ರೈತರಿಗೆ ಕಾಲುವೆ ನೀರು ಮರೀಚಿಕೆ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 19
ಕೃಷ್ಣಾಭಾಗ್ಯ ಜಲನಿಗಮದ ನಿರ್ಲಕ್ಷ್ಯದಿಂದ ನಾರಾಯಣಪುರ ಬಲದಂಡೆ ಮುಖ್ಯ ಕಾಲವೆಯ ಕೆಲ ವಿತರಣಾ ನಾಲೆಗಳು ಸಿಮೆಂಟ್ ಕಿತ್ತು ಹೋಗಿದ್ದು, ಇನ್ನು ಕೆಲ ನಾಲೆಗಳಲ್ಲಿ ಹೂಳು ತುಂಬಿವೆ. ಬರುವ ದಿನಗಳಲ್ಲಿ ರೈತರ ಜಮೀನುಗಳಿಗೆ ನೀರು ಹರಿಯುವುದು ಅನುಮಾನವಾಗಿ ಅಧೋಗತಿಗೀಡಾಗಿವೆ.
ಇದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಗುಂತಗೋಳ ಗ್ರಾಪಂ ವ್ಯಾಪ್ತಿಯ ಗೋನವಾಟ್ಲ ತಾಂಡಾದ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಬಳಿ ಹಾದು ಹೋಗಿರುವ ನಾರಾಯಣಪುರ ಬಲದಂಡೆ ವಿತರಣಾ ಕಾಲುವೆ ಗೋನವಾಟ್ಲಾ, ಗೋನವಾಟ್ಲ ತಾಂಡಾ, ಫೂಲಬಾವಿ, ಫೂಲಬಾವಿ ತಾಂಡಾ, ಗುಂತಗೋಳ ಸೇರಿದಂತೆ ಅನೇಕ ಹಳ್ಳಿ, ದೊಡ್ಡಿ, ತಾಂಡಾಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಲು ನಿರ್ಮಿಸಿದ ಕೆಲವೇ ವರ್ಷಗಳಲ್ಲಿ ಕಾಲುವೆಯಲ್ಲಿ ಕಲ್ಲು, ಮಣ್ಣು, ಉಸುಕಿನಿಂದ ಹೂಳು ತುಂಬಿದ್ದು, ಎಲ್ಲೆಂದರಲ್ಲಿ ಸಿಮೆಂಟ್ ಕಾಂಕ್ರಿಟ್ ಕಿತ್ತು ಹೋಗಿದೆ. ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲವೆಡೆ ಡ್ರಾಪ್‌ಗಳ ಗೋಡೆಗಳು ಕಾಲುವೆಯಲ್ಲಿ ಮುಗುಚಿ ಬಿದ್ದು, ಸಮರ್ಪಕವಾಗಿ ನೀರು ಹರಿಯಲು ಅಡ್ಡಿಯಾಗಿವೆ.
ವೀಕ್ಷಣಾ ರಸ್ತೆ ಹಾಳು: ಹತ್ತಾರು ದೊಡ್ಡಿಗಳಲ್ಲಿ ಹಾದು ಹೋಗಿರುವ ನಾಲೆಗೆ ಅನೇಕ ಕಡೆಗಳಲ್ಲಿ ನಿರ್ಮಿಸಿರುವ ಸೇತುವೆ, ಸಿಡಿಗಳು ಸಂಪೂರ್ಣವಾಗಿ ಕುಸಿದಿವೆ. ನಾಲೆಯ ಎರಡೂ ಬದಿಯ ಲೈನಿಂಗ್ ಅನೇಕ ಕಡೆಗಳಲ್ಲಿ ಕಿತ್ತುಹೋಗಿ ಎಲ್ಲೆಂದರಲ್ಲಿ ನೀರು ವೃಥಾ ಪೋಲಾಗುತ್ತದೆ. ನಾಲೆಯ ಎರಡೂ ಬದಿಗಳು ಜಖಂಗೊಂಡಿರುವುದರಿಂದ ನೀರು ನಿರಂತರ ಸೋರಿಕೆಯಾಗಿ ಕೆಲವೆಡೆ ವೀಕ್ಷಣಾ ರಸ್ತೆ ಹಾಳಾಗಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರನ್ನು ಚಿಂತೆಗೀಡು ಮಾಡಿದೆ. ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳ ನಿರ್ವಹಣೆ ನಿರ್ಲಕ್ಷ್ಯದಿಂದ ಹಾಳಾಗಿದ್ದು, ಇನ್ನು ನಾಲೆ ವ್ಯಾಪ್ತಿಯ ಉಪವಿತರಣಾ ನಾಲೆ, ಹೊಲಗಾಲುವೆ, ನೆಲಗಾಲುವೆಗಳು ದುರ್ಗತಿಗೀಡಾಗಿವೆ. ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯಲು ಸಾಧ್ಯವೇ ಎಂಬ ಪ್ರಶ್ನೆ ರೈತರನ್ನು ಕಾಡತೊಡಗಿದೆ.
ಲೂಟಿ: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಬಹುತೇಕ ವಿತರಣಾ ಕಾಲುವೆಗಳು ಸಂಪೂರ್ಣ ಕಲ್ಲು, ಮಣ್ಣು, ಉಸುಕು ಸೇರಿದಂತೆ ಹೂಳು ತುಂಬಿದ್ದು, ಗಿಡ - ಮರಗಳಿಂದ ಮುಚ್ಚಿ ಹೋಗಿವೆ.
ನಾಲೆಗೆ ನಿರ್ಮಿಸಿದ ಡ್ರಾಪ್‌ಗಳು ಕಾಲುವೆಯಲ್ಲಿ ಮುಗುಚಿ ಬಿದ್ದಿವೆ. ಪ್ರತಿವರ್ಷ ನಾಲೆಗಳ ದುರಸ್ತಿಗೆಂದು ಲಕ್ಷಾಂತರ ರುಪಾಯಿ ಖರ್ಚು ಮಾಡಲಾಗಿದೆ ಎಂದು ಕೇವಲ ದಾಖಲೆಗಳಲ್ಲಿ ತೋರಿಸಿ, ಲೂಟಿ ಮಾಡುವಲ್ಲಿ ನೀರಾವರಿ ಅಧಿಕಾರಿಗಳು ನಿರತರಾಗಿದ್ದಾರೆ.
ರಾಂಪುರ ಏತನೀರಾವರಿ ಯೋಜನೆಯ 2ನೇ ಹಂತದ ಕಾಲುವೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಜಲಸಂಪೂನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ರೈತ ಸಂಘದಿಂದ ಬಲದಂಡೆ ಮುಖ್ಯ ಕಾಲುವೆ, ವಿತರಣಾ ಕಾಲುವೆಗಳನ್ನು ಸಂಪೂರ್ಣ ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ, ಕೂಡಲೇ ಕೆಬಿಜೆಎನ್‌ಎಲ್ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಾಲುವೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.
ಅಮರೇಶಸ್ವಾಮಿ ಬಲ್ಲಟಗಿ