ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ದೌರ್ಜನ್ಯ ಖಂಡಿಸಿ ಉಪವಾಸ ಸತ್ಯಾಗ್ರಹ

Lingaraj Badiger
Updated On : 19 May 2014, 11:12 am

ಸಿಂಧನೂರು: ತಾಲೂಕಿನ ಅರಳಹಳ್ಳಿ ಗ್ರಾಮದ ಮಲ್ಲಯ್ಯಸ್ವಾಮಿ ಹಾಗೂ ಇತರರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ಏಕಪಕ್ಷೀಯ ವಾದವನ್ನು ವಿರೋಧಿಸಿ ತಹಸೀಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅರಳಹಳ್ಳಿ ಗ್ರಾಮದ ಮಲ್ಲಮ್ಮ ಹಾಗೂ ಕೇದಾರನಾಥ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ಕುಟುಂಬದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಆರು ವರ್ಷಗಳ ಹಿಂದೆ ಕಾನೂನು ರೀತ್ಯ ವಿಭಾಗವಾಗಿದೆ. ಈ ಕುರಿತಂತೆ ನಮ್ಮ ಹೆಸರಿನಲ್ಲಿರುವ ಎಲ್ಲ ಕಾಗದ ಪತ್ರಗಳು ನಮ್ಮಲ್ಲಿವೆ. ಆದರೆ ಕಳೆದ ಒಂದು ತಿಂಗಳ ಹಿಂದೆ ವಿನಾಕಾರಣ ಮಲ್ಲಯ್ಯಸ್ವಾಮಿ ಇತರರು ದೌರ್ಜನ್ಯ ನಡೆಸಿದರು. ನಮ್ಮ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಮನೆಯವರನ್ನೆಲ್ಲ ಥಳಿಸಿ, ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಿದ್ದಾರೆ. ಬೀಗ ಕೊಡುವಂತೆ ಅನೇಕ ಬಾರಿ ವಿನಂತಿಸಿಕೊಂಡರೂ ನೀಡಿಲ್ಲ. ನಾವುಗಳೆಲ್ಲ ಉಟ್ಟ ಬಟ್ಟೆಯ ಮೇಲೆ ಒಂದು ತಿಂಗಳಿನಿಂದ ಹೊರಗಿದ್ದು, ಉಪವಾಸ ವನವಾಸ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮಲ್ಲಯ್ಯಸ್ವಾಮಿ ಸೇರಿದಂತೆ ಸುಮಾರು 15-16 ಜನ ಸೇರಿಕೊಂಡು ನಮ್ಮ ಮೇಲೆ ನಡೆಸುತ್ತಿರುವ ಮಾನಸಿಕ ಹಾಗೂ ದೈಹಿಕ ಹಲ್ಲೆಗಳನ್ನು ಖಂಡಿಸಿ ಪೊಲೀಸರಿಗೆ ದೂರು ನೀಡಿದ್ದೇವೆ. ಅಲ್ಲದೆ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದೇವೆ. ಇಷ್ಟಾದರೂ ಗ್ರಾಮೀಣ ಠಾಣೆ ಪಿಎಸ್‌ಐ ಎಸ್.ಎಂ. ಪಾಟೀಲ್ ನಮ್ಮನ್ನೇ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ತಹಸೀಲ್ದಾರ್ ಕಚೇರಿ ಎದುರು 19ರಂದು ಸತ್ಯಾಗ್ರಹ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಮಹಿಳಾ ಸಂಘಟನೆಗಳು, ಇನ್ನಿತರ ಸಂಘಟನೆಗಳು ಬೆಂಬಲ ನೀಡಬೇಕು ಎಂದು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement