ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರಾಸಕ್ತಿ ಸಲ್ಲ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 26
ಲಿಂಗಸ್ಗೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ನಿರಾಸಕ್ತಿ ತೋರದೆ ಜವಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಶಾಸಕದ್ವಯರಾದ ಮಾನಪ್ಪ ವಜ್ಜಲ್ ಹಾಗೂ ಪ್ರತಾಪಗೌಡ ಪಾಟೀಲ್ ಸೂಚಿಸಿದರು. ಸ್ಥಳೀಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಪ್ರತಾಪಗೌಡ ಪಾಟೀಲ್, ತಾಲೂಕಿನ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯ ಮತ್ತು ಸಿಬ್ಬಂದಿ ತಾಲೂಕು ಕೇಂದ್ರದಲ್ಲಿ ವಾಸಿಸುತ್ತಿದ್ದು, ವಸತಿಗಳು ಪಾಳು ಬಿದ್ದಿವೆ. ಕೆಲವು ಶಿಥಿಲಾವಸ್ಥೆಗೆ ತಲುಪಿವೆ. ಅಲ್ಲದೆ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ತಾಲೂಕು ವೈದ್ಯಾಧಿಕಾರಿಗಳ ವಸತಿ ಗೃಹಕ್ಕೆ ಭೇಟಿ ನೀಡಿ ಪರಿಶೀಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು, ಕೂಡಲೇ ವೈದ್ಯ ಸಿಬ್ಬಂದಿಗೆ ವಸತಿ ಗೃಹಗಳಲ್ಲಿ ವಾಸಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಆಸ್ಪತ್ರೆ ವಿಸ್ತರಣೆಗೆ ಚಿಂತನೆ
ಪಟ್ಟಣದ 100 ಹಾಸಿಗೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆಗೆ ವಿಸ್ತರಿಸುವ ಚಿಂತನೆ ನಡೆಸಿದ್ದು, ಬೇರೆಡೆ ಜಾಗ ಪಡೆದು ನಿರ್ಮಿಸಿದರೆ ಅನುಕೂಲವಾಗಲಿದೆ. ಸಿಟಿ ಸ್ಕ್ಯಾನ್ಯಂತ್ರ ಕಾರ್ಯಾರಂಭಕ್ಕೆ 3.50 ಲಕ್ಷ ಅವಶ್ಯವಿದ್ದು, ಅನುದಾನ ನೀಡುವಂತೆ ಜಿಪಂಗೆ ಪತ್ರ ಬರೆಯಲಾಗಿದೆ ಎಂದು ತಾಪಂ ಇಒ ಶರಣಬಸಪ್ಪ ಹೇಳಿದರು. 2012ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಹಲವು ಗ್ರಾಮಗಳಲ್ಲಿ ಸುಮಾರು 20 ಕಾಮಗಾರಿ ಬಾಕಿ ಉಳಿದಿದ್ದು, ಸಬೂಬು ಹೇಳದೆ ಪೂರ್ಣಗೊಳಿಸಬೇಕು. ಕಡ್ಡೋಣ, ರೋಡಲಬಂಡಾ(ಯುಕೆಪಿ), ಮರಡಿ, ಆನ್ವರಿ, ಹಡ್ಲಿಗೇರದೊಡ್ಡಿ, ತವಗ, ಗುರುಗುಂಟಾ, ಹಟ್ಟಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಬೋರ್ವೆಲ್ ಕೊರೆಯಿಸಿ ಪೈಪ್ಲೈನ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸದ ಪರಿಣಾಮ ಜನತೆಗೆ ಕುಡಿವ ನೀರಿನ ತೊಂದರೆ ಅನುಭವಿಸುಂತಾಗಿದೆ. ತಕ್ಷಣ ಕ್ರಮಕ್ಕೆ ಮುಂದಾಗಬೇಕೆಂದು ಜಿಪಂ ಸದಸ್ಯ ಭೂಪನಗೌಡ ಪಾಟೀಲ್ ಕರಡಕಲ್ ಒತ್ತಾಯಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ 1 ಕೋಟಿ
ಯರಡೋಣ, ಮಿಂಚೇರಿ, ಗೌಡೂರು, ಕನ್ನಾಪೂರ ಹಟ್ಟಿ, ಕೆಸರಟ್ಟಿ, ಬಂಡಿಸುಂಕಾಪುರ, ಮಸ್ಕಿ ಕೆಲ ವಾರ್ಡುಗಳು, ಹಡಗಲಿ, ಮಾರಲದಿನ್ನಿ ಸೇರಿದಂತೆ 42 ಹಳ್ಳಿಗಳಲ್ಲಿನ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ 2.50 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಕೇವಲ 1 ಕೋಟಿ ಅನುದಾನ ಬಂದಿದೆ. ಹೀಗಾಗಿ ಕೆಲವೆಡೆ ನೀರಿನ ಸಮಸ್ಯೆ ನೀಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಎಂಜಿನಿಯರ್ ಅಭಿದಲಿ ಸಭೆಯಲ್ಲಿ ವಿವರಿಸಿದರು.
ಹಟ್ಟಿ ಚಿನ್ನದಗಣಿ ಕಂಪನಿಯಿಂದ ಮೇದಿನಾಪುರಕ್ಕೆ ಕುಡಿಯುವ ನೀರು ಪೂರೈಸಲು ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಕಂಪನಿ ಜೊತೆ ಚರ್ಚಿಸಿ ಕಾಮಗಾರಿ ಆರಂಭಿಸುವಂತೆ ಜಿಪಂ ಸದಸ್ಯ ಭೂಪನಗೌಡ ಹೇಳಿದರು.
ವಿದ್ಯುತ್ ತಂತಿ ಸ್ಥಳಾಂತರಿಸಿ
ತಾಲೂಕಿನ ಹಲವು ಗ್ರಾಮಗಳ ಮನೆ, ಶಾಲೆಗಳ ಮೇಲೆ ವಿದ್ಯುತ್ ತಂತಿಗಳಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪಘಾತ ಸಂಭವಿಸುವ ಭೀತಿ ಎದುರಿಸುತ್ತಿದ್ದಾರೆ. ಇಂತಹ ಗ್ರಾಮಗಳನ್ನು ಗುರುತಿಸಿ ವಿದ್ಯುತ್ ತಂತಿ ಸ್ಥಳಾಂತರಿಸುವಂತೆ ಶಾಸಕ ಮಾನಪ್ಪ ವಜ್ಜಲ್ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಹದಗೆಟ್ಟ ರಸ್ತೆಗಳು
ಮಡಗಂಟನಾಳ- ಚಿತ್ರನಾಳ, ಬಂಡಿಸುಂಕಾಪುರ, ಅಂಕಲಿಮಠ- ಜಾಲಿಬೆಂಚಿ, ಹಟ್ಟಿ- ಗೌಡೂರು, ಭೂಪುರ-ನೀರಲಕೇರಿ, ಯರದಿಹಾಳ-ಜಾಂತಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಕೂಡಲೇ ಕಾಮಗಾರಿ ಆರಂಭಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಶಾಸಕ ಮಾನಪ್ಪ ವಜ್ಜಲ್ ಸೂಚಿಸಿದರು.
ಮಳೆ ಹಾನಿ ಪುನಾ ಸಮೀಕ್ಷೆಗೆ ಸೂಚನೆ
ತಾಲೂಕಿನ ದೇವರಭೂಪೂರ, ಅಮರೇಶ್ವರ, ಕಡದರಗಡ್ಡಿ, ಹಂಚಿನಾಳ, ಶೀಲಹಳ್ಳಿ, ಯಳಗುಂದಿ, ಯರಡೋಣ, ಮಾರಲದಿನ್ನಿ, ಆನೆಹೊಸೂರು, ಹನುಮಗುಡ್ಡ, ಬೆಲ್ಲದಮರಡಿ, ದಿಗ್ಗನಾಯಕನ ಹಳ್ಳಿ, ಮಾರಲದಿನ್ನಿ ಸೇರಿ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕೃಷಿ ಉತ್ಪನ್ನ ಬೆಳೆಗಳು ಹಾಗೂ ಮನೆಗಳು ಹಾನಿಗೀಡಾದ ಕುರಿತು ಸರಿಯಾಗಿ ಸಮೀಕ್ಷೆ ನಡೆಸಿಲ್ಲವೆಂದು ರೈತರಿಂದ ದೂರುಗಳು ಬಂದಿವೆ. ಹಾನಿ ಕುರಿತ ಪುನಃ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಶಾಸಕದ್ವಯರು ಪ್ರಭಾರಿ ತಹಸೀಲ್ದಾರ್ ರಾಧೇಶ್ಯಾಮ್ ಅವರಿಗೆ ಸೂಚಿಸಿದರು. ಸರ್ಕಾರದ ನಿಯಮ ಪಾಲಿಸದೆ ನ್ಯಾಯಬೆಲೆ ಅಂಗಡಿಗಳಿಗೆ ದೂರದ ಗ್ರಾಮಗಳನ್ನು ಮನಬಂದಂತೆ ಸೇರ್ಪಡೆಗೊಳಿಸಿದೆ. ಇದರಿಂದ ಪಡಿತರಕ್ಕಾಗಿ ಬಡಜನತೆ ತೊಂದರೆ ಪಡುತ್ತಿದ್ದಾರೆ. ಅಲ್ಲದೆ ಫಲಾನುಭವಿಗಳಿಗೆ ನಿಯಮಾನುಸಾರ ಪಡಿತರ ನೀಡುತ್ತಿಲ್ಲವೆಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಮೀಪದ ನ್ಯಾಯಬೆಲೆ ಅಂಗಡಿಗೆ ಹಳ್ಳಿಗಳನ್ನು ಸೇರ್ಪಡೆ ಮಾಡಬೇಕೆಂದು ಜಿಪಂ ಸದಸ್ಯ ಭೂಪನಗೌಡ ಪಾಟೀಲ್ ಒತ್ತಾಯಿಸಿದರು.
ಕೃಷಿ ಸಲಕರಣೆ ವಿತರಿಸಿಲ್ಲ
ಎಸ್ಟಿ, ಎಸ್ಟಿ ಯೋಜನೆಗಳು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪುತ್ತಿಲ್ಲವೆಂಬ ದೂರುಗಳಿವೆ ಎಂದು ಜಿಪಂ ಸದಸ್ಯ ಎಚ್.ಬಿ. ಮುರಾರಿ ಆರೋಪಿಸಿದರು. ಈ ವೇಳೆ ಕಳೆದ ವರ್ಷ ಆಯ್ಕೆಯಾದ ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನ ವಿತರಿಸಿಲ್ಲ. ಇದಕ್ಕೆ ಗ್ರಾಮ ಸಭೆಗೆ ಅಧಿಕಾರಿಗಳ ಗೈರು ಕಾರಣ ಎಂದು ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್ ದೂರಿದರು.
ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆ
ಪ್ರಸಕ್ತ ಶೈಕ್ಷಣಿಕ ವರ್ಷ ಮೇ 31ಕ್ಕೆ ಆರಂಭವಾಗಲಿದ್ದು, ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪಠ್ಯಪುಸ್ತಕ ಬಂದಿದ್ದು, ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ನಡೆದಿದೆ ಎಂದು ಬಿಇಒ ಶಾಂತಗೌಡ ಪಾಟೀಲ್ ವಿವರಿಸಿದರು. ಈ ವೇಳೆ ಸರ್ವ ಶಿಕ್ಷಣ ಅಭಿಯಾನದಡಿ ವಿವಿಧ ಗ್ರಾಮಗಳಲ್ಲಿ ಶಾಲಾ ಕೊಠಡಿಗಳ ಕಾಮಗಾರಿ ಆರಂಭಿಸಿಲ್ಲ. ಇನ್ನು ಕೆಲವೆಡೆ ಅಪೂರ್ಣಗೊಂಡಿವೆ. ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಾಸಕ ಪ್ರತಾಪಗೌಡ ಪಾಟೀಲ್ ಸೂಚಿಸಿದರು. ಜಿಲ್ಲಾ ಹಂತದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುವುದರಿಂದ ಕಟ್ಟಡ ಕಾಮಗಾರಿ ಹಾಗೂ ಶಾಲಾ ಉಪಕರಣಗಳ ವಿತರಣೆ ವಿಳಂಬವಾಗುತ್ತಿದ್ದು ತಾಲೂಕು ಹಂತದಲ್ಲಿ ನಡೆಸಬೇಕಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಶಾಸಕ ವಜ್ಜಲ್ರು ಬಿಇಒಗೆ ಹೇಳಿದರು. ಇದೇ ವೇಳೆ ಭೂಪನಗೌಡ ಪಾಟೀಲ್ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರನ್ನು ನೇಮಕಕ್ಕೆ ಒತ್ತಾಯಿಸಿದರು.
ಕ್ರೀಡಾಂಗಣ ಕಾಮಗಾರಿಗೆ ಹಣದ ಕೊರತೆ
ಪಟ್ಟಣದ ಕ್ರೀಡಾಂಗಣ ಕಾಮಗಾರಿ ಅಪೂರ್ಣಗೊಂಡಿದ್ದು, ಮೈದಾನದಲ್ಲಿ ಗಿಡಗಂಟಿಗಳು ಬೆಳೆದಿವೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಜಿಪಂ ಸದಸ್ಯ ಭೂಪನಗೌಡ ಪಾಟೀಲ್ ಕರಡಕಲ್ ಒತ್ತಾಯಿಸಿದರು. ಕ್ರೀಡಾಂಗಣ ಕಾಮಗಾರಿಗೆ 95 ಲಕ್ಷದಲ್ಲಿ 50 ಲಕ್ಷ ಬಿಡುಗಡೆಯಾಗಿದೆ. ಬಾಕಿ ಹಣ ಬಿಡುಗಡೆಯಾದರೆ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದು ಭೂ ಸೇನಾ ನಿಗಮದ ಅಧಿಕಾರಿ ಜಗದೀಶ ಪ್ರಕಾಶ ಸ್ಪಷ್ಟಪಡಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಮಾನಪ್ಪ ಚವ್ಹಾಣ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಗೌಡ ತುರಡಗಿ, ತಾಪಂ ಇಒ ಶರಣಬಸಪ್ಪ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ರಾಚಪ್ಪ, ವೈದ್ಯಾಧಿಕಾರಿ ಡಾ. ಮಂಜುನಾಥ ನಾಗಲೀಕರ, ಸಿಡಿಪಿಒ ಪ್ರಭಾಕರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ಸಿಪಿಐ ವರದರಾಜ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹಾಂತೇಶ ಕೊಣ್ಣೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಕರಣ ಇತ್ಯರ್ಥಕ್ಕೆ ವಕೀಲರ
ಸಹಕಾರ ಅಗತ್ಯ: ನ್ಯಾ. ಕಾಡ್ಲೂರು
ರಾಯಚೂರು: ನ್ಯಾಯಾಲಯಗಳಲ್ಲಿ ಪ್ರಕರಣಗಳ ತೀವ್ರ ಇತ್ಯರ್ಥಕ್ಕೆ ನ್ಯಾಯಾಧೀಶರು ಹಾಗೂ ವಕೀಲರ ಮಧ್ಯೆ ಉತ್ತಮ ಸಹಕಾರ ಅಗತ್ಯ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ನಗರದಲ್ಲಿ ಸೋಮವಾರ ರಾಯಚೂರು ವಕೀಲರ ಸಂಘದ ಕಚೇರಿಯಲ್ಲಿ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅವರ ವರ್ಗಾವಣೆ ಹಿನ್ನೆಲೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಕೀಲರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆಯುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಬೇಕು. ನ್ಯಾಯ ಕೋರಿ ನ್ಯಾಯಾಲಯಗಳಿಗೆ ಆಗಮಿಸುವವರ ಸಮಸ್ಯೆ ಆಲಿಸಿ ಪರಿಹಾರ ದೊರಕಿಸುವ ಕಾರ್ಯ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು. ಈ ವೇಳೆ ಹಿರಿಯ ವಕೀಲರಾದ ನಾಗರಾಜ್ ಮಸ್ಕಿ, ಶ್ರೀಕಾಂತ್ ವಕೀಲರು, ರಾಜಾ ಪಾಂಡುರಂಗ ನಾಯಕ, ಜಗದೀಶ್ ಸೇರಿ ಅನೇಕರು ನ್ಯಾಯಾಧೀಶರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿಜಿಎಂ ಪಾಟೀಲ್, ನ್ಯಾಯಾಧೀಶರಾದ ಚಲುವಮೂರ್ತಿ, ಆರತಿ, ರಾಯಚೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭಾನುರಾಜ್, ಉಪಾಧ್ಯಕ್ಷ ಕೆ. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಪ್ರಭುದೇವ ಪಾಟೀಲ್, ಹುಲಿಗೆಪ್ಪ, ಖಜಾಂಚಿ ಪ್ರಹ್ಲಾದರಾವ್ ಸೇರಿ ಅನೇಕರಿದ್ದರು.