ತಾಂತ್ರಿಕ ಸಮಸ್ಯೆಯಿಂದ ಆರ್ಟಿಪಿಎಸ್ 4ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 4ನೇ ಘಟಕ ಸೋಮವಾರ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ.
ವಿದ್ಯುತ್ ಕೇಂದ್ರದ ನಾಲ್ಕನೇ ಘಟಕದ ಬಾಯ್ಲರ್ ಟ್ಯೂಬ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಅಧಿಕಾರಿಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಆರ್ಟಿಪಿಎಸ್ನ 5ನೇ ಘಟಕವು ಕಳೆದ ತಿಂಗಳ 26ರಿಂದ ದುರಸ್ತಿಯಲ್ಲಿದೆ. ಹಾಗಾಗಿ ಸದ್ಯ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ಎರಡು ಘಟಕಗಳ ಕಾರ್ಯ ಸ್ಥಗಿತಗೊಂಡಂತಾಗಿದೆ.
ರಾಜ್ಯ ಜಾಲಕ್ಕೆ 758 ಮೆವ್ಯಾ: ಸದ್ಯ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಘಟಕಗಳೂ ಅವುಗಳಿಗೆ ನಿಗದಿ ಮಾಡಿದ ಸಾಮರ್ಥ್ಯ 210 ಮೆ.ವ್ಯಾ.ನಷ್ಟು ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸುತ್ತಿಲ್ಲ. ಬದಲಿಗೆ ಒಂದನೇ ಘಟಕವು 168 ಮೆ.ವ್ಯಾ., ಎರಡನೇ ಘಟಕವು 142 ಮೆವ್ಯಾ, ಮೂರನೇ ಘಟಕವು 129 ಮೆವ್ಯಾ, ಆರನೇ ಘಟಕ 134 ಮೆವ್ಯಾ, ಏಳನೇ ಘಟಕ 79 ಮೆವ್ಯಾ ಹಾಗೂ ಎಂಟನೇ ಘಟಕವು 119 ಮೆವ್ಯಾ ವಿದ್ಯುತ್ ಉತ್ಪಾದಿಸುತ್ತಿವೆ. ಸೋಮವಾರ ಬೆಳಗ್ಗೆವರೆಗೆ ವಿದ್ಯುತ್ ಕೇಂದ್ರದಿಂದ 758 ಮೆವ್ಯಾ ವಿದ್ಯುತ್ತನ್ನು ರಾಜ್ಯ ಜಾಲಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿಯಲ್ಲಿಲ್ಲ ಎಂದು ಹೇಳುತ್ತಲೇ ಜಾರಿಗೊಳಿಸಿದೆ. ರಾಜ್ಯದ ಬೇಡಿಕೆಯ ಶೇ. 40ರಷ್ಟು ವಿದ್ಯುತ್ ಪೂರೈಸುವ ಆರ್ಟಿಪಿಎಸ್ ಘಟಕಗಳು ಮೇಲಿಂದ ಮೇಲೆ ಒತ್ತಡಕ್ಕೆ ಸಿಲುಕಿ ದುರಸ್ತಿಗೆ ಬರುವ ಮೂಲಕ ವಿದ್ಯುತ್ ಖೋತಾ ಆಗುತ್ತಿದೆ.