ವೈಯಕ್ತಿಕ ಶೌಚಾಲಯ: ಜೂನ್‌ನಿಂದ ಜಾಗೃತಿ ಅಭಿಯಾನ: ವಿಜಯ ಜೋತ್ಸ್ನಾ
ಕ.ಪ್ರ. ವಾರ್ತೆ, ರಾಯಚೂರು, ಮೇ 20
ಪರಿಸರ ಸ್ವಚ್ಛತೆ ಕಾಯ್ದುಕೊಳ್ಳಲು ಜಿಲ್ಲೆಯಲ್ಲಿ ಪ್ರತಿ ಮನೆಗೆ ಒಂದು ಶೌಚಾಲಯ ಕಡ್ಡಾಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನಜಾಗೃತಿಗೆ ಜೂನ್ ತಿಂಗಳಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಜಿಪಂ ಸಿಇಒ ವಿಜಯ ಜೋತ್ಸ್ನಾ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಜಿಲ್ಲೆಯ ಎಲ್ಲ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಜೂನ್ ತಿಂಗಳಿನಿಂದ ಪ್ರತಿ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಶೌಚಾಲಯ ಜಾಗೃತಿ ಕಾರ್ಯಕ್ರಮ ನಿಟ್ಟಿನಲ್ಲಿ ಪ್ರತಿ ಗ್ರಾಪಂನಿಂದ ಆಯಾ ಪ್ರದೇಶದ ವ್ಯಾಪ್ತಿಯ ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವುದು ಅವಶ್ಯವಾಗಿದೆ ಎಂದ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ತಲಾ 10 ಸಾವಿರ ಸಹಾಯ ಧನ ನೀಡಲಾಗುತ್ತಿದೆ. ಇದರ ಬಳಕೆಗೆ ಜನತೆ ಮುಂದಾಗುವಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸಿಬ್ಬಂದಿ ಜತೆಗೂಡಿ ಗ್ರಾಮಗಳಲ್ಲಿ ಸಂಚರಿಸಿ ಒಂದು ದಿನ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದು ಸೂಚಿಸಿ, ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿ ಪ್ರಸ್ತಕ ಸಾಲಿನಲ್ಲಿ ಎಷ್ಟು ಶೌಚಾಲಯ ನಿರ್ಮಿಸಲಾಗಿದೆ. ನಿರ್ಮಿಸಬೇಕಾದ ಶೌಚಾಲಯಗಳೆಷ್ಟು ಹಾಗೂ ಅರ್ಧಮರ್ಧ ನಿರ್ಮಿಸಿದ ಶೌಚಾಲಯಗಳ ಬಗ್ಗೆ ಸಂಪೂರ್ಣ ಮಾಹಿತಿ ಜಿಪಂಗೆ ಒದಗಿಸುವಂತೆ ಆದೇಶಿಸಿದರು.
ವೈಯಕ್ತಿಕ ಶೌಚಾಲಯಗಳ ಬಗ್ಗೆ ಪ್ರತಿ ಗ್ರಾ.ಪಂ.ವಾರು ವರದಿಯನ್ನು ಕೂಡಲೇ ಜಿಪಂಗೆ ಸಲ್ಲಿಸಬೇಕು. ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಶರಣಬಸವ, ಸಿಎಒ ಮಹಾಂತೇಶ ಹಾಗೂ ಪಿಡಿಒಗಳು ಪಾಲ್ಗೊಂಡಿದ್ದರು.