ಬದುಕು ಸಾರ್ಥಕ, ಸ್ಮರಣೀಯವಾಗಲಿ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 23
ಭೂಮಿ ಮೇಲೆ ಜನಿಸಿದ ಪ್ರತಿಯೊಂದು ಜೀವಿ ಅದರಲ್ಲೂ ಶ್ರೇಷ್ಠನೆನಿಸಿದ ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತ. ಇವೆರಡರ ಮಧ್ಯದ ಬದುಕು ಸಾರ್ಥಕವಾಗಬೇಕೆಂದು ಗಬ್ಬೂರು ಬೂದಿ ಬಸವೇಶ್ವರ ಸಂಸ್ಥಾನ ಮಠದ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ತಾಲೂಕಿನ ಯರಡೋಣ ಕ್ರಾಸ್ ಬಳಿಯ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳ 22ನೇ ಗುರುವಂದನಾ ಕಾರ್ಯಕ್ರಮದ ನಿಮಿತ್ತ ತುಲಾಭಾರ, ಧಾರ್ಮಿಕ ಸಭೆ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಉತ್ತಮ ಸಂಸ್ಕಾರ ಹೊಂದುವ ಜೊತೆಗೆ ಸರಳ- ಸಜ್ಜನಿಕೆಯ ಜೀವನ ನಡೆಸಬೇಕು. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಆದ್ಯತೆ ನೀಡುವ ಮೂಲಕ ನೂತನ ವಧು- ವರರು ಸುಖ ಜೀವನ ಸಾಗಿಸಬೇಕೆಂದು ಕರೆ ನೀಡಿದರು.
ದುಂದು ವೆಚ್ಚಕ್ಕೆ ಕಡಿವಾಣ: ದೇವರಭೂಪುರ ಬೃಹನ್ಮಠದ ಅಮರೇಶ್ವರ ಅಭಿನವ ಗುರುಗಜದಂಡ ಸ್ವಾಮೀಜಿ ಮಾತನಾಡಿ, ಮಠ-ಮಂದಿರಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಡ ಜನರ ಹೊರೆ ನೀಗಿಸಬಹುದಾಗಿದೆ.
ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ನೂತನ ವಧು- ವರರು ಮಠಾಧೀಶರ ಆಶೀರ್ವಾದ ಪಡೆಯುವುದರಿಂದ ಸಾಮರಸ್ಯದ ಬದುಕು ಸಾಗಿಸಿ ಜೀವನ ಸಾಕ್ಷಾತ್ಕಾರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶ್ರೀಗಳು, ನವಲಕಲ್ ಸೋಮಶೇಖರ ಶಿವಾಚಾರ್ಯ ಶ್ರೀಗಳು, ಹುನಕುಂಟಿ ಶರಣಯ್ಯ ಶ್ರೀಗಳು, ಉಟಕನೂರು ಮರಿಬಸವಲಿಂಗ ಶ್ರೀಗಳು, ವಿಜಯ ಮಹಾಂತೇಶ್ವರ ಶಾಖಾನುಭವ ಮಂಟಪದ ಸಿದ್ಧಲಿಂಗ ಶ್ರೀಗಳು, ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್, ಮುಖಂಡರಾದ ಎಚ್.ಬಿ. ಮುರಾರಿ, ಗಂಗಾಧರಯ್ಯಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.
ತುಲಾಭಾರ: ಇದೇ ವೇಳೆ ಮೇದಿನಾಪುರ ಗ್ರಾಮದ ಶರಣಮ್ಮ ಶಿವಲಿಂಗಯ್ಯಸ್ವಾಮಿ ದಂಪತಿಗಳಿಂದ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ನಡೆಸಿದರು. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 23 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.