ಮಾರುಕಟ್ಟೆ ಸಮಸ್ಯೆಗಳ ಆಗರ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 25
ಇಲ್ಲಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಲು ಆಗಮಿಸುವ ರೈತರು ಹತ್ತಾರು ರೀತಿಯ ತೊಂದರೆ ಎದುರಿಸುತ್ತಿದ್ದಾರೆ. ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದು, ಕೂಡಲೇ ಅವರ ಸಮಸ್ಯೆಗಳನ್ನು ಪರಿಹರಿಸದಿದ್ದರೆ ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಹಿಂಭಾಗದಲ್ಲಿ ದಿನವೂ ನೂರಾರು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ರೈತರು ತರಕಾರಿ ಮಾರಾಟ ಮಾಡಲು ಆಗಮಿಸುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿಯ ಸೌಲಭ್ಯವನ್ನು ನಗರಸಭೆ ಒದಗಿಸಿಲ್ಲ ಎಂದು ಆರೋಪಿಸಿದರು.
ಪ್ರಯಾಪಟ್ಟು ವಹಿವಾಟು: ತರಕಾರಿ ಮಾರಾಟ ಮಾಡುವ ಸ್ಥಳವು ಕೊಳಚೆ ಪ್ರದೇಶದಂತಿದ್ದು, ಸ್ವಚ್ಛತೆಯ ಕೊರತೆಯಿದೆ. ಈ ಪ್ರದೇಶದಲ್ಲಿ ಎಲ್ಲೆಡೆ ಚರಂಡಿ, ಮಳೆ ನೀರು ನಿಂತು ದುರ್ನಾತ ಬೀರುತ್ತಿದೆ. ಇದೆಲ್ಲದರ ಮಧ್ಯೆ ಇಲ್ಲಿಯೇ ಬಿಡಾಡಿ ದನ ಹಾಗೂ ಹಂದಿಗಳ ಹಾವಳಿಯಿದ್ದು, ರೈತರು ಪ್ರಯಾಪಟ್ಟು ವಹಿವಾಟು ನಡೆಸುವಂತಾಗಿದೆ ಎಂದು ದೂರಿದರು.
ತರಕಾರಿ ಇರಿಸಿಕೊಂಡು ಮಾರಾಟ ಮಾಡಲು ರೈತರಿಗೆ ಯಾವುದೇ ರೀತಿಯ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ರೈತರು ಬಿರುಬಿಸಿಲಿನಲ್ಲಿಯೇ ನಿಂತು ತರಕಾರಿ ಮಾರಾಟ ಮಾಡುವಂತಾಗಿದೆ. ತರಕಾರಿ ಮಾರಾಟಕ್ಕೆ ಬರುವ ರೈತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಗ್ರಾಹಕರ ವಾಹನಗಳ ನಿಲುಗಡೆ ಸರಿಯಾದ ವ್ಯವಸ್ಥೆಯಿಲ್ಲ. ಹಾಗೆಯೇ ತರಕಾರಿಯನ್ನು ಮಾರುಕಟ್ಟೆಗೆ ತರುವ ವಾಹನಗಳಿಗೆ ಮಾರುಕಟ್ಟೆ ತಲುಪಲು ಸಮರ್ಪಕ ರಸ್ತೆಯಿಲ್ಲದಿರುವುದು ತೊಂದರೆಗೆ ದಾರಿ ಮಾಡಿದೆ ಎಂದು ಆರೋಪಿಸಿದರು.
ಪುಟ್ಟಿಗೆ 3 ನಂತೆ ಕರ ಮಸೂಲಿ: ತಾಲೂಕಿನ ಬಾಯಿದೊಡ್ಡಿ, ಬಿಜನಗೇರಾ, ಸಿದ್ರಾಮಪುರ ಸೇರಿದಂತೆ ಇತರೆ ಗ್ರಾಮದಿಂದ ದಿನವೂ ಸಾವಿರಾರು ರೈತರು ತರಕಾರಿಯನ್ನು ಈ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ತರಕಾರಿ ಮಾರಾಟ ಮಾಡಲು ಬರುವ ರೈತರಿಂದ ಪ್ರತಿ ಪುಟ್ಟಿಗೆ 3 ರಂತೆ ನಗರಸಭೆಯು ಕರ ವಸೂಲಿ ಮಾಡುತ್ತಿದೆ. ಈ ಆರ್ಥಿಕ ವರ್ಷದಲ್ಲಿ 12.30 ಲಕ್ಷ ಕರ ವಸೂಲಿ ಹರಾಜು ನಡೆದಿದೆ.
ಕಳೆದ ವರ್ಷ 9.10 ಲಕ್ಷ ಹಾಗೂ 2012ರಲ್ಲಿ ಐದು ಲಕ್ಷ ಕರ ಸಂಗ್ರಹಣೆಯ ಹರಾಜು ನಡೆದಿತ್ತು. ನಗರಸಭೆ ಇಷ್ಟೆಲ್ಲ ಹಣ ಸಂಗ್ರಹಿಸುತ್ತಿದ್ದರೂ ಅಭಿವೃದ್ಧಿಗೊಳಿಸುವ ಕಾರ್ಯ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಆರಂಭಗೊಳ್ಳದ ಕಾಮಗಾರಿ: ಕಳೆದ ವರ್ಷ 2 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸುವ ನೆಪದಲ್ಲಿ ಆಗ ಅಳವಡಿಸಿದ್ದ ತಗಡಿನ ಛಾವಣೆಯನ್ನು ಕಿತ್ತು ಹಾಕಲಾಗಿದೆ. ಆದರೆ ಸದರಿ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಲು ನೆಲ ಗಟ್ಟಿಯಿಲ್ಲ ಎಂದು ಹೇಳಿ ಕಾಮಗಾರಿಯೇ ಆರಂಭಗೊಂಡಿಲ್ಲ. ವಾಸ್ತವದಲ್ಲಿ ತರಕಾರಿ ಮಾರುಕಟ್ಟೆಯ ಇಕ್ಕೆಲಗಳಲ್ಲಿಯೂ ಬೃಹದಾಕಾರದ ಕಟ್ಟಡಗಳು ತಲೆಎತ್ತಿವೆ. ಕೇವಲ ಹೈಟೆಕ್ ಮಾರುಕಟ್ಟೆ ಕಾಮಗಾರಿಗೆ ಮಾತ್ರ ನೆಲಗಟ್ಟಿಯಿಲ್ಲ ಎಂಬ ಸುಳ್ಳು ನೆಪಮೊಡ್ಡಲಾಗುತ್ತಿದೆ ಎಂದು ಟೀಕಿಸಿದ ಅವರು, ಕಾಮಗಾರಿ ಹೀಗೆಯೇ ವಿಳಂಬವಾದಲ್ಲಿ ಸದರಿ ಜಾಗ ಒತ್ತುವರಿಯಾಗುವ ಎಲ್ಲ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ನಗರಸಭೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಈ ಬಗ್ಗೆ ಅಸಡ್ಡೆ ಪ್ರದರ್ಶಿಸಿದರೆ ತರಕಾರಿ ಬೆಳೆಯುವ ರೈತರು, ವ್ಯಾಪಾರಿಗಳೊಂದಿಗೆ ಜತೆಗೂಡಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಜೈನ್ ಎಚ್ಚರಿಸಿದರು.
ಈ ಸಂದರ್ಭ ವೇದಿಕೆಯ ಮುಖಂಡರಾದ ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ಕೆ. ಕಿಶನರಾವ್, ರಘುವೀರ ನಾಯಕ, ಮಲ್ಲಿಕಾರ್ಜುನ, ನಾಗರಾಜ ಬಿಚ್ಚಾಲಿ ಸೇರಿ ಅನೇಕರಿದ್ದರು.