ಸರ್ಕಾರಿ ಐಟಿಐ ಕಾಲೇಜು ಸ್ಥಾಪನೆ: ಸರ್ಕಾರದ ತಾರತಮ್ಯಕ್ಕೆ ಖಂಡನೆ
ರಾಯಚೂರು: ರಾಜ್ಯದಲ್ಲಿ ಹೊಸದಾಗಿ ಪ್ರಾರಂಭಿಸಲು ಆದೇಶಿಸಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಜಿಲ್ಲೆಗೆ ಒಂದೂ ಕಾಲೇಜು ಮಂಜೂರು ಮಾಡದೇ ತಾರತಮ್ಯ ಮಾಡಲಾಗಿದೆ ಎಂದು ಜನಸಂಗ್ರಾಮ ಪರಿಷತ್ ಆರೋಪಿಸಿದೆ.
ಪ್ರಕಟಣೆ ನೀಡಿರುವ ಜನಸಂಗ್ರಾಮ ಪರಿಷತ್ ಮುಖಂಡ ಡಾ. ರಜಾಕ್ ಉಸ್ತಾದ್, ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳಿಗೆ ಒತ್ತು ನೀಡಿ ಸೌಲಭ್ಯರಹಿತ ಹಾಗೂ ಭಾಗಶಃ ಸೌಲಭ್ಯ ಹೊಂದಿದ ಹಿಂದುಳಿದ ತಾಲೂಕುಗಳಲ್ಲಿ 100 ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿತ್ತು. ಈ ಬಗ್ಗೆ ಸರ್ಕಾರ ಆದೇಶವನ್ನೂ ಹೊರಡಿಸಿತ್ತು. ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ ಅತೀ ಹೆಚ್ಚು ಹೊಂದಿದ ಹೈ.ಕ. ಪ್ರದೇಶಕ್ಕೆ ನ್ಯಾಯಯುತವಾಗಿ ಕೈಗಾರಿಕಾ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆಯಾಗಬೇಕಿತ್ತು ಎಂದಿದ್ದಾರೆ.
ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು: ಅದರಲ್ಲೂ ರಾಯಚೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಿಂದುಳಿದಿದ್ದು, ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಒಂದಾದರೂ ಕೈಗಾರಿಕಾ ತರಬೇತಿ ಸಂಸ್ಥೆ ಮಂಜೂರಾಗಬೇಕಿತ್ತು. ಆದರೆ ಸರ್ಕಾರ ತನ್ನ ಹಳೆಯ ಚಾಳಿ ಮುಂದುವರಿಸಿದ್ದು, ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಮಲತಾಯಿ ಧೋರಣೆ: ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಶೇ.60 ಕ್ಕಿಂತ ಹೆಚ್ಚು ಕೈಗಾರಿಕಾ ಸಂಸ್ಥೆಗಳನ್ನು ನೀಡಿರುವುದು ಸರ್ಕಾರದ ಮಲತಾಯಿ ಧೋರಣೆ ಸ್ಪಷ್ಟಗೊಳಿಸಿದೆ. ಎಚ್.ಕೆ. ಪಾಟೀಲರ ಸಚಿವ ಸಂಪುಟ ಉಪಸಮಿತಿಯೂ ಕೂಡಾ ಹೈ-ಕದ ಸಂಪೂರ್ಣ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಗದಲ್ಲಿ ತಾಲೂಕಿಗೆ ಒಂದು ಸರ್ಕಾರಿ ಕೈಗಾರಿಕೆ ಸಂಸ್ಥೆ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಸಮಿತಿಯ ಶಿಫಾರಸಿಗೆ ಸರ್ಕಾರ ಬೆಲೆ ನೀಡಿಲ್ಲ. ಜಿಲ್ಲೆಯ ಶಾಸಕರು ಸರ್ಕಾರಿ ಕೈಗಾರಿಕಾ ಕಾಲೇಜುಗಳನ್ನು (ಐಟಿಐ) ತಮ್ಮ ಕ್ಷೇತ್ರಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ನೆಪ ಮಾತ್ರಕ್ಕೆ ಜಿಲ್ಲೆಗೆ ಭೇಟಿ ನೀಡಿ, ತಮ್ಮ ಕರ್ತವ್ಯ ಪಾಲಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದ್ದಾರೆ.