತೆ ಎಚ್ಚರಿಕೆ ವಹಿಸಬೇಕು. ಕೂಲಿಕಾರ್ಮಿಕರಿಗೆ ಉದ್ಯೋಗಾವಕಾಶ ಸೃಷ್ಟಿಸಿ ಗುಳೆ ತಡೆಯಬೇಕೆಂದು ಆದೇಶಿಸಿದರು.
ಕುಡಿಯುವ ನೀರು: ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ತೀವ್ರ ಅಭಾವ ಕಂಡುಬಂದಿಲ್ಲ. ಜಿಲ್ಲಾಡಳಿತ ಸಮಸ್ಯೆ ಎದುರಿಸಲು ಸಜ್ಜಾಗಿದೆ. ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಅಗತ್ಯಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಿತರೆ ಅಭಾವ ಪರಿಸ್ಥಿತಿ ನಿಭಾಯಿಸಲು ಸರ್ಕಾರದಿಂದ ರು. 2 ಕೋಟಿ ಮಂಜೂರಾಗಿದೆ. ಇದುವರೆಗೆ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಕ್ಕೆ ಲಭ್ಯವಿದ್ದ ಅನುದಾನವನ್ನೇ ಒದಗಿಸಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪ ಅನುದಾನ ಈ ಸಾಲಿನಲ್ಲಿ 690 ಲಕ್ಷ ರು. ದೊರೆತಿದ್ದು, ಅದರಲ್ಲಿ 290 ಲಕ್ಷ ರು. ಜಿಲ್ಲಾಡಳಿತದ ಬಳಿಯಿದೆ. ಹಾಗೆಯೇ ಪ್ರತಿ ತಾಲೂಕಿಗೆ 50 ಲಕ್ಷ ರು. ಅನುದಾನ ಬಿಡುಗಡೆಗೊಳಿಸಲಾಗಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಕೊಳವೆ ಮಾರ್ಗ ಅಳವಡಿಕೆ, ಕೊಳವೆ ಬಾವಿ ಕೊರೆಯಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಬರಬೇಕಿದೆ ಎಂದರು. ಜಿಲ್ಲೆಯಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಸರ್ಕಾರಕ್ಕೆ 350 ಲಕ್ಷ ರು. ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಾವರಿ ಪ್ರದೇಶದಲ್ಲಿ 2.10 ಕೋಟಿ ರು. ಮೊತ್ತದ ಬೆಳೆ ಹಾನಿಯಾಗಿದೆ ಎಂದಗು ಸಭೆಗೆ ವಿವರಿಸಿ ಶೀಘ್ರದಲ್ಲಿಯೇ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಜೆಸ್ಕಾಂ: ಕುಡಿಯುವ ನೀರಿನ ಪೂರೈಕೆ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಜೆಸ್ಕಾಂ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ಸಭೆಯಲ್ಲಿ ಜಿಪಂ ಅಧಿಕಾರಿಗಳಿಂದ ಕೇಳಿಬಂದಿತು. ಇದಕ್ಕೆ ಉತ್ತರಿಸಿದ ಜೆಸ್ಕಾಂ ಅಧಿಕಾರಿಗಳು ಜಿಲ್ಲೆಯಲ್ಲಿ ಜಿಪಂ ಹೇಳಿದಂತೆ 59 ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂಬುದು ಸರಿಯಲ್ಲ. ಜಿಪಂ ನಿಗದಿತ ಶುಲ್ಕಕ್ಕಿಂತ ಕಡಿಮೆ ಹಣ ಪಾವತಿಸಿದೆ. ಮತ್ತೆ ಕೆಲವೆಡೆ ಕೊಳವೆ ಬಾವಿಯಿರುವ ಸ್ಥಳದ ಮಾಹಿತಿಯಿಲ್ಲದ್ದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇ.ವೆಂಕಟಯ್ಯ ಮಾತನಾಡಿ, ಕೂಡಲೇ ತಾಪಂ ಇಒ ಗಳು ಕೊಳವೆಬಾವಿಗಳಿರುವ ಸ್ಥಳದ ಸಮಗ್ರ ಮಾಹಿತಿ ಒದಗಿಸಿ ಜೆಸ್ಕಾಂಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನೆರವಾಗುವಂತೆ ಆದೇಶಿಸಿದರು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಲೂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಶು ಸಂಗೋಪನೆ: ಜಿಲ್ಲೆಯಲ್ಲಿ ಮೇವಿನ ಕೊರತೆ ಸದ್ಯಕ್ಕಿಲ್ಲ. ಈಚೆಗೆ ಬತ್ತದ ಕಟಾವು ನಡೆದಿದ್ದು, ಮೇವಿನ ಕೊರತೆಯಾಗುವ ಸಾಧ್ಯತೆಯಿಲ್ಲ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಸುಂದರರಾಜ್ ಸಭೆಗೆ ಮಾಹಿತಿ ನೀಡಿ ಸರ್ಕಾರದಿಂದ ಸದ್ಯ 5930 ಮೇವಿನ ಕಿಟ್‌ಗಳು ಲಭ್ಯವಾಗಿದ್ದು, ಇನ್ನೂ 5500 ಕಿಟ್‌ಗಳು ಶೀಘ್ರ ದೊರೆಯಲಿದ್ದು, ರೈತರಿಗೆ ವಿತರಿಸಿ ಮೇವು ಬೆಳೆಯಲು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿಕಾರ್ಮಿಕರಿಗೆ ಯಾವುದೇ ಬಾಕಿ ಉಳಿಸಿಕೊಳ್ಳದಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇ. ವೆಂಕಟಯ್ಯ, ಜಿಪಂ ಬಳಿ ಐದು ಕೋಟಿ ರು. ಲಭ್ಯವಿದೆ ಎಂದು ಹೇಳಿ ನೀರಾವರಿ ಪ್ರದೇಶಕ್ಕಿಂತ ಮಳೆಯಾಧಾರಿತ ಪ್ರದೇಶದ ಕೂಲಿಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ಮೇಲೆ ಕೆಲಸ ನೀಡಲು ಸೂಚಿಸಿದರು.
ಕೃಷಿ ಇಲಾಖೆ: ಕೃಷಿ ಇಲಾಖೆ ಮೇಲಿನ ಚರ್ಚೆಯಲ್ಲಿ ಇಲಾಖೆಯು ಮುಂದಿನ ಹಂಗಾಮಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ರೀತಿಯ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಕಾಳಜಿ ವಹಿಸಲಾಗಿದೆ.
 ಸದ್ಯ ಕೆಂಪುಮೆಣಸಿನಕಾಯಿ, ಹತ್ತಿ ಬೆಳೆ ಮಾತ್ರ ಕಟಾವು ಮಾಡಬೇಕಿದೆ ಎಂದು ಪ್ರಭಾರಿ ಉಪನಿರ್ದೇಶಕ ಡಾ.ಸಂದೀಪ್ ವಿವರಿಸಿದರು.
ಪಿಡಿಒ ಬಗ್ಗೆ ಅತೃಪ್ತಿ: ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒಗಳು ಕೇಂದ್ರ ಸ್ಥಾನದಲ್ಲಿರುವುದಿಲ್ಲ. ಅದರಿಂದಾಗಿ ಗ್ರಾಮೀಣ ಭಾಗದಿಂದ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಬರುತ್ತಿವೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ದೂರಿದರು.
ಇದರಿಂದ ಕೆಂಡಾಮಂಡಲರಾದ ಕಾರ್ಯದರ್ಶಿ ಇ. ವೆಂಕಟಯ್ಯ ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು. ಕೇಂದ್ರ ಸ್ಥಾನದಲ್ಲಿದ್ದು, ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆ ಎಚ್ಚರಿಸಬೇಕು.
 ದೂರವಾಣಿ ಕರೆ ಸ್ವೀಕರಿಸದ ಪಿಡಿಒ ವಿರುದ್ಧ ಬಿಗಿ ಕ್ರಮ ಜರುಗಿಸಲು ಜಿಪಂ ಸಿಇಒ ವಿಜಯ ಜೋತ್ಸ್ನಾ ಅವರಿಗೆ ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement