ಸುರಾನಾ ಇಂಡಸ್ಟ್ರೀಸ್ಗೆ ಡಿಸಿ ಎಚ್ಚರಿಕೆ
ರಾಯಚೂರು: ಕಾರ್ಮಿಕರ ಕಾಯಿದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸುರಾನಾ ಇಂಡಸ್ಟ್ರೀಸ್ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಿಐಟಿಯು ಸಂಘಟನೆ ನಗರದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಕಾರ್ಮಿಕರ ಹಾಗೂ ಸುರಾನಾ ಕಂಪನಿಯ ಆಡಳಿತ ಮಂಡಳಿ ಜಂಟಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡಳಿಯು ಏಕಪಕ್ಷೀಯವಾಗಿ ಎಲ್ಲ ಕಾರ್ಮಿಕರಿಗೆ ಪೂರ್ಣ ಮತ್ತು ಅಂತಿಮ ಸೆಟ್ಲಮೆಂಟ್ ಚೆಕ್ಗಳನ್ನು ಅಂಚೆ ಮುಖಾಂತರ ಕಳಿಸಿ ಉತ್ಪಾದನೆ ಸ್ಥಗಿತಗೊಳಿಸಿರುವುದು ಕಾನೂನು ಬಾಹಿರವಾಗಿದೆ.
ಆಡಳಿತ ಮಂಡಳಿಯವರು ಕಾರ್ಮಿಕರ ಕಾನೂನುಗಳನ್ನು ಚಾಚೂ ತಪ್ಪದೇ ಪಾಲಿಸದಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರೆಂದು ಹೇಳಿದೆ.
ಕಾನೂನು ಉಲ್ಲಂಘನೆ: ಕಾರ್ಮಿಕ ಮುಖಂಡರು ಮಾತನಾಡಿ, ಮೊದಲಿನಿಂದಲೂ ಆಡಳಿತ ಮಂಡಳಿಯು ಕಾರ್ಮಿಕರ ಕಾನೂನು ಉಲ್ಲಂಘಿಸಿ ಚಟುವಟಿಕೆ ನಡೆಸುತ್ತಿದೆ. ಅದೇ ರೀತಿ ಜಿಲ್ಲಾಡಳಿತದ ಗಮನಕ್ಕೆ ತರದೇ ಬೇರೆ ಸಂಸ್ಥೆಗೆ ಕಾರ್ಮಿಕರನ್ನು ವರ್ಗಾವಣೆ ಮಾಡಲಾಗಿದೆ ಎಂದು ದೂರಲಾಯಿತು ಎಂದು ತಿಳಿಸಿದೆ. ಮೂರು ತಿಂಗಳಿಂದ ಸಂಬಳ ಪಾವತಿಸದಿರುವ ಬಗ್ಗೆ ಉಪಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಿ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿಯೇ ಏಕಪಕ್ಷೀಯವಾಗಿ ಎಲ್ಲ ಕಾರ್ಮಿಕರಿಗೆ ಮೂರು ತಿಂಗಳ ಸಂಬಳ ಮತ್ತು ಪರಿಹಾರದ ಹಣವೆಂದು ಚೆಕ್ ಕಳುಹಿಸಿ ಮುಂದೆ ಸುರಾನಾ ಕಾರ್ಖಾನೆಗೂ ಕಾರ್ಮಿಕರಿಗೂ ಸಂಬಂಧವಿಲ್ಲ ಎಂದು ಪತ್ರ ಕಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಲಾಯಿತೆಂದು ಹೇಳಿದೆ.
ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ಆರತಿ ಮಾತನಾಡಿ, ಆಡಳಿತ ಮಂಡಳಿ ಹೊರಡಿಸಿರುವ ಎಲ್ಲ ಆದೇಶಗಳು ಕಾರ್ಮಿಕ ಕಾನೂನುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಯಾವುದೇ ಕಾರಣಕ್ಕೂ ಕಂಪನಿಯ ಆಡಳಿತ ಕೈಗೊಂಡ ನಿರ್ಣಯಗಳನ್ನು ಮನ್ನಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪತ್ರ ಬರೆಯಲು ಸೂಚನೆ ಆಡಳಿತ ಮಂಡಳಿ ಸೂಕ್ತ ಕಾರಣ ನೀಡದ ಕಾರಣಕ್ಕೆ ಆಡಳಿತ ಮಂಡಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕಾರ್ಮಿಕಾಧಿಕಾರಿ ಆರತಿ ಅವರಿಗೆ ಈ ವೇಳೆ ಸೂಚಿಸಿದ್ದಾರೆಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಹಕ್ಕುಗಳ ದಮನಕ್ಕೆ ಅವಕಾಶ ನೀಡುವುದಿಲ್ಲ. ರೈತರಿಂದ ಕಾರ್ಖಾನೆಗಾಗಿ ಭೂಮಿ ಖರೀದಿಸಿ ಕಾರ್ಖಾನೆ ನಡೆಸಲು ಸಾಧ್ಯವಾಗದಿದ್ದರೆ, ಕಂಪನಿಯಿಂದ ಜಮೀನು ವಾಪಸ್ ಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಡಿಸಿ ಆಡಳಿತ ಮಂಡಳಿಗೆ ಈ ವೇಳೆ ಎಚ್ಚರಿಸಿದ್ದಾರೆಂದು ಹೇಳಿದೆ.
16ರ ನಂತರ ಮತ್ತೊಂದು ಸಭೆ: ಮುಂದಿನ ಜಂಟಿ ಸಭೆಯಲ್ಲಿ ಕಾರ್ಮಿಕ ಕಾನೂನುಗಳ ಪಾಲನಾ ವರದಿಯೊಂದಿಗೆ ಹಾಜರಾಗುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮೇ 16ರ ನಂತರದಲ್ಲಿ ಮತ್ತೊಂದು ಸಭೆ ಕರೆಯಲಾಗುತ್ತದೆ.
ಗುಲ್ಬರ್ಗದ ಉಪಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ನಡೆಯುವ ಸಂಧಾನ ಸಭೆಗೆ ಆಡಳಿತ ಮಂಡಳಿಯ ಅಧಿಕೃತ ಜವಾಬ್ದಾರಿಯುತ ಅಧಿಕಾರಿ ಭಾಗವಹಿಸಬೇಕೆಂದು ತಾಕೀತು ಮಾಡಿದರೆಂದು ತಿಳಿಸಿದೆ.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ, ತಾಲೂಕು ಕಾರ್ಯದರ್ಶಿ ಡಿ.ಎಸ್. ಶರಣಬಸವ, ಸುರಾನಾ ಕಾರ್ಮಿಕ ಸಂಘದ ಅಧ್ಯಕ್ಷರಾಗಿರುವ ಎಚ್. ಸೂಗನಗೌಡ, ಪ್ರಧಾನ ಕಾರ್ಯದರ್ಶಿ ಆಗಿರುವ ನಾಗೇಂದ್ರ, ಶಂಕರ ನಾರಾಯಣ, ಸಿಐಟಿಯುನ ಯಂಕಪ್ಪ ಕೆಂಗಲ್, ಆಡಳಿತ ಮಂಡಳಿ ಪರವಾಗಿ ಕೃಷ್ಣ ಉಡುಪ, ಅಬ್ದುಲ್ ರಬ್ ವಕೀಲ್ ಮತ್ತಿತರರು ಪಾಲ್ಗೊಂಡಿದ್ದರೆಂದು ಸಿಐಟಿಯು ಪ್ರಕಟಣೆಯಲ್ಲಿ ತಿಳಿಸಿದೆ.