ಗುಣಮಟ್ಟದ ಬಿತ್ತನೆ ಬೀಜವನ್ನೇ ಬಳಸಿ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 26
ಬಿತ್ತನೆ ಬೀಜ ಖರೀದಿ ವೇಳೆ ರೈತರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಬಿತ್ತನೆ ಬೀಜದ ಗುಣಮಟ್ಟದ ಮೇಲೆ ಬೆಳೆಯ ಇಳುವರಿ ಆಧರಿಸಿರುತ್ತದೆ ಎಂಬ ಸತ್ಯ ಅರಿಯಬೇಕು. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ ರೈತರಿಗೆ ಸಲಹೆ ನೀಡಿದರು.
ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಬೀಜ ಘಟಕದಿಂದ ಆಯೋಜಿಸಿದ್ದ ಮುಂಗಾರು ಬೀಜ ದಿನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ರೈತರಿಗೆ ಬೀಜದ ಆಯ್ಕೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಬೀಜೋತ್ಪಾದನೆಗೆ ಒತ್ತು: ಕೇಂದ್ರ ಸರ್ಕಾರ ಬಿಜೋತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಹೆಚ್ಚಿನ ಆಸಕ್ತಿ ತೋರಿದೆ. ಈ ನಿಟ್ಟಿನಲ್ಲಿ ರೈತರು ಉತ್ತಮ ಬಿತ್ತನೆ ಬೀಜದ ಆಯ್ಕೆ ಮೂಲಕ ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಹಾಗೆಯೇ ಕೃಷಿ ವಿವಿ ಯ ಬೀಜ ಘಟಕವು ಸಹ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಒದಗಿಸಿ ಮೂಲ ಬೀಜಗಳ ಹಂಚಿಕೆ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು. ಕೆಲವೇ ವರ್ಷಗಳ ಹಿಂದೆ 2ರಿಂದ 3 ಸಾವಿರ ಕ್ವಿಂಟಲ್ ಬೀಜೋತ್ಪಾದನೆಯ ಸಾಮರ್ಥ್ಯ ಹೊಂದಿದ್ದ ಕೃಷಿ ವಿವಿ ಯು ಇಂದು 50 ಸಾವಿರ ಕ್ವಿಂಟಲ್ ಬಿತ್ತನೆ ಬೀಜೋತ್ಪಾದಿಸುತ್ತಿದೆ. ಈ ಮೂಲಕ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಒದಗಿಸುವ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಲ ಬೀಜೋತ್ಪಾದನೆಗೆ ಸಲಹೆ: ಕೃಷಿ ವಿಶ್ವವಿದ್ಯಾಲಯವು ರೈತರ ಸಹಭಾಗಿತ್ವದಲ್ಲಿ ಅವರ ಹೊಲಗಳಲ್ಲಿಯೇ ಬಿತ್ತನೆ ಬೀಜ ಬೆಳೆಯಲು ಸಹ ವಿವಿ ಪ್ರೋತ್ಸಾಹ ನೀಡುತ್ತಿದೆ. ಹಿಂದಿನ ಕಾಲದಲ್ಲಿ ರೈತರು ತಾವು ಬಿತ್ತುವ ಬೆಳೆಗಳ ಬೀಜವನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದರು. ಅದೇ ನಿಟ್ಟಿನಲ್ಲಿ ಸಾಗಲು ಇಂದಿನ ರೈತರಿಗೆ ಕೃಷಿ ವಿವಿಯು ಸಹ ಮೂಲ ಬೀಜಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ಹಾದೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ತಂತ್ರಜ್ಞಾನ ಅಭಿವೃದ್ಧಿಗೊಳಿಸಿದ್ದರೂ ಸೂಕ್ತ ಸಂದರ್ಭದಲ್ಲಿ ರೈತರಿಗೆ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ದೊರೆಯುತ್ತಿಲ್ಲ. ಅದರಿಂದ ರೈತರು ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಸಿಗದೇ ಪರದಾಡುತ್ತಾರೆ. ಹೈಬ್ರಿಡ್ ತಳಿಗಳಿಗೆ ರೈತರು ಹೆಚ್ಚು ಮಾರುಹೋಗಿದ್ದೇ ಈ ಸಮಸ್ಯೆಗೆ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಪಾವಧಿ ಬೆಳೆಗೆ ಬೇಡಿಕೆ: ಮಳೆಯ ಅಭಾವ ಸಹ ರೈತರನ್ನು ಆಗಾಗ್ಗೆ ಕಾಡುತ್ತಿದೆ. ರೈತರು ಕೃಷಿಯಲ್ಲಿ ನಷ್ಟದಿಂದ ಪಾರಾಗಲು ದೀರ್ಘಾವಧಿ ಬೆಳೆಗಳ ಬದಲಿಗೆ ಅಲ್ಪಾವಧಿ ಬೆಳೆಗಳನ್ನು ಬೆಳೆಯುವತ್ತ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದ ಅವರು, ನವಣೆ, ಅಂಟಿನ ಚವಳೆ ಸೇರಿ ಅಲ್ಪಾವಧಿ ಬೆಳೆಗಳಿಗೆ ಇಂದು ಭಾರೀ ಬೇಡಿಕೆಯಿದೆ ಎಂದು ಹೇಳಿದರು.
ಕೃಷಿ ವಿವಿ ಬೀಜ ಘಟಕದ ಅಧಿಕಾರಿ ಡಾ. ಬಸವೇಗೌಡ ಮಾತನಾಡಿ, ರೈತರಿಗೆ ಬಿತ್ತನೆ ಬೀಜ ಜಾಗೃತಿಗಾಗಿ ವರ್ಷದಲ್ಲಿ ಎರಡು ಬಾರಿ ಬೀಜ ದಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕೃಷಿ ವಿವಿ ಬೀಜ ಘಟಕದ ವತಿಯಿಂದ ಮುಂಗಾರು ಹಾಗೂ ಹಿಂಗಾರು ಅವಧಿಗೆ ಸಬ್ಸಿಡಿ ದರದಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು.
11 ಕೇಂದ್ರಗಳಲ್ಲಿ ವಿತರಣೆ: ರೈತರು ಬೀಜೋತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಬೀಜ ಗ್ರಾಮ ಯೋಜನೆ ಜಾರಿಗೆ ತರಲಾಗಿದೆ. ಕೃಷಿ ವಿವಿ ವ್ಯಾಪ್ತಿಯ 11 ಕೃಷಿ ಸಂಶೋಧನಾ ಕೇಂದ್ರದಲ್ಲಿ ಗುಣಮಟ್ಟದ ಬೀಜ ಉತ್ಪಾದನೆಗೆ ಹೆಚ್ಚಿನ ಆದ್ಯತೆಯನ್ನು ವಿಶ್ವವಿದ್ಯಾಲಯ ನೀಡಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಉತ್ತಮ ಬಿತ್ತನೆ ಬೀಜ ಬೆಳೆದ ತಾಲೂಕಿನ ಇಡಪನೂರು ಗ್ರಾಮದ ರೈತ ಹುಸೇನ್ ಅವರನ್ನು ಸನ್ಮಾನಿಸಲಾಯಿತು.