ಪಪಂ: ಚರಂಡಿ ಸ್ವಚ್ಛತೆಗೆ ಖಾಸಗಿ ಕಾರ್ಮಿಕರ ಬಳಕೆ
ಚ ಪಂಪಯ್ಯ ಮಠ
ಕ.ಪ್ರ. ವಾರ್ತೆ ್ಣ ಮುದಗಲ್ ್ಣ ಮೇ 12
ಪಟ್ಟಣದ 19 ವಾರ್ಡುಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿದ್ದು, ದುರ್ವಾಸನೆ ಎದ್ದಿದೆ. ಮಲೇರಿಯಾ, ಪೈಲೇರಿಯಾ, ಡೆಂಘೀ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಜನರು ಬಳಲುವಂತಾಗಿದೆ.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಿದ್ದು, ಪ್ರತಿ ವರ್ಷ ಸರ್ಕಾರದ ಅನುದಾನದಲ್ಲಿ ಚರಂಡಿಗಳ ನಿರ್ಮಾಣವಾಗುತ್ತಿವೆ. ದರೆ ಅವುಗಳ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆಯಿದ್ದು ಚರಂಡಿಗಳು ತ್ಯಾಜ್ಯ, ಹೂಳು ತುಂಬಿ ಕೊಳಕು ನೀರು ರಸ್ತೆಗೆ ಹರಿಯುತ್ತಿದೆ.
ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲೂ ನಿರ್ಮಿಸಲಾದ ಆಳೆತ್ತರದ ಚರಂಡಿಗಳು ಹೂಳು ತುಂಬಿ ವರ್ಷಗಳೇ ಕಳೆದಿವೆ. ಇರುವ ಕೆಲ ಪಪಂ ಕಾರ್ಮಿಕರಿಗೆ ಚರಂಡಿ ಸ್ವಚ್ಛಗೊಳಿಸಲು ಬಳಸಬೇಕಾದ ರಕ್ಷಾ ಕವಚಗಳಿಲ್ಲದೇ ಇರುವುದರಿಂದ ಚರಂಡಿ ಸ್ವಚ್ಛತೆ ಕಾರ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ.
ಖಾಸಗಿ ಕಾರ್ಮಿಕರಿಗೆ ಮೊರೆ: ಇನ್ನೊಂದೆಡೆ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಮುಂದೆ ಹಾದು ಹೋಗಿರುವ ಚರಂಡಿಗಳ ಸ್ವಚ್ಛತೆಗೆ ಖಾಸಗಿ ವ್ಯಕ್ತಿಗಳ ಮೊರೆ ಹೋಗಿದ್ದು, 'ರೋಗಿ ಬಯಸಿದ್ದು ಅನ್ನ ಹಾಲು, ವೈದ್ಯ ಹೇಳಿದ್ದು ಅನ್ನ ಹಾಲನ್ನೇ' ಎಂಬಂತೆ ಬಡ ಕೂಲಿ ಕಾರ್ಮಿಕರು ಕೈಗಳಿಗೆ ಯಾವುದಾದರೇನೋ ಕೆಲಸ ಎನ್ನುತ್ತಾ ರಕ್ಷಾ ಕವಚಗಳಿಲ್ಲದೇ ಚರಂಡಿ ಸ್ವಚ್ಛಗೊಳಿಸಿ ನಿತ್ಯ 200ರಿಂದ 300 ದುಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಚರಂಡಿ ನಿರ್ಮಾಣವಾದಾಗಿನಿಂದ ಹೂಳು ತೆಗೆಯದೇ ಇರುವ ಪಟ್ಟಣ ಪಂಚಾಯಿತಿ ಕರ್ತವ್ಯಕ್ಕೆ ಬೇಸತ್ತ ನಾಗರಿಕನೊಬ್ಬ ಖಾಸಗಿ ಕಾರ್ಮಿಕನೊಬ್ಬನಿಗೆ ತ್ಯಾಜ್ಯ ವಸ್ತು ತುಂಬಿದ ಚರಂಡಿ ಸ್ವಚ್ಛತೆಗೆ ಮುಂದಾಗಿರುವುದು ಪಪಂ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಒಮ್ಮೆಯೂ ಸ್ವಚ್ಛಗೊಳಿಸಿಲ್ಲ: ಪಪಂ ವ್ಯಾಪ್ತಿಯ ರಾಜ್ಯ ಹೆದ್ದಾರಿ ನಿರ್ಮಾಣದ ಹಂತದಲ್ಲಿಯ ಚರಂಡಿ ನಿರ್ಮಾಣದ ನಂತರ ಈವರೆಗೆ ಒಂದೂ ಬಾರಿ ಚರಂಡಿ ಸ್ವಚ್ಛಗೊಳಿಸಿಲ್ಲ. ಚರಂಡಿಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದ್ದರಿಂದ ಗಬ್ಬು ನಾರುತ್ತಿದ್ದು, ಬೇಸತ್ತ ನಾಗರಿಕನೊಬ್ಬ ಖಾಸಗಿ ಕಾರ್ಮಿಕನ ಸಹಾಯದಿಂದ ಕೊಳಕು ವಾಸನೆಯುಳ್ಳ ಚರಂಡಿಯಲ್ಲಿ ಹೊಲಸನ್ನು ತೆಗೆಯುತ್ತಿರುವ ದೃಶ್ಯ ನೋಡುಗರೇ ಅಸಹ್ಯ ಪಡುವಂತಿತ್ತು.
ರಾಜ್ಯದೆಲ್ಲೆಡೆ ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಚರಂಡಿಗಳಲ್ಲಿ ರಕ್ಷಾ ಕವಚಗಳಿಲ್ಲದೇ ಕಾರ್ಮಿಕರು ಇಳಿಯುವುದರಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾಗಿದೆ. ಪಪಂ ಕಾರ್ಮಿಕರು ಚರಂಡಿ ಸ್ವಚ್ಛಗೊಳಿಸದೇ ಇರುವುದರಿಂದ ಬೇಸತ್ತ ವ್ಯಾಪಾರಸ್ಥರು ಖಾಸಗಿ ಕೂಲಿಗಳನ್ನು ಬಳಸಿ ಚರಂಡಿ ಸ್ವಚ್ಛಗೊಳಿಸಿಕೊಂಡು ಕ್ರಿಮಿನಾಶಕಗಳ ಸಿಂಪಡಣೆ ಮಾಡಿ ಸುಂದರ ವಾತಾವರಣ ನಿರ್ಮಾಣ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಪಪಂ ಕಣ್ದೆರೆಯಲಿ: ಇನ್ನಾದರೂ ಪಪಂ ಆಡಳಿತ ಮಂಡಳಿ ತ್ಯಾಜ್ಯ ನಿರ್ವಹಣೆ ಹಾಗೂ ಚರಂಡಿ ಸ್ವಚ್ಛಗೊಳಿಸಲು ನಿಯೋಜಿಸಲಾದ ಕೂಲಿ ಕಾರರಿಗೆ ರಕ್ಷಾ ಕವಚಗಳನ್ನು ನೀಡಿ ಆರೋಗ್ಯ ಕಾಪಾಡಿಕೊಳ್ಳಲು ಸಹಕರಿಸಬೇಕಿದೆ.