ಶಾಸಕರ ಕಾರ್ಯವೈಖರಿಗೆ ಅತೃಪ್ತಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 16
ಕೇಂದ್ರ ಸರ್ಕಾರದ ಆಡಳಿತ ವಿರೋಧಿ ಅಲೆಯೀಗ ಕೇಳಿಬರುತ್ತಿರುವ ಮಾತು. ಆದರೆ ವಾಸ್ತವದಲ್ಲಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಒಟ್ಟು 8 ಕ್ಷೇತ್ರಗಳಲ್ಲಿ ಯಾದಗಿರಿ ಮತ್ತು ಶಹಾಪುರ ಹೊರತುಪಡಿಸಿ ಇನ್ನುಳಿದಂತೆ ಆರು ಕ್ಷೇತ್ರಗಳಲ್ಲಿ ಮತದಾರರು ಹಾಲಿ ಶಾಸಕರ ಕಾರ್ಯವೈಖರಿಗೆ ಅತೃಪ್ತಿಯನ್ನು ಮತದಾನದ ವೇಳೆ ವ್ಯಕ್ತಪಡಿಸಿದ್ದು ಬಹಿರಂಗಗೊಂಡಿದೆ.
ಲೋಕಸಭೆ ಕ್ಷೇತ್ರದ ಚುನಾವಣೆ ಮತಗಳ ಎಣಿಕೆ ವೇಳೆ ಇಂಥ ಒಂದು ಸತ್ಯ ಬಯಲಿಗೆ ಬಿದ್ದಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಡಾ. ಶಿವರಾಜ್ ಪಾಟೀಲ್ ಇದ್ದರೂ, ಜೆಡಿಎಸ್‌ಗೆ ದಕ್ಕಿದ್ದು ಕೇವಲ 1726. ಅದೇ ರೀತಿ ಲಿಂಗಸ್ಗೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಅವರಿದ್ದರೂ ಅಲ್ಲಿಯೂ ಜೆಡಿಎಸ್‌ಗೆ ಬಂದಿದ್ದು 2698 ಮತಗಳು ಮಾತ್ರ.
ಹೆಚ್ಚುವರಿ ಮತ: ಇನ್ನು ದೇವದುರ್ಗದಲ್ಲಿ ಕಾಂಗ್ರೆಸ್ ಶಾಸಕ ವೆಂಕಟೇಶ ನಾಯಕ ಅವರಿದ್ದರೂ, ಅವರ ವಿರುದ್ಧ ಮತದಾರರು ಬಿಜೆಪಿಗೆ ಹೆಚ್ಚುವರಿಯಾಗಿ 2995 ಮತಗಳನ್ನು ನೀಡಿದ್ದಾರೆ. ಮಾನವಿಯಲ್ಲಿ ಕಾಂಗ್ರೆಸ್ ಶಾಸಕ ಹಂಪಯ್ಯ ನಾಯಕ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಬೋಸರಾಜು ಅವರಿದ್ದರೂ, ಅಲ್ಲಿ ಬಿಜೆಪಿಗೆ 11638 ಮತಗಳು ಬಿಜೆಪಿಗೆ ಹೆಚ್ಚು ದೊರೆತಿವೆ.
ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಬಿಜೆಪಿಯ ತಿಪ್ಪರಾಜು ಪ್ರತಿನಿಧಿಸಿದ್ದು, ಅಲ್ಲಿನ ಮತದಾರರು ಕಾಂಗ್ರೆಸ್ ಗೆ 4575 ಹೆಚ್ಚಿನ ಮತ ನೀಡಿ ಶಾಸಕರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿದ್ದಾರೆ. ಆದರೆ ಅಲ್ಲಿನ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದು, ಆ ಪಕ್ಷಕ್ಕೆ ಹೆಚ್ಚುವರಿಯಾಗಿ 4082 ಮತ ನೀಡಿದ್ದಾರೆ.
ಯಶಸ್ವಿ: ಶಹಾಪುರದಲ್ಲಿ ಕೆಜೆಪಿ ಶಾಸಕ ಗುರು ಪಾಟೀಲ್ ಅವರಿದ್ದು, ಬಿಜೆಪಿಗೆ ಸೇರಿಲ್ಲ. ಪರಿಣಾಮ ಅಲ್ಲಿನ ಮತದಾರರು ಕಾಂಗ್ರೆಸ್‌ಗೆ 3249 ಮತಗಳ ಲೀಡ್ ನೀಡಿದ್ದಾರೆ. ಯಾದಗಿರಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಅವರಿದ್ದು, ಅವರು ಮಾತ್ರ ಕಾಂಗ್ರೆಸ್‌ಗೆ 3744 ಲೀಡ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಆಡಳಿತರೂಢ ಶಾಸಕರ ಕಾರ್ಯವೈಖರಿಯ ಬಗ್ಗೆ ಮತದಾರರು ಅತೃಪ್ತಿ ಹೊಂದಿರುವುದು ಲೋಕಸಭೆ ಚುನಾವಣೆ ಮೂಲಕ ಹೊರಹಾಕಿದ್ದಾರೆ.