ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಹಸೀಲ್ದಾರ್ ಕಚೇರಿಯಲ್ಲಿ ಮತ್ತೊಂದು ಹಗರಣ ಪತ್ತೆ!

Vishwanath S
Updated On : 27 May 2014, 11:04 am

ಕನ್ನಡಪ್ರಭ ವಾರ್ತೆ  ಸಿಂಧನೂರು  ಮೇ 26
ಸದಾ ಒಂದಿಲ್ಲೊಂದು ಅವ್ಯವಹಾರ, ಗಲಾಟೆ, ಕಿರಿಕಿರಿಗೆ ಹೆಸರಾಗಿರುವ ನಗರದ ತಹಸೀಲ್ದಾರ್ ಕಚೇರಿಯ ಭೂಮಿ ಕೇಂದ್ರದಲ್ಲೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಕಳೆದೆರಡು ತಿಂಗಳ ಹಿಂದೆ ಸುಕಾಲಪೇಟೆಯ ಹನುಮೇಶ ಕಟಾಲಿ ವಕೀಲ(ಶಾಸಕ ಹಂಪನಗೌಡ ಬಾದರ್ಲಿ ಬೆಂಬಲಿಗ)ರ ಜಮೀನು ಖೊಟ್ಟಿ ವರ್ಗಾವಣೆ ವಿವಾದ ಜನಮಾನಸದಿಂದ ಮಾಸುವ ಮುನ್ನವೇ ಮತ್ತೊಂದು ಇಂಥದ್ದೇ ಮತ್ತೊಂದು ಘಟನೆ ಕಳೆದ 15 ದಿನಗಳ ಹಿಂದೆ ನಡೆದಿದೆ. ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಬಗ್ಗೆ ರೈತರು ಅನುಮಾನಿಸುವ ಸ್ಥಿತಿ ನಿರ್ಮಾಣವಾಗಿದೆ.
ಭೂಮಾಫಿಯಾ ಕೈವಾಡ: ಸರ್ವೆ ನಂ. 758/8 ರಲ್ಲಿನ 8 ಗುಂಟೆ ಜಮೀನು ಶಂಕರಕುಮಾರ ತಂದೆ ಇಂದ್ರಪ್ಪ ಎಂಬುವವರ ಹೆಸರಿನಲ್ಲಿದ್ದು ಅದನ್ನು ಕಂಪ್ಯೂಟರ್ ಆಪರೇಟರ್ ತಿರುಮಲೇಶ, ಶಿರಸ್ತೇದಾರ್ ರಾಮಣ್ಣ ಹೊಸಮನಿ ಮತ್ತಿತರರು ಹೊಂದಾಣಿಕೆ ಮಾಡಿಕೊಂಡು ಅಕ್ಬರ್ ಅಲಿ ತಂದೆ ಗುಲಾಬ ಮುಸ್ತಾಫಸಾಬ ಎಂಬುವವರಿಗೆ ನಕಲಿ ವರ್ಗಾವಣೆ ಮಾಡಿದ್ದಾರೆ. ಇದರ ಹಿಂದೆ ಕೆಲ ಭೂಮಾಫಿಯಾಗಳ ಕೈವಾಡವಿದೆ ಎನ್ನಲಾಗಿದ್ದು, ಅವರ ಅನುಕೂಲಕ್ಕಾಗಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಹಣ ಪಡೆದು ನಕಲಿ ವರ್ಗಾವಣೆ ಮಾಡಿದ್ದಾರೆಂದು ತಿಳಿದು ಬಂದಿದೆ.
ತಹಸೀಲ್ದಾರ್ ಕಚೇರಿಯಲ್ಲಿ ಹಣ ಕೊಟ್ಟರೆ ಭೂಮಿಯನ್ನೇ ನುಂಗಿ ಹಾಕುವ ಕುಳಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಮನುಜಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯಿಸಿದ್ದಾರೆ.
ತಹಸೀಲ್ದಾರ್ ಹೇಳಿದ್ದೇನು?: ತಹಸೀಲ್ದಾರ್ ಜಗನ್ನಾಥರಡ್ಡಿ ಅವರನ್ನು 'ಕನ್ನಡಪ್ರಭ' ಪ್ರಶ್ನಿಸಿದಾಗ- 'ಕಚೇರಿಯಲ್ಲಿ ಯಾವುದೇ ತಪ್ಪುಗಳು ನಡೆದಿಲ್ಲ. ತಮ್ಮಲ್ಲಿ ಎಲ್ಲ ದಾಖಲೆಗಳು ಸರಿಯಾಗಿವೆ. ಆದರೆ ಕಟಾಲಿ ವಕೀಲರ ಪ್ರಕರಣದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ತಪ್ಪೆಸಗಿತ್ತು. ಆದರೆ ಪ್ರಸ್ತುತ ಸರ್ವೆ ನಂ. 758/8ರಲ್ಲಿ 8 ಗುಂಟೆ ಜಮೀನು ಖೊಟ್ಟಿ ವರ್ಗಾವಣೆಯಾಗಿಲ್ಲ. ಯಾವ ಭೂಮಾಫಿಯದವರ ಪರವಾಗಿ ಕಾರ್ಯನಿರ್ವಹಿಸಿಲ್ಲ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement