ಹಾರುಬೂದಿ ಲಾಭದಾಯಕ ಬಳಕೆಗೆ ಸೂಚನೆ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 23
ಹಾರುಬೂದಿಯ ಬಳಕೆ ಮೂಲಕ ದೇಶದ ಆಹಾರೋತ್ಪಾದನೆ ಹೆಚ್ಚಳ ನಿಟ್ಟಿನಲ್ಲಿ ಕೃಷಿ ವಿವಿಗಳು ಹೆಚ್ಚೆಚ್ಚು ಸಂಶೋಧನೆ ನಡೆಸಬೇಕು. ಕೃಷಿಯಲ್ಲಿಯೂ ಹಾರುಬೂದಿ ಬಳಕೆ ಲಾಭದಾಯಕ ಎಂಬುದನ್ನು ರೈತರಿಗೆ ಮನದಟ್ಟು ಮಾಡುವ ಅವಶ್ಯಕತೆಯಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ರಾಯಚೂರು ಕೃಷಿ ವಿವಿ ಯಲ್ಲಿ ಜಿಲ್ಲಾಡಳಿತ, ಜಿಪಂ, ಕ್ಯಾಷುಟೆಕ್ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯ ದಲ್ಲಿ ಆಯೋಜಿಸಿರುವ ಕೃಷಿ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಾರುಬೂದಿಯ ಲಾಭದಾಯಕ ಬಳಕೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಥರ್ಮಲ್ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲಿನ ಬಳಕೆಯಿಂದ ಉತ್ಪಾದನೆಯಾಗುವ ಹಾರುಬೂದಿಯನ್ನು ಕೃಷಿ ಕ್ಷೇತ್ರದಲ್ಲಿಯೂ ಬಳಸಬಹುದು. ಅದರಿಂದ ಯಾವುದೇ ರೀತಿಯ ತೊಂದರೆಯಾಗದು ಎಂಬ ನಂಬಿಕೆಯನ್ನು ರೈತಾಪಿ ವರ್ಗದಲ್ಲಿ ಮೂಡಿಸುವ ಕಾರ್ಯ ಕೃಷಿ ವಿವಿಗಳು ಮಾಡಬೇಕಿದೆ ಎಂದರು.
ಪ್ರಗತಿ ಸಾಧ್ಯ: ಕಟ್ಟಡ ನಿರ್ಮಾಣ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು, ಸಿಮೆಂಟ್‌ಗೆ ಭಾರೀ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಸಿಮೆಂಟ್ ಉದ್ದಿಮೆಗಳಲ್ಲಿ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಾರುಬೂದಿಯ ಸಮರ್ಪಕ ಬಳಕೆ ಮೂಲಕ ಪ್ರಗತಿ ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಹಾರುಬೂದಿ ಲಾಭದಾಯಕ ಬಳಕೆಗೆ ಸಂಬಂಧಿಸಿದ ರಾಷ್ಟ್ರೀಯ ವಿಚಾರ ಸಂಕಿರಣದ ಕೊನೆಗೆ ಸರ್ಕಾರಕ್ಕೆ ಸಲ್ಲಿಸುವ ವರದಿಯಾಧರಿಸಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸದ್ಯ ಕೇವಲ ಸಿಮೆಂಟ್ ಹಾಗೂ ಕೆಲವೇ ಕೆಲ ರೈತರು ಹಾರುಬೂದಿಯನ್ನು ಬಳಕೆ ಮಾಡುತ್ತಿದ್ದು, ಶೇ.100ರಷ್ಟು ಅದರ ಬಳಕೆಗೆ ಇನ್ನೂ ಸಾಕಷ್ಟು ಅವಕಾಶವಿದೆ ಎಂದು ಹೇಳಿದರು.
ಸಣ್ಣ ಉದ್ದಿಮೆ: ರಾಯಚೂರಿನಲ್ಲಿ ಹಾರುಬೂದಿ ಬಳಸಿ ಇಟ್ಟಿಗೆ ಮತ್ತಿತರೆ ವಸ್ತುಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಲಿದ್ದು, ಆ ಮೂಲಕ ಹಾರುಬೂದಿಯ ಬಳಕೆ ಜತೆಜತೆಗೆ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.
ಸ್ವಾವಲಂಬಿ ರಾಜ್ಯ: ರಾಜ್ಯದ ಕಾಂಗ್ರೆಸ್ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಕೈಗಾರಿಕೆಗಳಿಗೆ ಸತತ ವಿದ್ಯುತ್ ಒದಗಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆ ಮೂಲಕ ಪ್ರಗತಿಗೆ ದಾರಿಯಾಗಲಿದೆ. ಹಾಗೆಯೇ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯ ಮೂಲಕ ಉತ್ಪಾದನೆ ಹೆಚ್ಚಳಕ್ಕೆ ಚಿಂತಿಸಲಾಗುತ್ತಿದೆ ಎಂದರು.
ರಾಜ್ಯದ ಉತ್ಪಾದನೆಯ ಶೇ.37ರಷ್ಟು ವಿದ್ಯುತ್ ರೈತರಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಅದರಿಂದಾಗಿ ಸರ್ಕಾರಕ್ಕೆ ರು. 6200 ಕೋಟಿ ಆರ್ಥಿಕ ಹೊರೆ ಬೀಳುತ್ತಿದ್ದು, ಪ್ರತಿ ರೈತನಿಗೆ ತಲಾ ರು. 30ಸಾವಿರ ಪ್ರತಿ ವರ್ಷ ವೆಚ್ಚ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ವಿವಿಧೆಡೆ ರೈತರಿಂದ 24 ಗಂಟೆ ವಿದ್ಯುತ್ ಒದಗಿಸಲು ಬೇಡಿಕೆ ಬಂದಿದ್ದು, ಅದಕ್ಕಾಗಿ ಬಿಲ್ ಪಾವತಿಸಲು ರೈತರು ಮುಂದೆ ಬಂದಿದ್ದಾರೆ. ಸತತ ವಿದ್ಯುತ್ ಒದಗಿಸಿದಲ್ಲಿ ರೈತರ ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದ್ದು ಬಿಲ್ ಪಾವತಿಸುವುದು ಕಷ್ಟವಾಗದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ತಂತ್ರಜ್ಞಾನದ ಅಭಿವೃದ್ಧಿಯಿಂದ ಇಂದಿನ ದಿನಮಾನದಲ್ಲಿ ಹಾರುಬೂದಿಯ ಲಾಭದಾಯಕ ಬಳಕೆ ಸಾಧ್ಯ ಎಂಬುದು ಸ್ಪಷ್ಟವಾಗಿದೆ. ಆದರೆ ಈ ನಿಟ್ಟಿನಲ್ಲಿ ಜನಜಾಗೃತಿ ಅವಶ್ಯಕ. ಕೃಷಿ ಇಲಾಖೆ, ಕೃಷಿ ವಿವಿಗಳು ಜತೆಗೂಡಿ ರೈತರಲ್ಲಿ ಹಾರುಬೂದಿಯ ಲಾಭದಾಯಕ ಬಳಕೆ ಬಗ್ಗೆ ಮನವರಿಕೆ ಮಾಡಬೇಕಿದೆ. ಹಾರುಬೂದಿ ಪ್ರಯೋಜನಗಳ ಬಗ್ಗೆ ತಿಳಿ ಹೇಳುವ ಮೂಲಕ ಲಭ್ಯವಿರುವ ಹಾರುಬೂದಿಯ ಸಂಪೂರ್ಣ ಬಳಕೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ವೆಂಕಟೇಶ ನಾಯಕ, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ತಿಪ್ಪರಾಜು ಹವಾ ಲ್ದಾರ್, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ವಿಜಯ ಜೋತ್ಸ್ನಾ, ಕ್ಯಾಷುಟೆಕ್ ತಾಂತ್ರಿಕ ನಿರ್ದೇಶಕ ಕಾಂತರಾಜು, ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಬಿ.ವಿ. ಪಾಟೀಲ್, ಜೆಸ್ಕಾಂ ಎಂಡಿ ಪಲ್ಲವಿ ಅಕುರತಿ ಸೇರಿದಂತೆ ಅನೇಕರಿದ್ದರು.
ದೇಶದ ವಿವಿಧೆಡೆಯಿಂದ ಆಗಮಿಸಿದ್ದ ತಂತ್ರಜ್ಞರು, ಸಂಶೋಧಕರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.