ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷ್ಣೆ ಒಡಲು ಬಗೆದ ಮರಳು ದಂಧೆ ದುರಾಸೆ

Vishwanath S
Updated On : 22 May 2014, 11:09 am

ಕ.ಪ್ರ. ವಾರ್ತೆ , ರಾಯಚೂರು , ಮೇ 21
ಜಿಲ್ಲೆಯ ಕೃಷ್ಣಾ ನದಿಯಲ್ಲಿನ ಮರಳಿಗೆ ಕರ್ನಾಟಕ ಸೇರಿ ನೆರೆ ರಾಜ್ಯದಲ್ಲಿ ಭಾರೀ ಬೇಡಿಕೆಯಿರುವುದು ಅಕ್ರಮಕ್ಕೆ ಅವಕಾಶ ಕಲ್ಪಿಸಿದೆ. ಪರಿಣಾಮ ನದಿ ತೀರದಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿದೆ.   
ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸೇರಿ ಜಿಲ್ಲಾಡಳಿತ ಅಕ್ರಮಕ್ಕೆ ಕಡಿವಾಣ ಹಾಕುವಲ್ಲಿ ಸೋತಿವೆ. ಖೊಟ್ಟಿ ಪರ್ಮಿಟ್ ಬಳಕೆ ಮಾಡಿ ಮರಳು ಸಾಗಿಸುತ್ತಿರುವುದೂ ಇದೀಗ ಬೆಳಕಿಗೆ ಬಂದಿದೆ.
  ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳಿನ ಸಾಗಣೆ ಜಾಲ ಹರಡಿದೆ. ದೇವದುರ್ಗ ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ಸಹ ಗುತ್ತಿಗೆದಾರರೊಂದಿಗೆ ಕೈಜೋಡಿಸಿರುವುದು ನಿಚ್ಚಳ. ರಾಜಕೀಯ ಪ್ರಭಾವ ಅಕ್ರಮಕ್ಕೆ ಬೆಂಬಲ ವಾಗಿರುವುದು ಗೌಪ್ಯವಾಗಿಲ್ಲ.
  ದೇವದುರ್ಗ ತಾಲೂಕಿನ ಕೋಣಚಪಳಿ ಗ್ರಾಮದ ಬಳಿ ಅಕ್ರಮ ಮರಳು ಸಾಗಣೆ ದಂಧೆ ಜಾರಿಯಲ್ಲಿತ್ತು. ನದಿಗೆ ಅಡ್ಡಲಾಗಿ ಅಕ್ರಮ ಸೇತುವೆ ನಿರ್ಮಿಸಿ ಮರಳು ಸಾಗಿಸಲಾಗುತ್ತಿತ್ತು. ಅದಕ್ಕೆ ಸ್ವತಃ ಜಿಲ್ಲಾಡಳಿತವೇ ಅನುಮತಿಸಿತ್ತು. ಆದರೆ ಕೊನೆಗೆ ಒತ್ತಡಕ್ಕೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಸೂಚನೆ ಮೇರೆಗೆ ಅಕ್ರಮ ಸೇತುವೆ ತೆರವುಗೊಳಿಸಲಾಗಿದೆ.
ಅಧಿಕಾರಿಗಳ ಬೆಂಬಲ: ಅದೇ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಅಕ್ರಮ ಮರಳು ದಾಸ್ತಾನು ಮತ್ತು ಸಾಗಣೆ ಅವ್ಯಾಹತವಾಗಿ ಸಾಗಿದೆ. ದೇವದುರ್ಗದ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೂ ಅಕ್ರಮ ದಂಧೆಗೆ ಕೈಜೋಡಿಸಿದ್ದಾರೆಂಬ ಆರೋಪ ವ್ಯಾಪಕವಾಗಿದ್ದು, ಅದರಿಂದಾಗಿ ಅಕ್ರಮಕ್ಕೆ ತಡೆ ಹಾಕುವವರ್ಯಾರು ಎಂಬ ಪ್ರಶ್ನೆ ಎದ್ದಿದೆ.
  ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಸಹಾಯಕ ಆಯುಕ್ತ ಮಾರುತಿ ಸೇರಿ ಜಿಲ್ಲಾಡಳಿತದ ಅಧಿಕಾರಿಗಳು ದಾಳಿ ಮಾಡಿ ಈಚೆಗೆ 50ಕ್ಕೂ ಹೆಚ್ಚಿನ ಲಾರಿ, ಟ್ರ್ಯಾಕ್ಟರ್ ಮತ್ತು ಜೆಸಿಬಿ ಯಂತ್ರಗಳನ್ನು ವಶಕ್ಕೆ ಪಡೆದಿದ್ದು ಅಕ್ರಮಕ್ಕೆ ಸಾಕ್ಷಿಯಾಯಿತು. ಆದರೆ ಪ್ರತಿಯಾಗಿ ಬಿಗಿ ಕ್ರಮ ಸರ್ಕಾರ ಕೈಗೊಳ್ಳಲಿಲ್ಲ.
  ಅದೇ ರೀತಿ ಜಾಲಹಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾಡಳಿತದ ಅಧಿಕಾರಿಗಳು ಹಿಡಿದೊಪ್ಪಿಸಿದ್ದ ಆರು ಲಾರಿಗಳು ಮತ್ತು ಜೆಸಿಬಿ ಯಂತ್ರಗಳ ವಿರುದ್ಧ ದೇವದುರ್ಗದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸದಿರುವುದು ಅಕ್ರಮದಲ್ಲಿ ತೊಡಗಿರುವವರಿಗೆ ಕುಮ್ಮಕ್ಕು ನೀಡಿದಂತಾಯಿತು. ಲಾರಿಗಳು ಮತ್ತೆ ಎಂದಿನಂತೆಯೇ ಮರಳು ಸಾಗಿಸುವ ಕಾರ್ಯದಲ್ಲಿವೆ.
ಅಸಹಾಯಕ ಪೊಲೀಸ್: ಪೊಲೀಸ್ ಇಲಾಖೆ ದೂರು ದಾಖಲಾಗುವವರೆಗೆ ಕಾಯುವುದು ಅನಿವಾರ್ಯ. ಅದನ್ನೇ ಅಸ್ತ್ರವಾಗಿ ಬಳಸಿ ದಂಧೆ ಮುನ್ನಡೆದಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ಇತರೆ ಅಧಿಕಾರಿಗಳು ದಾಳಿಗೆ ಮುಂದಾಗುವ ವಿಷಯ ಗೌಪ್ಯವಾಗಿರಿಸಿದರೂ ದೇವದುರ್ಗದ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದಲೇ ಮರಳು ಸಾಗಣೆದಾರರಿಗೆ ದಾಳಿ ಮಾಹಿತಿ ರವಾನೆಯಾಗುತ್ತಿದೆ.
  ಅಧಿಕಾರಿಗಳು ರಾಯಚೂರಿನಿಂದ ದೇವದುರ್ಗ ತಲುಪುವ ವೇಳೆಗೆ ಮರಳು ಸಾಗಣೆದಾರರು ಸ್ಥಳದಿಂದ ಕಾಲ್ಕಿತ್ತುತ್ತಿದ್ದಾರೆ.
ನಕಲಿ ದಾಖಲೆ: ಜಿಲ್ಲಾಡಳಿತ ಅಕ್ರಮ ಮರಳು ದಂಧೆ ತಡೆಗೆ ಒತ್ತಡ ಬಂದ ಹಿನ್ನೆಲೆ ದಾಳಿ ನಡೆಯುತ್ತಿರುವುದರಿಂದ ಮರಳು ಸಾಗಣೆದಾರರು ರಂಗೋಲಿ ಕೆಳಗೆ ನುಸುಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಮರಳು ಸಾಗಣೆಗೆ ನೀಡಿದ ಪರ್ಮಿಟ್‌ನ ಖೊಟ್ಟಿ ದಾಖಲೆ ತಯಾರಿಸಿ ಮರಳು ಸಾಗಣೆಗೆ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಈಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇ.ವೆಂಕಟಯ್ಯ ಸಭೆಯಲ್ಲಿ ಹೇಳಿದ್ದರು. ಈ ಬಗ್ಗೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲಿದೆ ಎಂದು ಹೇಳಿದ್ದರು. ಆದರೆ ಕ್ರಮ ಮಾತ್ರ ಜರುಗಿಲ್ಲ.
ಕಾರ್ಯನಿರ್ವಹಣೆ ಪತ್ತೆ: ಸದ್ಯ ಬೆಂಗಳೂರು ಹಾಗೂ ರಾಯಚೂರು ಜಿಲ್ಲೆಯ ನೆರೆಯ ಜಿಲ್ಲೆಗಳಲ್ಲಿ ದೇವದುರ್ಗದ ಕೃಷ್ಣಾ ನದಿ ತೀರದ ಮರಳಿಗೆ ಭಾರೀ ಬೇಡಿಕೆಯಿದೆಯಂತೆ, ಅದೇ ಕಾರಣಕ್ಕೆ ದೇವದುರ್ಗದ ಹೆಸರಿನಲ್ಲಿ ಖೊಟ್ಟಿ ಪರ್ಮಿಟ್‌ಗಳ ಜಾಲ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸರ್ಕಾರದ ಅಧಿಕಾರಿಗಳನ್ನೇ ನೆಚ್ಚಿಕೊಳ್ಳದಂಥ ಸ್ಥಿತಿಯಿದೆ.
  ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಅಕ್ರಮವಾಗಿ ಮರಳು ಸಾಗಣೆಗೆ ತೊಡಗಿರುವವರು ದೇವದುರ್ಗ ತಾಲೂಕಿನಿಂದ ಮರಳು ಸಾಗಣೆಗೆ ಪರ್ಮಿಟ್ ನೀಡಲಾಗಿದೆ ಎಂಬ ರೀತಿಯಲ್ಲಿ ಖೊಟ್ಟಿ ದಾಖಲೆ ತಯಾರಿಸಿ ಮರಳು ಸಾಗಿಸುತ್ತಿದ್ದಾರೆ. ದೇವದುರ್ಗದಲ್ಲಿ ಅಕ್ರಮ ಮರಳು ದಂಧೆ ತಡೆಗೆ ವಿಫಲವಾಗಿರುವ ಲೋಕೋಪಯೋಗಿ ಇಲಾಖೆಯ ಎಇಇ ಭೀಮರೆಡ್ಡಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.
  ರಾಜಕೀಯ ಪ್ರಭಾವದಿಂದ ಅಕ್ರಮ ಮರಳು ಸಾಗಣೆ ಅವ್ಯಾಹತ ಸಾಗಿದೆ. ಸರ್ಕಾರದ ನಿಷ್ಕೃಯತೆಗೆ ಜಿಲ್ಲಾಡಳಿತದ ಅಧಿಕಾರಿಗಳು ಸೋತು ಸುಣ್ಣವಾಗಿದ್ದಾರೆ. ಅದೇ ವೇಳೆ ಮಾನವನ ದುರಾಸೆಗೆ ಕೃಷ್ಣೆ ಒಡಲಂತೂ ದಿನದಿಂದ ದಿನಕ್ಕೆ ಬರಿದಾಗುತ್ತಿರುವುದು ಆತಂಕಕಾರಿ ಸಂಗತಿ.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement