ಕೆಪಿಸಿಸಿ ಎಚ್ಚರಿಕೆ: ಒಗ್ಗಟ್ಟು ಪ್ರದರ್ಶನ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 16
ರಾಯಚೂರು ಲೋಕಸಭೆ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿತ್ತು. ಆದರೆ ಅಂಥ ನಂಬಿಕೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಿರುಗೇಟು ನೀಡಿ ಗೆಲವು ಸಾಧಿಸಿತ್ತು. ಬಳ್ಳಾರಿ ಗಣಿಧಣಿಗಳ ಅಬ್ಬರಕ್ಕೆ ಕಾಂಗ್ರೆಸ್ ಕೋಟೆ ಛಿದ್ರಗೊಂಡಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಕೋಟೆಯನ್ನು ಮತ್ತೆ ತನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಕಳೆದ ತಿಂಗಳ 16ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಗೆದ್ದಿದ್ದಾರೆ. ಕೇಂದ್ರ ಸರ್ಕಾರದ ಆಡಳಿತ ವಿರೋಧಿ ಅಲೆ, ಸುದೀರ್ಘ ಅವಧಿಗೆ ಕಾಂಗ್ರೆಸ್ ಆಡಳಿತ ನಡೆಸಿತೆಂಬ ವಾದದ ಮಧ್ಯೆಯೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.
ಕಾಂಗ್ರೆಸ್ ಪಾರುಪತ್ಯ: ರಾಯಚೂರು ಲೋಕಸಭೆ ಕ್ಷೇತ್ರ(ಈಗ ಎಸ್ಟಿಗೆ ಮೀಸಲು)ದಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌ನದ್ದೇ ಪಾರುಪತ್ಯ. ಒಮ್ಮೆ ಉಪಚುನಾವಣೆ ಸೇರಿ ಕ್ಷೇತ್ರದಲ್ಲಿ ನಡೆದ ಒಟ್ಟು 15 ಚುನಾವಣೆಯಲ್ಲಿ 12 ಬಾರಿ ಕಾಂಗ್ರೆಸ್ ಗೆದ್ದಿದೆ. ಒಬ್ಬರು ಹ್ಯಾಟ್ರಿಕ್ ಗೆಲವು ಕಂಡರೆ, ಮತ್ತೊಬ್ಬರು ಸತತ ಎರಡು ಗೆಲವು ಕಂಡ ಕ್ಷೇತ್ರವಿದು. ಸ್ವತಂತ್ರ ಅಭ್ಯರ್ಥಿ, ಬಿಜೆಪಿ ಮತ್ತು ಜೆಡಿಎಸ್ ಸಹ ಇಲ್ಲಿ ಒಂದು ಬಾರಿ ಗೆಲವು ಕಂಡಿವೆ.
ಒಗ್ಗಟ್ಟು ಪ್ರದರ್ಶನ: ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಎರಡು ಬಣಗಳಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದರಿಂದಾಗಿ ಇದುವರೆಗೆ ನಡೆದ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲವು ಕಠಿಣವಾಗಿತ್ತು. ಎರಡೂ ಬಣಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿಯೇ ಅಭ್ಯರ್ಥಿಗಳು ಬಳಲುತ್ತಿದ್ದರು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಸಮೀಕ್ಷೆಗಳಿಂದ ಸೋಲಿನ ಮುನ್ಸೂಚನೆ ದೊರೆಯುತ್ತಿದ್ದಂತೆಯೇ ಕೆಪಿಸಿಸಿ ನೀಡಿದ ಎಚ್ಚರಿಕೆಯ ಫಲವಾಗಿ ಎರಡೂ ಬಣಗಳು ತಾತ್ಕಾಲಿಕವಾಗಿಯಾದರೂ ಒಗ್ಗೂಡಿ ಚುನಾವಣೆ ಎದುರಿಸಿದ್ದು ಕಾಂಗ್ರೆಸ್‌ಗೆ ವರವಾಯಿತು.
ಸೋಲಿಗೆ ಕಾರಣ: ಬಿಜೆಪಿ ಸೋಲಿಗೆ ಆ ಪಕ್ಷದಲ್ಲಿನ ಆಂತರಿಕ ಕೆಲ ವಿಚಾರಗಳಲ್ಲಿನ ಗೊಂದಲ, ಅಭ್ಯರ್ಥಿ ಸರಳ, ಸಜ್ಜನರಲ್ಲ ಎಂಬ ವ್ಯಾಪಕ ಆರೋಪಗಳು, ಜತೆಗೆ ರಾಯಚೂರಿಗೆ ನರೇಂದ್ರ ಮೋದಿ ಬರುತ್ತಾರೆಂದು ಹೇಳುತ್ತಲೇ ಕಡೆಯ ಕ್ಷಣದಲ್ಲಿ ಅವರ ಪ್ರಚಾರ ಸಭೆ ರದ್ದಾಗಿದ್ದು ಬಿಜೆಪಿ ಸೋಲಿಗೆ ದಾರಿ ಮಾಡಿತು.
ತೆಲುಗು ಪ್ರಭಾವವಿರುವ ಈ ಕ್ಷೇತ್ರದಲ್ಲಿ ಕಡೆಯ ಅವಧಿಯಲ್ಲಿ ಪ್ರಚಾರ ಕೈಗೊಂಡ ತೆಲುಗು ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಪ್ರಭಾವ ಮತದಾರರ ಮೇಲೆ ಆಗಲಿಲ್ಲ ಎಂಬುದು ಫಲಿತಾಂಶದಿಂದ ನಿಚ್ಚಳವಾಗಿದೆ.
ಅಷ್ಟೇ ಅಲ್ಲ ಜೆಡಿಎಸ್ ಪಕ್ಷವು ಮೊದಲಿಗೆ ರಾಜಾ ಅಮರೇಶ್ವರ ನಾಯಕರ ಹೆಸರು ಅಂತಿಮಗೊಳಿಸಿತ್ತು. ಅವರು ಕಾಂಗ್ರೆಸ್ ಸೇರಿದ್ದರಿಂದ ಅಂತಿಮ ಕ್ಷಣದಲ್ಲಿ ದೂರದ ಬೆಳಗಾವಿಯವರನ್ನು ಅಭ್ಯರ್ಥಿಯಾಗಿಸಿದ್ದು ಜೆಡಿಎಸ್ ಸೋಲಿಗೆ ದಾರಿಯಾಯಿತು.
ಆಡಳಿತ ವಿರೋಧಿ ಅಲೆ: ಕಳೆದ ಬಾರಿ ರಾಯಚೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಳ್ಳಾರಿ ರೆಡ್ಡಿ ಸಹೋದರರ ಆಪ್ತ ಸಣ್ಣ ಪಕೀರಪ್ಪ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಬಳ್ಳಾರಿಯಲ್ಲಿದ್ದದ್ದೇ ಹೆಚ್ಚಾಗಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದ ಅವರು ಆನಂತರದಲ್ಲಿ ಬಿ.ಶ್ರೀರಾಮುಲು ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಕಟ್ಟುತ್ತಿದ್ದಂತೆಯೇ ಅವರೊಂದಿಗೆ ಸೇರಿಕೊಂಡು ರಾಯಚೂರು ಕ್ಷೇತ್ರವನ್ನೇ ಮರೆತರು. ಸ್ವತಃ ಪರಾಜಿತ ಅಭ್ಯರ್ಥಿ ಶಿವನಗೌಡರೂ ಇದನ್ನು ಒಪ್ಪಿಕೊಂಡಿದ್ದಾರೆ. ಕ್ಷೇತ್ರವನ್ನು ಕಡೆಗಣಿಸಿದ ಬಿಜೆಪಿ ಸಂಸದರಾಗಿದ್ದ ಸಣ್ಣಪಕೀರಪ್ಪ ಅವರ ವಿರೋಧಿ ಅಲೆಯು ಸದ್ಯದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಯಿತು ಎಂಬುದರಲ್ಲಿ ಸಂದೇಹವಿಲ್ಲ.
ಪ್ರತಿಷ್ಠೆಯಾಗಿತ್ತು: ಕಾಂಗ್ರೆಸ್ ಶಾಸಕರಿಗೆ ಶತಾಯಗತಾಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬುದು ಪ್ರತಿಷ್ಠೆಯ ವಿಷಯವಾಗಿತ್ತು. ಅದರಂತೆಯೇ ಪ್ರಚಾರದಲ್ಲಿ ತೊಡಗಿದ್ದರು. ಅದೂ ಪಕ್ಷದ ಗೆಲವಿಗೆ ದಾರಿ ಮಾಡಿದೆ.
ಜಗನ್ನಾಥ ಆರ್. ದೇಸಾಯಿ