ಸೋಲಿನ ಸೇಡು ತೀರಿಸಿಕೊಂಡ ತಂದೆ, ಮಗ
ರಾಯಚೂರು: ದೇವದುರ್ಗ ಕ್ಷೇತ್ರದಲ್ಲಿ ಇದುವರೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಮಾಜಿ ಸಚಿವ ಶಿವನಗೌಡ ನಾಯಕರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಮತ್ತು ಅವರ ತಂದೆ ದೇವದುರ್ಗದ ಹಾಲಿ ಶಾಸಕ ವೆಂಕಟೇಶ ನಾಯಕ ಈ ಹಿಂದಿನ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ ಕಾಂಗ್ರೆಸ್ ಪಕ್ಷದ ವಿಜಯಿ ಅಭ್ಯರ್ಥಿ ಬಿ.ವಿ. ನಾಯಕ ಅವರಿಗೆ 2008ರ ವಿಧಾನಸಭೆ ಚುನಾವಣೆಯಲ್ಲಿ ಗೆಲವು ಕಬ್ಬಿಣದ ಕಡಲೆಯಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಅವರ ಕೈಹಿಡಿದ್ದಾರೆ. ಹಿಂದೊಮ್ಮೆ ಅವರ ತಂದೆ, ದೇವದುರ್ಗದ ಹಾಲಿ ಶಾಸಕ ವೆಂಕಟೇಶ ನಾಯಕ ಅವರು ನಾಲ್ಕು ಬಾರಿ ಪ್ರತಿನಿಧಿಸಿದ್ದ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಸ್ಪರ್ಧೆಗೆ ಅವಕಾಶ: ರಾಜಕೀಯ ಹಿನ್ನೆಲೆಯ ಮನೆತನದ ಬಿ.ವಿ. ನಾಯಕ ತಂದೆ ವೆಂಕಟೇಶ ನಾಯಕ ಅವರು ರಾಯಚೂರು ಕ್ಷೇತ್ರದ ಸಂಸದರಾಗಿದ್ದ ನಾಲ್ಕು ಅವಧಿಯಲ್ಲಿ ಅವರ ನೆರಳಿನಲ್ಲಿಯೇ ಬೆಳೆದಿದ್ದಾರೆ. ಪರಿಣಾಮ ಕಾಂಗ್ರೆಸ್ ಪಕ್ಷವು 2008ರ ವಿಧಾನಸಭೆ ಉಪ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು.
2008ರ ಸೋಲಿನ ಸೇಡು: ಆಗ ಅವರು ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರ ವಿರುದ್ಧ ಸೋಲು ಕಂಡಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅದೇ ಶಿವನಗೌಡ ನಾಯಕ ಅವರೇ ಬಿ.ವಿ. ನಾಯಕರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕಳೆದ 2008ರ ಸೋಲಿನ ಸೇಡು, ಈ ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಂಡಂತಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ತಂದೆ ವೆಂಕಟೇಶ ನಾಯಕ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಶಿವನಗೌಡ ನಾಯಕರನ್ನು ಸೋಲಿಸುವ ಮೂಲಕ, 2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತಮಗಾಗಿದ್ದ ಸೋಲಿನ ಸೇಡು ತೀರಿಸಿಕೊಂಡಿದ್ದರು.
ಮೊದಲು ಸಂಸದರು: ವೆಂಕಟೇಶ ನಾಯಕ ಅವರ ಕುಟುಂಬದವರಿಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಯೋಗವಿಲ್ಲ ಎಂಬ ಮಾತಿದೆ. ಅದಕ್ಕೆ ಪೂರಕವೆಂಬಂತೆ ದೇವದುರ್ಗದ ಹಾಲಿ ಶಾಸಕ ವೆಂಕಟೇಶ ನಾಯಕ ಅವರು ನಾಲ್ಕು ಬಾರಿ ರಾಯಚೂರು ಲೋಕಸಭೆ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸಿ ಒಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತರವೇ ಕಳೆದ 2013ರ ಚುನಾವಣೆಯಲ್ಲಿ ಶಾಸಕರಾಗಿದ್ದಾರೆ.
ಅವರ ಪುತ್ರ ಬಿ.ವಿ. ನಾಯಕ ಸಹ ಕಳೆದ 2008ರ ವಿಧಾನಸಭೆ ಉಪಚುನಾವಣೆಯಲ್ಲಿ ಸೋಲು ಕಂಡಿದ್ದರು. ಅವರೇ ಮತ್ತೆ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಯೋಗದ ನಂಬಿಕೆಗೆ ಸಾಕ್ಷಿಯಾಗಿದ್ದಾರೆ.