ಶಾರ್ಟ್ ಸರ್ಕ್ಯೂಟ್: 2 ಎಮ್ಮೆ ಸಾವು
ಸಿಂಧನೂರು: ನಗರದ ಹೊರಭಾಗದಲ್ಲಿರುವ ಮೇಟಿಗೌಡ ಎನ್ನುವವರ ಹೊಲದ ಪಕ್ಕದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಅಲ್ಲಿ ಮೇಯಲು ಹೋಗಿದ್ದ ಎರಡು ಎಮ್ಮೆಗಳು ಶಾರ್ಟ್ ಸರ್ಕ್ಯೂಟ್ನಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸುಕಾಲಪೇಟೆಯ ಬಸಣ್ಣ ಮಹಾದೇವಪ್ಪ ದೋಟಿಹಾಳ ಎನ್ನುವವರಿಗೆ ಎಮ್ಮೆಗಳು ಸಾವನ್ನಪ್ಪಿವೆ. ಕಳೆದ ಎರಡ್ಮೂರು ತಿಂಗಳಿಂದ ಮಳೆ- ಗಾಳಿಗೆ ವಿದ್ಯುತ್ ಕಂಬದ ತಂತಿಗಳು ಕೆಳ ಹಂತದಲ್ಲಿ ಜೋತುಬಿದ್ದಿದ್ದು, ದುರಸ್ತಿಗೆ ಮುಂದಾಗಬೇಕಾದ ಕೆಪಿಟಿಸಿಎಲ್ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದರಿಂದ ಅಂದಾಜು 50 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಎಮ್ಮೆಗಳು ಅಸುನೀಗಿವೆ.
ಘಟನಾ ಸ್ಥಳಕ್ಕೆ ಕೆಪಿಟಿಸಿಎಲ್ ಅಧಿಕಾರಿ ಜಾನ್ವೆಸ್ಲಿ ಭೇಟಿ ನೀಡಿ, ತಮ್ಮ ವ್ಯಾಪ್ತಿಯಲ್ಲಿ ಈ ವಿದ್ಯುತ್ ಕಂಬಗಳು ಬರುವುದಿಲ್ಲ. ಗೊರೇಬಾಳ ವ್ಯಾಪ್ತಿಗೆ ಒಳಪಡುವುದರಿಂದ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಜೋತುಬಿದ್ದ ವಿದ್ಯುತ್ ತಂತಿಗಳಿಂದ ಎಮ್ಮೆಗಳು ಮೃತಪಟ್ಟಿದ್ದು, ಇನ್ನಷ್ಟು ಜೀವ ಹಾನಿ ಸಂಭವಿಸುವ ಮುಂಚೆ ಎಚ್ಚೆತ್ತುಕೊಂಡು ತಂತಿಗಳನ್ನು ಮೇಲಕ್ಕೆತ್ತರಿಸಬೇಕು. ಎಮ್ಮೆಗಳು ಮೃತಪಟ್ಟ ಹಿನ್ನೆಲೆಯಲ್ಲಿ ನಷ್ಟ ತುಂಬಿ ಕೊಡಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ.