ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕನಸು ಸಾಕಾರಕ್ಕೆ ಮಾನಸಿಕ ಬದಲಾವಣೆ ಅಗತ್ಯ

Rashmi Kasaragodu
Updated On : 24 May 2014, 11:49 am

ಆಳಂದ: ಮೂಲನಿವಾಸಿ ಮಹಾಪುರುಷರ ಕನಸು ಸಹಕಾರ ಗೊಳಿಸಲು ಸಮಾಜದಲ್ಲಿನ ಮಾನಸಿಕ ಬದಲಾವಣೆ ಅಗತ್ಯವಾಗಿದೆ ಎಂದು ಉಸ್ತುರಿ-ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಜಿಡಗಾ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ 123ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.  ಸಮಾಜದಲ್ಲಿ ಮಾನಸಿಕವಾಗಿ ಇನ್ನೂ ಜಾತಿಯತೆ ಹೋಗಿಲ್ಲ. ಉನ್ನತ ಹುದ್ದೆಗಳಲ್ಲಿ, ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇನ್ನೂ ಮೇಲ್ಪಂಕ್ತಿಯವರೇ ಇದ್ದಾರೆ. ಹೀಗಾಗಿ ಶೋಷಿತರ ಮತ್ತು ಹಿಂದುಳಿದವರ ಭವಿಷ್ಯ ಇನ್ನೂ ಡೋಲಾಯಮಾನವಾಗಿದೆ. ಪ್ರಸಕ್ತ ದೇಶದಲ್ಲಿನ ಐದು ವರ್ಷದ ಆಳ್ವಿಕೆ ಮತ್ತೆ ಎರಡನೂರು ವರ್ಷಗಳ ಹಿಂದಿನ ವ್ಯವಸ್ಥೆಯನ್ನು ಭದ್ರಗೊಳ್ಳಿಸುವ ಪಿತೂರಿ ನಡೆಸಿ ಮನುವಾದಿಗಳ ಕೈಗೆ ದೇಶ ಕೊಡಲು ಹೊರಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಶ್ರೀಗಳು, ಡೊಂಗಿಗಳ ಮಾತು ನಂಬುದೆ ದಾಸ್ಯತ್ವದಿಂದ ಹೊರಬಂದು ಐಕ್ಯತೆ ಮತ್ತು ಜಾಗೃತಿ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸರ್ವರಿಗಾಗಿ ಸಂವಿಧಾನ: ಬಿಜಿವಿ ವಿಭಾಗಿಯ ಅಧ್ಯಕ್ಷ ಪ್ರಕಾಶ ಹಾಗರಗಿ ಮಾತನಾಡಿ, ಅಂಬೇಡ್ಕರ್ ಒಂದು ಜಾತಿ ಜನಾಂಗಕ್ಕಾಗಿ ಸಂವಿಧಾನ ಬರೆದಿಲ್ಲ. ಎಲ್ಲ ವರ್ಗದ ಜನರಿಗಾಗಿ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಜಯಂತಿ ಹೆಸರಿನಲ್ಲಿ ಕುಡಿದು ಕುಪ್ಪಳಿಸದೆ ಅರ್ಥಪೂರ್ಣವಾಗಿ ಆಚರಣೆ ತರುವ ಮೂಲಕ ಅವರನ್ನು ಅರ್ಥಮಾಡಿಕೊಂಡು ಅವರ ವಿಚಾರ ತತ್ವಗಳ ಪಾಲನೆ ಮಾಡಬೇಕು ಎಂದರು.
ಕರ್ನಾಟಕ ದಲಿತ ಸೇನೆ ಅಧ್ಯಕ್ಷ ಬಾಬುರಾವ್ ಅರುಣೋದಯ ಮಾತನಾಡಿ, ಅಂಬೇಡ್ಕರ್ ವಿಚಾರ ಸಾಹಿತ್ಯವನ್ನು ಅಧ್ಯಯನ ಮಾಡಿ ಆಚರಣೆಗೆ ಪ್ರಯತ್ನಿಸಿದರೆ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಹೋರಾಟದ ಬದುಕು: ದಲಿತ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಮಾತನಾಡಿ, ಬುದ್ಧನ ಶಾಂತಿ ಮಂತ್ರ ಬಸವಣ್ಣರ ಸಾಮಾಜಿಕ ಕ್ರಾಂತಿ ಮತ್ತು ಅಂಬೇಡ್ಕರ್ ಪರಿವರ್ತನೆಯ ಹೋರಾಟದ ಬದುಕು ಅನುಸರಿಸಬೇಕು ಎಂದರು.
ಎಂಜಿನಿಯರ್ ಬಸವರಾಜ ಕಾಳಕಿಂಗೆ ಹಾಗೂ ಗ್ರಾಪಂ ಸದಸ್ಯ ಚನ್ನವೀರ ಕಾಳಕಿಂಗೆ ಮಾತನಾಡಿದರು.  ಗ್ರಾಪಂ ಅಧ್ಯಕ್ಷ ಕಂಟು ರಾಠೋಡ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಯಾದವಾಡ, ದಯಾನಂದ ಶೇರಿಕಾರ, ಆನಂದ ಗಾಯಕವಾಡ, ಶರಣು ಕವಲಗಾ ದತ್ತಾತ್ರೆಯ ಪೂಜಾರಿ, ಸಂಗನಬಸವ ಲಾವಣಿ ಮತ್ತಿತರರು ಉಪಸ್ಥಿತರಿದ್ದರು.
  10ನೇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ನಂತರ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಶರಣಬಸಪ್ಪಾ ಕಾಳಕಿಂಗೆ ಕಾರ್ಯಕ್ರಮ ನಿರೂಪಿಸಿದರು. ಸಂದೀಪ ಕಾಳಕಿಂಗೆ ಸ್ವಾಗತಿಸಿದರು. ಸೂರ್ಯಕಾಂತ ಎನ್. ಜಿಡಗಾ ವಂದಿಸಿದರು.
ಜೂ. 2ರಂದು ಅಹೋರಾತ್ರಿ ಧರಣಿ


ಚಿಂಚೋಳಿ: ಸರ್ಕಾರಿ ಜಮೀನಿನಲ್ಲಿ ಅಕ್ರಮ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕೆಂದು ಹಲವು ವರ್ಷಗಳಿಂದ ರೈತರ ಪರವಾಗಿ ಹೋರಾಟ ನಡೆಸುತ್ತಿದ್ದರೂ ನಮ್ಮ ಬೇಡಿಕೆ ಈಡೇರಿಸಿಲ್ಲ.
  ಆದರಿಂದ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಜೂ. 2ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು. ಪಟ್ಟಣದ ಚಂದಾಪುರ ನಗರದ ಗಣೇಶ ಮಂದಿರದಲ್ಲಿ ಬಗರ್ ಹುಕುಂ ಸಾಗುವಳಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.    ರಾಜ್ಯದಲ್ಲಿ ಅನೇಕ ಕಡೆ ರೈತರು ಸರ್ಕಾರಿ ಜಮೀನು ಅಕ್ರಮ ಸಾಗುವಳಿ ಮಾಡಿ ಅನೇಕ ವರ್ಷಗಳೇ ಕಳೆದಿವೆ. ಆದರೆ ಅವರಿಗೆ ಹಕ್ಕು ಪತ್ರ ನೀಡಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಿಗೊಳಿಸಲು ಫಾರಂ 50 ಮತ್ತು 53 ಅರ್ಜಿಗಳನ್ನು ತುಂಬಲು ಮತ್ತೊಮ್ಮೆ ಕಾಲಾವಕಾಶ ನೀಡಬೇಕು.
 ಬರುವ ವಿಧಾನಸಭೆ ಅಧಿವೇಶನದಲ್ಲಿ ಕಾನೂನು ತಿದ್ದುಪಡಿಗೊಳಿಸಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕೆಂದು ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದರು.
ಸಮಾವೇಶದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಶರಣಬಸ್ಸಪ್ಪಾ ಮಮಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿದಾರರು 8 ಸಾವಿರ ರೈತರಿದ್ದಾರೆ.   ಆದರೆ ಅವರಿಗೆ ಇನ್ನುವರೆಗೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರ ನೀಡಿಲ್ಲ. ಬಡ ರೈತರಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದು ರೈತ ಸಮೂಹಕ್ಕೆ ಮಾಡಿದ ಅನ್ಯಾಯವಾಗಿದೆ. ಇಂತಹ ಕ್ರಮದ ವಿರುದ್ಧ ಸಿಡಿದೇಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯದರ್ಶಿ ಗೌರಮ್ಮ ಪಾಟೀಲ್ ಮಾತನಾಡಿದರು. ರೈತಸಂಘದ ಮುಖಂಡ ಪರಮೇಶ್ವರ ಹಲಚೇರಾ ಸ್ವಾಗತಿಸಿದರು. ಸಿದ್ದಾರ್ಥ ಠಾಕೂರ ನಿರೂಪಿಸಿದರು.
  ಪ್ರದೀಪ ತಿರಲಾಪುರ ಚಂದಾಪುರ ವಂದಿಸಿದರು. ಸಮಾವೇಶದಲ್ಲಿ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ, ಗೋಪಾಲ ಭಜಂತ್ರಿ, ಜಾಫರಖಾನ್ ಮಿರಿಯಾಣ, ದೇವಿದಾಸ ರಾಠೋಡ್ ಸೇರಿದಂತೆ ಇತರರು ಭಾಗವಹಿಸಿದ್ದರು. ಐನೋಳಿ, ಕುಂಚಾವರಮ, ಚಿಮ್ಮನಚೋಡ್, ವಲಯದ ರೈತರು ಭಾಗವಹಿಸಿದ್ದರು.


ರಾಜ್ಯ ದೇವಾಂಗ ನೇಕಾರ ಯುವಜನ ಸಮಾವೇಶ ನಾಳೆ
ಗುಲ್ಬರ್ಗ: ಸುರಪುರ ತಾಲೂಕಿನ ಮುದನೂರ ಗ್ರಾಮದಲ್ಲಿ ವಸ್ತ್ರದಾತ ಮಾಸಪತ್ರಿಕೆ ವತಿಯಿಂದ ಕರ್ನಾಟಕ ರಾಜ್ಯ ದೇವಾಂಗ ನೇಕಾರ ಯುವಜನ ಸಮಾವೇಶ ಮೇ 25ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿನೋದ.ಜೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಾಂಗ ಜನಾಂಗದಲ್ಲಿ ಅಭಿವೃದ್ಧಿ ಹಾಗೂ ಸಂಘಟನೆಯ ಬಲಪಡಿಸಲು ಯುವಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ದೇವಾಂಗ ಸಮಾಜದವರು ವಾಸವಾಗಿದ್ದಾರೆ. ರಾಜ್ಯದಲ್ಲಿ ದೇವಾಂಗ, ಆಂದ್ರದೇವಾಂಗ, ಕನ್ನಡ ದೇವಾಂಗ, ಹಟಗಾರ, ಶಿವಾಚಾರ, ಜಾಡ ಹೆಸರುಗಳಿಂದ ಸಮಾಜವನ್ನು ಗುರುತಿಸಲಾಗುತ್ತದೆ. ಸಮಾಜವನ್ನು ಒಂದುಗೂಡಿಸಿ ಸಂಘಟನೆ ಮಾಡುವ ಉದ್ದೇಶದಿಂದ ಯುವಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ದೇವಾಂಗ ಮಹಿಳಾ ಸಂಘವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾಜ ಬಾಂಧವರು ಆಗಮಿಸುವರು. ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಹೆಚ್. ಪಾರ್ವತಿ, ಮುಖಂಡ, ಬಿ. ನಾಗರಾಜ್, ಡಾ. ಜಿ.ರಮೇಶ, ಕೆ. ನಾರಾಯಣ, ಉಮಾಶಂಕರ್, ರಾಜೇಂದ್ರ ಹಂಚಿ ಸೇರಿದಂತೆ ಗುಲ್ಬರ್ಗ, ಯಾದಗಿರಿ ಮುಖಂಡರು ಭಾಗವಹಿಸುವರು.
ನಮೋ ಪ್ರಮಾಣ
ವಚನಕ್ಕೆ ಲಾಡು
ಲಿಂಗಸ್ಗೂರು: ನರೇಂದ್ರ ಮೋದಿ ಅವರು ಮೇ 26ರಂದು ಸಂಜೆ 6 ಗಂಟೆಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆ, ನಮೋ ಬ್ರಿಗೇಡ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಸೋಮವಾರ ಅದ್ಧೂರಿ ಮೆರವಣಿಗೆ ಮೂಲಕ ಲಾಡು ಹಂಚಲಾಗುವುದೆಂದು ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಸಕ್ರಿ ಹೇಳಿದರು. ್ಛಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ನೇತಾಜಿ ವೃತ್ತದ ಬಳಿಯ ಗದ್ದೆಮ್ಮ ದೇವಿ ದೇವಸ್ಥಾನದಿಂದ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಗುವುದು. ಈ ವೇಳೆ ಸಾರ್ವಜನಿಕರಿಗೆ ಲಾಡು ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಗುವುದು ಎಂದರು. ಬಲಿಷ್ಠ ರಾಷ್ಟ್ರ ನಿರ್ಮಾಣ ಮತ್ತು ಭ್ರಷ್ಟಾಚಾರ ರಹಿತ ಸಮಗ್ರ ಅಭಿವೃದ್ಧಿಗೆ ಒಬ್ಬ ನಾಯಕನ ಅವಶ್ಯಕತೆ ಇತ್ತು. ಹೀಗಾಗಿ ದೇಶದ ಜನತೆ ಈ ಬಾರಿ ಬದಲಾವಣೆ ಬಯಸಿ ಬಿಜೆಪಿ ಬೆಂಬಲಿಸುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಲಿದ್ದಾರೆ.  ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದರು. ಈ ವೇಳೆ ಮುಖಂಡರಾದ ಸಿದ್ಧು ಬಡಿಗೇರ, ವಿಶ್ವನಾಥ ಆನ್ವರಿ, ನರೇಶ್ ರಡ್ಡಿ ಸೇರಿದಂತೆ ಇದ್ದರು.
ಜವಳಿ ಸಚಿವರ ಪ್ರವಾಸ ನಾಳೆ
ಗುಲ್ಬರ್ಗ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರು ಮೇ 25ರಂದು ಬೆಳಗ್ಗೆ 7ಕ್ಕೆ ಯಶವಂತಪುರ- ಸೋಲಾಪೂರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ನಗರಕ್ಕೆ ಆಗಮಿಸುವರು. ಮಧ್ಯಾಹ್ನ 1ಕ್ಕೆ ಗುಲ್ಬರ್ಗದಿಂದ ಅಫಜಲ್ಪುರ ಪಟ್ಟಣಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ 3ಕ್ಕೆ ಆಯೋಜಿಸಿರುವ ನಿಜಶರಣ ಅಂಬಿಗರ ಚೌಡಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಗುಲ್ಬರ್ಗಕ್ಕೆ ಬಂದು ವಾಸ್ತವ್ಯ ಮಾಡುವರು. ಮೇ 26ರಂದು ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮೇ 27ರಂದು ಗುಲ್ಬರ್ಗದಲ್ಲಿ ಇಲಾಖೆಯ ಪ್ರಗತಿ ಹಾಗೂ ಕುಂದುಕೊರತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಗರದಲ್ಲಿ ವಾಸ್ತವ್ಯ ಮಾಡುವರು. ಮೇ 28ರಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮರಳಿ ಗುಲ್ಬರ್ಗಕ್ಕೆ ಬಂದು ರಾತ್ರಿ 8.40ಕ್ಕೆ ಸೋಲಾಪೂರ್- ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement