ಕುಡಿವ ನೀರಿನ ಸಮಸ್ಯೆ ಇಲ್ಲೆಂದ ಉಸ್ತುವಾರಿ ಕಾರ್ಯದರ್ಶಿ
ಪಂಪಯ್ಯ ಮಠ
ಮುದಗಲ್: ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಹಪಾಹಪಿಸುತ್ತಿದ್ದರೆ, ತಾಲೂಕು ಆಡಳಿತ, ಜಿಲ್ಲಾಡಳಿತ ತಾಲೂಕು ಮತ್ತು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ 98ಕ್ಕೂ ಅಧಿಕ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಪತ್ರಿಕೆಗಳು ಗಮನ ಸೆಳೆದಿದ್ದರೂ, ಅಧಿಕಾರಿಗಳು ಸರ್ಕರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸುಳ್ಳು ವರದಿಯನ್ನು ಕಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳು ಖುದ್ದು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕಾಗಿದೆ. ಎಸಿ ರೂಂಗಳಲ್ಲಿ ಕುಳಿತು ಅಂಕಿ ಅಂಶಗಳನ್ನು ಹಾಕಿ ಸರ್ಕಾರಕ್ಕೆ ವರದಿ ಕಳಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗದೆ ಉಳಿದು ಬಿಡುತ್ತವೆ. ಮುದಗಲ್ ಭಾಗದ ಜನತಾಪುರ, ಆದಾಪುರ, ಕನಸಾವಿ, ಅಮದಿಹಾಳ, ಮರಳಿ, ಹೂನೂರು, ಬೋಗಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ.
ಬ್ಯಾಲಿಹಾಳ, ಆದಾಪುರ, ಕನಸಾವಿ, ಮರಳಿ ಗ್ರಾಮಗಳಲ್ಲಿ ಜಿಪಂ ಯೋಜನೆಯಡಿ ಕುಡಿವ ನೀರು ಸಂಗ್ರಹ ತೊಟ್ಟಿಗಳನ್ನು ಲಕ್ಷಾಂತರ ರು. ವೆಚ್ಚ ಮಾಡಿ, ನಿರ್ಮಿಸಿದ್ದರೂ, ಅಪೂರ್ಣಗೊಂಡಿವೆ. ಪೈಪ್‌ಲೈನ್ ಇಲ್ಲ, ವಿದ್ಯುತ್ ಸಂಪರ್ಕ ಇಲ್ಲದೆ ಯೋಜನೆಗಳು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಬಿಲ್ ಪೂರ್ಣ: ಕುಡಿಯುವ ನೀರು ಸಂಗ್ರಹಣ ತೊಟ್ಟಿಗಳನ್ನು ನಿರ್ಮಿಸಲು ಗುತ್ತಿಗೆ ಹಿಡಿದ ಗುತ್ತೆದಾರರು ಯೋಜನೆಗಳನ್ನು ಪೂರ್ಣಗೊಳಿಸುವ ಮೊದಲೇ ಬಿಲ್ ಪಾವತಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಯೋಜನೆಗಳು ಪೂರ್ಣಗೊಳ್ಳದಕ್ಕೆ ಕಾರಣ ಕೇಳಿದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯುತ್ತಿಲ್ಲ.
ಅಪಹಾಸ್ಯ: ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ಪತ್ರಿಕೆ ಸಾಕಷ್ಟು ವರದಿ ಮಾಡಿದೆ. ಆದರೆ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಈ. ವೆಂಕಟಯ್ಯ ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿಕೆ ನೀಡಿರುವುದು ಅಪಹಾಸ್ಯ ಎಂದು ಜಿ.ಪಂ. ಸದಸ್ಯೆ ಮೀನಾಕ್ಷಮ್ಮ ಸುರೇಶಗೌಡ ಹೇಳಿದ್ದಾರೆ. ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ, ವಾಸ್ತವಾಂಶವನ್ನು ತಿಳಿಯಬೇಕು. ತಾಲೂಕು ಅಧಿಕಾರಿಗಳು ನೀಡುವ ಸುಳ್ಳು ವರದಿ ನಂಬಿ ಈ ರೀತಿ ಹೇಳಿಕೆ ನೀಡಬಾರದು ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಪ್ಲೋರೈಡ್‌ಯುಕ್ತ ನೀರು ಸೇವಿಸಿ ಸಾಕಷ್ಟು ಜನ ಕೀಲು, ಕಿಡ್ನಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಆರೋಪ: ಕುಡಿಯುವ ನೀರು ನಿರ್ವಹಣೆಗೆ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದ್ದರೂ, ತಾಲೂಕು ಅಧಿಕಾರಿಗಳು ಸಮರ್ಫಕ ಹಣ ಬಳಕೆ ಮಾಡುತ್ತಿಲ್ಲ. ಸಮಸ್ಯಾತ್ಮಕ ಹಳ್ಳಿಗಳಿಗೆ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡಲು ಆದೇಶವಿದ್ದರೂ ಪಾಲಿಸುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಚುನಾಯಿತ ಜನಪ್ರತಿನಿಧಿಗಳು, ಅಧಿಕಾಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಈಗೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಗ್ರಾಮೀಣ ಪ್ರದೇಶದ ಜನರು ರೊಚ್ಚಿಗೆದ್ದು, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವ ಮುನ್ನ ಸಮಸ್ಯೆಗೆ ಸ್ಪಂದಿಬೇಕಾಗಿದೆ.