ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೊಳಕು ರಸ್ತೆಗಿಳಿಯಲು ಹಿಂಜರಿದ ಸಚಿವ

Mainashree
Updated On : 11 May 2014, 10:54 am

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 10
ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಟ, ರಾಜಕೀಯ ಮೇಲಾಟದಲ್ಲಿಯೇ ಮುಳುಗಿರುವ ನಗರಸಭೆ ಆಡಳಿತದ ಮರ್ಯಾದೆ ಒಂದು ದಿನ ಸುರಿದ ಧಾರಾಕಾರ ಮಳೆಗೆ ಹರಾಜಾಗಿದೆ. ರಾಜಾ ಕಾಲುವೆ ಸೇರಿ ನಗರದ ಚರಂಡಿಗಳು ತ್ಯಾಜ್ಯದಿಂದ ಮುಚ್ಚಿದ್ದು, ಮಳೆ ನೀರು ರಸ್ತೆಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಜಿಲ್ಲಾ ಉಸ್ತುವಾರಿ ಸಚಿವರೂ ನಗರದ ರಸ್ತೆಗಿಳಿಯಲು ಹಿಂಜರಿದಿದ್ದು ವಾಸ್ತವಕ್ಕೆ ಹಿಡಿದ ಕನ್ನಡಿ.
- ರಾಯಚೂರು ನಗರಸಭೆಯ ಕಾರ್ಯವೈಖರಿಯ ಪರಿಯಿದು.
ನಗರದಲ್ಲಿ ಶುಕ್ರವಾರ ಸುರಿದ ಒಂದು ದಿನದ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಳ್ಳಲು ನಗರಸಭೆಯೇ ಕಾರಣವಾಯ್ತು. ನಗರದಲ್ಲಿನ ತ್ಯಾಜ್ಯ ವಿಲೇವಾರಿಯತ್ತ ಆಡಳಿತ ನಿರ್ಲಕ್ಷ್ಯ ತೋರಿದ್ದೇ ಇದಕ್ಕೆ ಕಾರಣ ಎಂದು ಬೇರೆ ಹೇಳಬೇಕಿಲ್ಲ.
ರಾಜಕೀಯ ಕಿತ್ತಾಟ: ಕೆಲ ತಿಂಗಳ ಹಿಂದೆ ನಗರಸಭೆಗೆ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾದ ನಂತರದಲ್ಲಿ ನಗರಸಭೆಯಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆಂಬ ಗೊಂದಲದಲ್ಲಿ ಜನತೆಯಿದ್ದಾರೆ.
 ಮೀಸಲಾತಿಯಂತೆ ಅಧ್ಯಕ್ಷರಾಗಿ ಮಹಾದೇವಮ್ಮ, ಉಪಾಧ್ಯಕ್ಷರಾಗಿ ಪದ್ಮಾವತಿ ವರು ಆಯ್ಕೆಯಾದರು.
ಆದರೆ ಕೆಲವೇ ದಿನಗಳಲ್ಲಿ ಅಧ್ಯಕ್ಷರ ವಿರುದ್ಧ ಸದಸ್ಯರು ಅಸಮಾಧಾನಗೊಂಡು ಅವರನ್ನು ಅನಾರೋಗ್ಯದ ಕಾರಣವೊಡ್ಡಿ ಪರೋಕ್ಷ ಒತ್ತಾಯದ ಮೂಲಕ ಎರಡು ತಿಂಗಳ ರಜೆಗೆ ಕಳಿಸಿದರು. ಅವರ ಸ್ಥಾನವನ್ನು ಉಪಾಧ್ಯಕ್ಷೆ ಪದ್ಮಾವತಿ ಅವರು ವಹಿಸಿದರು. ಆಡಳಿತ ಮಾತ್ರ ಸುಧಾರಿಸಲಿಲ್ಲ.
ನಿದ್ರಾವಸ್ಥೆ: ಆನಂತರ ಲೋಕಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯೊಂದಿಗೆ ನಗರಸಭೆಯ ಆಡಳಿತ ನಿದ್ರಾವಸ್ಥೆಗೆ ಜಾರಿತು. ಲೋಕಸಭೆ ಚುನಾವಣೆಯ ಕಾರ್ಯದ ಒತ್ತಡ ಮತ್ತು ನಗರಸಭೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿ ಸಂಘಟನೆಗಳು ನಡೆಸಿದ್ದ ಹೋರಾಟದ ಫಲವಾಗಿ ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಲು ಹೆದರಿದ ನಗರಸಭೆ ಆಯುಕ್ತ ಬಸಪ್ಪ, ರಜೆ ಮೇಲೆ ತೆರಳಿದರು.
ಅಸಮಾಧಾನ: ಈ ಎಲ್ಲ ಅವ್ಯವಸ್ಥೆ, ರಾಜಕೀಯ ದೊಂಬರಾಟದ ಫಲವಾಗಿ ನಗರಸಭೆಯ ಆಡಳಿತ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ನಾಗರಿಕರಲ್ಲಿ ಕಾಡತೊಡಗಿದೆ. ವಿವಿಧ ಹುದ್ದೆಗಳಲ್ಲಿ ಪ್ರಭಾರಿ ಅಧಿಕಾರಿಗಳು, ಪ್ರಭಾರಿ ಅಧ್ಯಕ್ಷರು ಹೀಗೆ ಸಾಲು ಸಾಲು ಪ್ರಭಾರಿಗಳ ಆದೇಶಗಳಿಗೆ ಸಿಬ್ಬಂದಿಯಿಂದಲೂ ಸೂಕ್ತ ಸ್ಪಂದನೆ ದೊರೆಯದೇ ಒಟ್ಟಾರೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ.
ಅವ್ಯವಸ್ಥೆ: ನಗರದ ಜನತೆ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ನಗರಸಭೆಯ ಬದಲಿಗೆ ಜಿಲ್ಲಾಡಳಿತದ ಮೊರೆ ಇಡುವಂತಾಗಿದೆ. ನಗರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಬಹುತೇಕ ಪ್ರದೇಶದಲ್ಲಿ ಚರಂಡಿ ಕೊಳೆ ನೀರು ರಸ್ತೆಗೆ ನುಗ್ಗಿ ಸಂಚಾರ, ಜನಜೀವನಕ್ಕೆ ಅಡಚಣೆಯಾಗಿದೆ.  ನಗರಕ್ಕೆ ಇದೇ ವೇಳೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರನ್ನು ಪತ್ರಕರ್ತರು ನಗರದ ಸುತ್ತು ಒಂದು ಸುತ್ತು ಹಾಕಲು ಒತ್ತಾಯಿಸಿದರೂ ಅವರು ಮಾತ್ರ ನಗರದೊಳಕ್ಕೆ ಕಾಲಿಡುವ ಧೈರ್ಯ ಮಾಡಲಿಲ್ಲ.
2009ರ ಪ್ರವಾಹ: 2009ರ ಪ್ರವಾಹದ ಸಂದರ್ಭ ಆಗಿನ ಜಿಲ್ಲಾಧಿಕಾರಿ ಅನ್ಬುಕುಮಾರ್ ನಗರದ ರಾಜಾ ಕಾಲುವೆ(ಮುಖ್ಯ ಚರಂಡಿ) ಸ್ವಚ್ಛತೆಯನ್ನು ಅಭಿಯಾನದ ರೂಪದಲ್ಲಿ ಕೈಗೊಂಡಿದ್ದರು.
   ಆಗ ಸ್ವಚ್ಛತೆ ಕಂಡಿದ್ದ ರಾಜಾ ಕಾಲುವೆ ಮತ್ತೆ ಆ ಪ್ರಮಾಣದಲ್ಲಿ ಸ್ವಚ್ಛಗೊಂಡಿಲ್ಲ. ತ್ಯಾಜ್ಯ ವಿಲೇವಾರಿಯಲ್ಲಿನ ವಿಳಂಬ ಹಾಗೂ ನಿರ್ಲಕ್ಷ್ಯಕ್ಕೆ ತ್ಯಾಜ್ಯ ಚರಂಡಿ ಸೇರುವುದು ಸಾಮಾನ್ಯ. ಪರಿಣಾಮ ಅಲ್ಪ ಮಳೆಗೇ ಚರಂಡಿ ನೀರು ರಸ್ತೆಗೆ ನುಗ್ಗುವುದು, ತಗ್ಗುಪ್ರದೇಶದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯ ಎಂಬಂತಾಗಿದೆ.
ಮುಂದೆ ಮುಂಗಾರು ಮಳೆಗಾಲವಿದೆ. ಈಗಲಾದರೂ ನಗರಸಭೆ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.  ಮುಖ್ಯ ಚರಂಡಿ ಸೇರಿ ಎಲ್ಲ ಚರಂಡಿಗಳ ಸ್ವಚ್ಛತೆ ಮೂಲಕ ಹಾನಿ ತಡೆಯುವ ಕಾರ್ಯ ಮಾಡಬೇಕಿದೆ. ನಗರದ ಜನಾರೋಗ್ಯದೆಡೆಗೆ ಕನಿಷ್ಠ ಕಾಳಜಿ ಪ್ರದರ್ಶಿಸುವುದು ಆಗತ್ಯ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement