ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅವ್ಯವಸ್ಥೆ 'ಅಮರ' ಸುಕ್ಷೇತ್ರ ಚ ಅಮರೇಶಸ್ವಾಮಿ ಬಲ್ಲಟಗಿ

Lingaraj Badiger
Updated On : 20 May 2014, 11:12 am

ಕ.ಪ್ರ. ವಾರ್ತೆ, ಲಿಂಗಸ್ಗೂರು, ಮೇ 19
ಹೈದ್ರಾಬಾದ್ ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಗುಡಗುಂಟಿ ಅಮರೇಶ್ವರ ದೇವಸ್ಥಾನ ಅಧಿಕಾರಿಗಳ ಮತ್ತು ಸಿಬ್ಬಂದಿ ನಿರ್ವಹಣೆ ನಿರ್ಲಕ್ಷ್ಯದಿಂದ ಅವ್ಯವಸ್ಥೆಯ ಆಗರವಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಪರದಾಡುವಂತಾಗಿದೆ.
ಸಾಕ್ಷಾತ್ ಶಿವನು ಬಾಲಕನ ರೂಪದಲ್ಲಿ ಧರೆಗಿಳಿದು ಬಂದು ಆದಯ್ಯ ಮಾಳಗುಂಡಮ್ಮ ದಂಪತಿಗಳ ಸಾಕು ಮಗನಾಗಿ ಅನೇಕ ಪವಾಡ ಸೃಷ್ಟಿಸಿ ಅಮರೇಶ್ವರ ಎಂಬ ಅಭಿದಾನ ಪಡೆದ. ನಂತರ ಲಿಂಗುವಿನಲ್ಲಿ ಶಾಶ್ವತವಾಗಿ ನೆಲೆಸಿದ ಎಂಬುದು ಪುರಾಣೇತಿಹಾಸದಿಂದ ತಿಳಿದು ಬರುತ್ತದೆ. ಇಂತಹ ಇತಿಹಾಸ ಪ್ರಸಿದ್ಧ ಅಮರೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ, ಮದುವೆ, ಜವಳ, ರುದ್ರಾಭಿಷೇಕ ಸೇರಿದಂತೆ ವರ್ಷವಿಡೀ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ಆದರೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಮೂಲ ಸೌಕರ್ಯ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಲಕ್ಷಾಂತರ ಆದಾಯವಿದ್ರೂ ಸೌಲಭ್ಯಗಳಿಲ್ಲ: ಸರ್ಕಾರದ ಧಾರ್ಮಿಕ ದತ್ತಿ(ಮುಜರಾಯಿ) ಇಲಾಖೆಗೆ ಒಳಪಡುವ ಅಮರೇಶ್ವರ ದೇವಸ್ಥಾನಕ್ಕೆ ಸಹಾಯಕ ಆಯುಕ್ತರು ಅಧ್ಯಕ್ಷರಾಗಿದ್ದು, ತಹಸೀಲ್ದಾರರು ಕಾರ್ಯದರ್ಶಿಗಳಾಗಿದ್ದಾರೆ. ದೇವಸ್ಥಾನದ ನಿರ್ವಹಣೆಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರತಿ ವರ್ಷ ಜಾತ್ರೆ ಸಮಯದಲ್ಲಿ ತೆಂಗಿನಕಾಯಿ, ನಾಟಕ ಕಂಪನಿ, ವ್ಯಾಪಾರಿ ಅಂಗಡಿಗಳಿಗೆ ಜಾಗದ ವ್ಯವಸ್ಥೆಗೆ ಕರೆದ ಟೆಂಡರ್‌ನಿಂದ ಲಕ್ಷಾಂತರ ರು. ಆದಾಯ ಬರುತ್ತದೆ.
ಅಲ್ಲದೆ ವರ್ಷವಿಡೀ ಇತರೆ ಧಾರ್ಮಿಕ ಕಾರ್ಯಕ್ರಮಗಳಿಂದ ದೇಣಿಗೆ ಮತ್ತು ಶುಲ್ಕ ರೂಪದಲ್ಲಿ ಲಕ್ಷಾಂತರ ರು. ಆದಾಯ ಬರುತ್ತದೆ. ಆದರೆ ಸಮರ್ಪಕ ಕುಡಿಯುವ ನೀರು, ವಿದ್ಯುತ್ ಪೂರೈಕೆ, ವಸತಿ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕೊರತೆ ಹಾಗೂ ನಿರ್ವಹಣೆ ನಿರ್ಲಕ್ಷ್ಯದಿಂದ ಭಕ್ತಾದಿಗಳು ಪರದಾಡುವಂತಾಗಿದೆ.
ಮನೆಗಳ ಸೋರಿಕೆ, ಅಶುಚಿತ್ವ: ದೇವಸ್ಥಾನದಲ್ಲಿ ಭಕ್ತರು ನೂರಾರು ವಸತಿ ಮನೆಗಳನ್ನು ನಿರ್ಮಿಸಿ ಸಮಿತಿ ಸುಪರ್ದಿಗೆ ವಹಿಸಿದ್ದಾರೆ. ಜಾತ್ರೆ ಹಾಗೂ ಇತರೆ ಕಾರ್ಯಕ್ರಮ ಸಂದರ್ಭದಲ್ಲಿ ವಸತಿ ಮನೆ ಮಾಲೀಕರು ಬಂದಾಗ ಮನೆ ನೀಡಲಾಗುತ್ತದೆ. ಬಾಕಿ ಸಮಯದಲ್ಲಿ ಅನ್ಯ ಭಕ್ತರಿಗೆ ಶುಲ್ಕ ಪಡೆದು ನೀಡಲಾಗುತ್ತದೆ. ಆದರೆ ಕೆಲ ಮನೆಗಳು ಮಳೆಯಿಂದ ಸೋರುತ್ತಿವೆ. ಅಶುಚಿತ್ವದಿಂದ ಕೂಡಿವೆ. ಇನ್ನು ಕೆಲ ಮನೆಗಳಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಶಾಶ್ವತವಾಗಿ ಬಿಡಾರ ಹೂಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ದೇವಸ್ಥಾನ ಹತ್ತಿರದ ಬಜಾರ್ ಬಾವಿಯಿಂದ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ವಿದ್ಯುತ್ ಕೊರತೆಯಿಂದ ಸಮರ್ಪಕ ನೀರು ಪೂರೈಕೆಯಾಗದ ಕಾರಣ 1.40 ಲಕ್ಷ ವೆಚ್ಚದಲ್ಲಿ ಜನರೇಟರ್ ಅಳವಡಿಸಲಾಗಿದೆ. ಆದರೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮೂಲೆಗೆ ಸೇರಿದೆ.
ಕಾರ್ಯಕ್ರಮಗಳ ರದ್ದು: ದೇವಸ್ಥಾನದಲ್ಲಿ ಮದುವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತವೆ. ಈ ವೇಳೆ ವಸತಿ ವ್ಯವಸ್ಥೆ, ಕುಡಿವ ನೀರು, ವಿದ್ಯುತ್ ಕೊರತೆಯಿಂದ ಕಾರ್ಯಕ್ರಮ ರದ್ದುಗೊಳಿಸಿ ಬೇರೆ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡುವ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಭಕ್ತರು ಆರೋಪಿಸುತ್ತಾರೆ.
ದೇವಸ್ಥಾನಕ್ಕೆ ಲಕ್ಷಾಂತರ ರು. ಆದಾಯ ಬರುತ್ತಿದ್ದರೂ ಸಮರ್ಪಕ ಕುಡಿಯುವ ನೀರು, ವಿದ್ಯುತ್, ವಸತಿ ಮನೆಗಳ ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.
ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ವಿವಿಧ ಚುನಾವಣೆಗಳಿಗೆ ಸ್ಪರ್ಧಿಸುವ ಮೊದಲು ದೇವರ ದರ್ಶನಾಶೀರ್ವಾದ ಪಡೆದು ಚುನಾವಣೆಯಲ್ಲಿ ಗೆಲ್ಲಿಸುವಂತೆ ಪ್ರಾರ್ಥಿಸುವುದು ಸಾಮಾನ್ಯ. ಜಯಗಳಿಸಿದ ನಂತರ ಉನ್ನತ ಸ್ಥಾನ ಹೊಂದಲು ಆಶೀರ್ವಾದ ಪಡೆಯುವುದೂ ಸಾಮಾನ್ಯ. ದೇವರ ಕೃಪೆಯಿಂದ ಬೇಡಿಕೆ ಈಡೇರಿದಾಗ ಅಧಿಕಾರ ಪಡೆದ ಜನಪ್ರತಿನಿಧಿಗಳು ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ಅಭಿವೃದ್ಧಿಯತ್ತ ಕಿಂಚಿತ್ತೂ ಗಮನ ಹರಿಸದಿರುವುದು ದುರಂತವೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement