ಶೇಕಡಾವಾರು ಸುಧಾರಣೆ, ಕಳಪೆ ಸಾಧನೆ
ಕ.ಪ್ರ. ವಾರ್ತೆ, ರಾಯಚೂರು, ಮೇ 13
ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ರಾಜ್ಯಮಟ್ಟದಲ್ಲಿ 23ನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಒಟ್ಟು ಶೇ. 84.22ರಷ್ಟು ಉತ್ತೀರ್ಣರಾಗಿದ್ದಾರೆ.
ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಮಂಗಳವಾರ ಬೆಳಗ್ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಯಿತು. ಪ್ರಸಕ್ತ ವರ್ಷ ಪರೀಕ್ಷೆಗೆ ಒಟ್ಟು 19454 ಮಕ್ಕಳು ಹಾಜರಾಗಿದ್ದರು. ಅವರಲ್ಲಿ 16385 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 10,676 ಬಾಲಕರ ಪೈಕಿ 8877 ಬಾಲಕರು ಉತ್ತೀರ್ಣರಾಗಿದ್ದಾರೆ. ಅದೇ ರೀತಿ 8778 ಬಾಲಕಿಯರ ಪೈಕಿ 7508 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಒಟ್ಟು ಉತ್ತೀರ್ಣತೆಯ ಪ್ರಮಾಣ ಶೇ.84.22ರಷ್ಟಾಗಿದೆ.
ಶೇಕಡಾ 100: ಪರೀಕ್ಷೆಯಲ್ಲಿ ಜಿಲ್ಲೆಯ 31 ಸರ್ಕಾರಿ ಶಾಲೆಗಳು, 1 ಅನುದಾನಿತ ಹಾಗೂ 34 ಅನುದಾನರಹಿತ ಶಾಲೆಗಳೂ ಸೇರಿದಂತೆ ಒಟ್ಟು 66 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಜಿಲ್ಲೆಯಲ್ಲಿ 681 ವಿದ್ಯಾರ್ಥಿಗಳು ಉನ್ನತಶ್ರೇಣಿಯನ್ನು ಗಳಿಸಿದ್ದಾರೆಂದು ಶಿಕ್ಷಣ ಇಲಾಖೆ ತಿಳಿಸಿದೆ.
ಲಿಂಗಸ್ಗೂರು ಫಸ್ಟ್: ಈ ಬಾರಿಯ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಲಿಂಗಸ್ಗೂರು ತಾಲೂಕು ಶೇಕಡಾವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಲಿಂಗಸ್ಗೂರು ತಾಲೂಕು ಶೇ. 89.88 ರಷ್ಟು ಅಂಕ ಪಡೆದಿದೆ. ಎರಡನೇ ಸ್ಥಾನದಲ್ಲಿ ದೇವದುರ್ಗ ಶೇ.86.17, ಮೂರನೇ ಸ್ಥಾನದಲ್ಲಿ ಮಾನವಿ ಶೇ.85.93, ನಾಲ್ಕನೇ ಸ್ಥಾನದಲ್ಲಿ ಸಿಂಧನೂರು ಶೇ. 83.49 ಹಾಗೂ ಕಡೆಯ ಸ್ಥಾನದಲ್ಲಿ ರಾಯಚೂರು ತಾಲೂಕಿನ ವಿದ್ಯಾರ್ಥಿಗಳು ಶೇ.78.70ರಷ್ಟು ಫಲಿತಾಂಶ ಪಡೆದಿದ್ದಾರೆ.
ಸಾಧನೆ ಕಳಪೆ: ಜಿಲ್ಲೆಯಲ್ಲಿ ಯಾವುದೇ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೂನ್ಯ ಸಂಪಾದಿಸಿಲ್ಲ ಎಂಬ ನೆಮ್ಮದಿ ಹೊರತುಪಡಿಸಿದರೆ, ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಹೇಳಿಕೊಳ್ಳುವಂತಿಲ್ಲ. ಕಳೆದ ವರ್ಷ ಜಿಲ್ಲೆಯ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇ.82.48 ಆಗಿತ್ತು. ಆ ವರ್ಷ ಜಿಲ್ಲೆಯು ರಾಜ್ಯದಲ್ಲಿಯೇ 14ನೇ ಸ್ಥಾನದಲ್ಲಿತ್ತು. ಈ ವರ್ಷ ಜಿಲ್ಲೆಯ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇ.84.22 ಆಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇ.1.74ರಷ್ಟು ಹೆಚ್ಚಳ ಕಂಡಿದೆ.
ಆದರೆ ರಾಜ್ಯಮಟ್ಟದಲ್ಲಿ ಇತರೆ ಜಿಲ್ಲೆಗಳ ವಿದ್ಯಾರ್ಥಿಗಳ ಉತ್ತಮ ಸಾಧನೆ ಮಾಡಿದ್ದು, ಜಿಲ್ಲೆಯನ್ನು ಕಳೆದ ಬಾರಿಯ 14ನೇ ಸ್ಥಾನದಿಂದ ಈ ಬಾರಿ 23ನೇ ಸ್ಥಾನಕ್ಕೆ ಜಿಲ್ಲೆ ತಳ್ಳಲ್ಪಟ್ಟಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೈಗೊಂಡ ಪ್ರಯತ್ನ ಕೈಗೂಡಿದೆಯಾದರೂ ರಾಜ್ಯಮಟ್ಟದಲ್ಲಿ ಜಿಲ್ಲೆಯ ಸಾಧನೆ ಕಳಪೆಯೇ ಆಗಿರುವುದು ಸುಳ್ಳಲ್ಲ.
ಟಾಪರ್: ಜಿಲ್ಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಸೇಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿನಿ ಯು.ಎಂ.ಶ್ರೀರಾಘವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾಳೆ. ರಾಘವಿ 625ಕ್ಕೆ 616 ಅಂಕ ಗಳಿಸಿದ್ದು ಶೇ.98.56ರಷ್ಟು ಸಾಧನೆ ಮಾಡಿದ್ದಾರೆ. ನಂತರ 2ನೇ ಸ್ಥಾನದಲ್ಲಿ ಮಾನವಿ ತಾಲೂಕಿನ ಸಿರವಾರದ ವಿಶ್ವಭಾರತಿ ರೆಸಿಡೆನ್ಸಿಯಲ್ ಶಾಲೆಯ ಪೂಜಾ ಹಳ್ಳಿಕೇರಿಮಠ 610 ಅಂಕ ಗಳಿಸಿ ಶೇ.97.6ರಷ್ಟು ಸಾಧನೆ ಮಾಡಿದರೆ ಶಕ್ತಿನಗರದ ಡಿಎವಿ ಪಬ್ಲಿಕ್ ಶಾಲೆಯ ವರ್ಷಾ 607(ಶೇ.97.12)ಅಂಕ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ನಗರದ ಆದರ್ಶ ಪ್ರೌಢಶಾಲೆ ವಿದ್ಯಾರ್ಥಿನಿ ಅಕ್ಷತಾ ಕೆ.ವಿ. ಅವರು 603 (ಶೇ.96.48) ಅಂಕ ಗಳಿಸಿ ನಾಲ್ಕನೇ ಸ್ಥಾನ ಮತ್ತು ಸಿಂಧನೂರಿನ ಇಂದಿರಾ ಪ್ರಿಯದರ್ಶಿನಿ ಶಾಲೆಯ ವಿನೀತ ಕುಮಾರ್ 602 ಅಂಕ ಗಳಿಸಿ ಶೇ. 96.32ರಷ್ಟು ಸಾಧನೆ ಮಾಡಿದ್ದಾರೆ.
ದೇವದುರ್ಗಕ್ಕೆ 2ನೇ ಸ್ಥಾನ
ದೇವದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇ.86.17 ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿಯ ಉತ್ತೀರ್ಣತೆಯ ಪ್ರಮಾಣ ಕುಸಿತ ಕಂಡಿರುವುದು ಸ್ಪಷ್ಟವಾಗಿದೆ. ಆದರೆ ಜಿಲ್ಲೆಯಲ್ಲಿ ತಾಲೂಕು ಎರಡನೇ ಸ್ಥಾನದಲ್ಲಿರುವುದು ಕೊಂಚ ಮಟ್ಟಿಗೆ ತೃಪ್ತಿದಾಯಕ ಸಂಗತಿ.
ತಾಲೂಕಿನಲ್ಲಿ ಈ ಬಾರಿ ಒಟ್ಟು 14 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ. ಈ ಪೈಕಿ ತಾಲೂಕಿನ ಮುಷ್ಟೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ 6ನೇ ಬಾರಿಗೆ ಶೇ.100ರಷ್ಟು ಫಲಿತಾಂಶ ಪಡೆದಿದೆ. ಹಾಗೆಯೇ ಹಿರೇಬೂದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ 6ನೇ ಬಾರಿಗೆ ನೂರರಷ್ಟು ಫಲಿತಾಂಶ ಪಡೆದಿದೆ. ಸ್ಥಳೀಯ ಡಾನ್ ಬಾಸ್ಕೋ ಪ್ರೌಢಶಾಲೆಯ ವಿದ್ಯಾರ್ಥಿ ಕೆ. ಮಧು ರಾಚನಗೌಡ 590 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮುಷ್ಟೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಾಮಣ್ಣ ವೆಂಕಣ್ಣ ಅವರು 584 ಅಂಕ ಪಡೆದು ದ್ವೀತಿಯ ಸ್ಥಾನ ಗಳಿಸಿದ್ದು, ಪಟ್ಟಣದ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಮಲ್ಲಮ್ಮ ಮಾಣಿಕರಡ್ಡಿ 580 ಅಂಕ ಗಳಿಸಿ ಮೂರನೇ ಸ್ಥಾನ ಗಳಿಸಿದ್ದಾರೆ. ಪಟ್ಟಣದ ಬಸವೇಶ್ವರ ಪ್ರೌಢಶಾಲೆಯ ಶೃತಿ ವೆಂಕರಡ್ಡಿ ಕನ್ನಡ ಭಾಷೆಯಲ್ಲಿ 125ಕ್ಕೆ ಅಂಕಕ್ಕೆ 124 ಅಂಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆಂದು ಶಾಲೆ ತಿಳಿಸಿದೆ.
ಮಾನವಿ ತಾಲೂಕಿಗೆ ಪೂಜಾ ಪ್ರಥಮ
ರಾಯಚೂರು: ಮಾನವಿ ತಾಲೂಕಿನ ಸಿರವಾರದ ವಿಆರ್‌ಎಸ್‌ಶಾಲೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪೂಜಾ 610 ಅಂಕ ಗಳಿಸಿ ಶೇ. 97.60ರಷ್ಟು ಸಾಧನೆ ಮಾಡಿ ಮಾನವಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆಂದು ಎಂದು ಬಿಇಒ ಚಂದ್ರಶೇಖರ ದೊಡ್ಡಮನಿ ತಿಳಿಸಿದ್ದಾರೆ. ಅದೇ ರೀತಿ ಸರ್ಕಾರಿ ಬಾಲಕರ ಶಾಲೆಯ ವಿದ್ಯಾರ್ಥಿ ಅನಿಲಕುಮಾರ್ 596 ಅಂಕ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ. ತಾಲೂಕಿನ 15 ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಅದರಲ್ಲಿ 5 ಸರ್ಕಾರಿ ಶಾಲೆಗಳು ಮತ್ತು 10 ಖಾಸಗಿ ಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ಪಡೆದಿವೆ ಎಂದು ತಿಳಿಸಿದರು.
ಬಲ್ಲಟಗಿ: ತಾಲೂಕಿನ ಬಲ್ಲಟಗಿಯ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಶೇ.99ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ ವಿದ್ಯಾರ್ಥಿನಿ ನವ್ಯಾ ಶೇ. 92ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಿವೇದಿತ ಮತ್ತು ರೇಣುಕಾ ಶೇ.90ರಷ್ಟು ಅಂಕಗಳನ್ನು ಗಳಿಸಿ 2ನೇ ಸ್ಥಾನ ಪಡೆದಿದ್ದಾರೆಂದು ಶಾಲೆ ತಿಳಿಸಿದೆ.