ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿದ್ದು ಸರ್ಕಾರದ ವರ್ಷ ಪೂರೈಕೆ ಜಿಲ್ಲೆಯ ಕಡೆಗಣನೆಗೆ ಟೀಕೆ

Mainashree
Updated On : 15 May 2014, 10:44 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 14
ರಾಜ್ಯದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1 ವರ್ಷದ ಅಧಿಕಾರವಧಿ ಪೂರೈಸಿದ್ದು, ಸಚಿವ ಸಂಪುಟದಲ್ಲಿ ಜಿಲ್ಲೆಯವರಿಗೆ ಪ್ರಾತಿನಿಧ್ಯ ದೊರೆಯದಿರುವುದು ಸಂತಸದ ವಿಚಾರವಲ್ಲ. ಜಿಲ್ಲೆಯನ್ನು ಸರ್ಕಾರ ಕಡೆಗಣಿಸಿರುವುದು ಹರ್ಷದ ವಿಷಯವಲ್ಲ ಎಂದು ಜನಸಂಗ್ರಾಮ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿಯೇ ಹಿಂದುಳಿದ ಹೈ.ಕ. ಭಾಗಕ್ಕೆ ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಶಿಫಾರಸಿನಂತೆ ಸಚಿವ ಸಂಪುಟ, ನಿಗಮ-ಮಂಡಳಿಗಳಲ್ಲಿ ಶೇ.25ರಷ್ಟು ಸ್ಥಾನಗಳು ಮೀಸಲಿಡಬೇಕು. ಆದರೆ ಜಿಲ್ಲೆಯ ಉಸ್ತುವಾರಿ ಸ್ಥಾನವನ್ನೇ ಪರರ ಪಾಲು ಮಾಡಲಾಗಿದೆ ಎಂದು ಟೀಕಿಸಿದರು.
ಸ್ಥಾನ ಕಲ್ಪಿಸಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತು ಕೇಳಿಬಂದಿದೆ. ಜಿಲ್ಲೆಯ ಮೂವರು  ಕಾಂಗ್ರೆಸ್ ಶಾಸಕರಿದ್ದಾರೆ. ಈ ಪೈಕಿ ಯಾರಾದರೂ ಒಬ್ಬರಿಗೆ ಸ್ಥಾನ ಕಲ್ಪಿಸುವುದು ಅವಶ್ಯಕ ಎಂಬುದನ್ನು ಸರ್ಕಾರ ಅರಿಯಬೇಕಿದೆ ಎಂದರು.
ಜಿಲ್ಲೆಯವರೇ ಉಸ್ತುವಾರಿ ಮಂತ್ರಿಯಾದರೆ ಪರಿಸ್ಥಿತಿ ಸುಧಾರಿಸುತ್ತದೆಂದು ಅಂದುಕೊಳ್ಳಬೇಕಿಲ್ಲ. ಜಿಲ್ಲೆಯ ಸಚಿವರಾದರೆ ಉತ್ತರದಾಯಿತ್ವ, ಹೊಣೆಗಾರಿಕೆ ಹೆಚ್ಚುತ್ತದೆ. ಜನರ ನಿರೀಕ್ಷೆಗೆ ಸ್ಪಂದಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಸೋಲಿಸಲು ಅವಕಾಶವಿರುತ್ತದೆ ಎಂದರು.
ಹೊರಜಿಲ್ಲೆಯವರು ಸಚಿವರಾಗಿರುವುದರಿಂದ ಅವರು ಜಿಲ್ಲೆಯ ಬಗ್ಗೆ ಉದಾಸೀನತೆ, ಅಸಡ್ಡೆ ಹೆಚ್ಚಿದೆ. ಹೀಗಾಗಿ ಜಿಲ್ಲೆಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ತುಂಗಭದ್ರಾ ಎಡದಂಡೆ, ನಾರಾಯಣಪೂರ ಬಲದಂಡೆ ಕಾಲುವೆಗಳ ಆಧುನೀಕರಣ, ಅಕಾಲಿಕ ಮಳೆಯಿಂದಾದ ಹಾನಿ, ಅನೇಕ ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೇ ನನೆಗುದಿಗೆ ಬಿದ್ದಿವೆ ಎಂದು ಹೇಳಿದರು.
ಹೋರಾಟ: ಅಭಿವೃದ್ಧಿ ಕೆಲಸಗಳು ಆಮೆ ಗತಿಯಲ್ಲಿದ್ದು, ಎಲ್ಲ ಹಂತದ ಆಡಳಿತ ಯಂತ್ರಾಂಗ ನಿಷ್ಕ್ರಿಯವಾಗಿದೆ. ತಟಸ್ಥ ಸ್ಥಿತಿ ವಿರುದ್ಧ ಸೆಟೆದು ನಿಂತು ಮಂತ್ರಿ ಮಂಡಲದಲ್ಲಿ ಈ ಬಾರಿ ಪ್ರಾತಿನಿಧ್ಯ ನೀಡಲೇಬೇಕು ಎಂದು ಹೋರಾಟ ನಡೆಸುವುದು ಅನಿವಾರ್ಯದೀತು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮೇ 18ರಂದು ಸಮಾನ ಮನಸ್ಕರ ಸಭೆ ಕರೆಯಲಾಗಿದೆ. ನಗರದ ಪತ್ರಿಕಾ ಭವನದಲ್ಲಿ ಈ ಸಭೆ ನಡೆಸಲಾಗುತ್ತಿದೆ. ಮಂತ್ರಿ ಮಂಡಲದಲ್ಲಿ ಜಿಲ್ಲೆಗೆ ಅವಕಾಶ ಸೇರಿ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಹೋರಾಟದ ರೂಪು-ರೇಷೆ ನಿರ್ಧರಿಸಲಾಗುವುದು ಎಂದರು.
ಪರಿಷತ್ನ ಜಿಲ್ಲಾ ಸಂಚಾಲಕ ಡಾ.ವಿ.ಎ. ಮಾಲಿಪಾಟೀಲ್, ಮುಖಂಡರಾದ ಭೀಮರಾಯ ಜರದಬಂಡಿ, ಅಕ್ಬರ್ ಹುಸೇನ್ ನಾಗುಂಡಿ, ಸಿರಾಜ್ ಅಹ್ಮದ್ ಜಾಫ್ರಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement