ಗೊಂದಲ ತಂದ ಶಾಸಕದ್ವಯರ ಹೇಳಿಕೆ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 27
ನಂದವಾಡಗಿ ಏತನೀರಾವರಿ ಯೋಜನೆ ಜಾರಿ ಕುರಿತಾಗಿ ಶಾಸಕದ್ವಯರಾದ ಮಾನಪ್ಪ ವಜ್ಜಲ್ ಹಾಗೂ ಪ್ರತಾಪ ಗೌಡ ಪಾಟೀಲರು ಭಿನ್ನ ಹೇಳಿಕೆ ನೀಡುತ್ತಿದ್ದಂತೆ ರೈತರಲ್ಲಿ ಗೊಂದಲ ಮೂಡಿಸಿದ ಘಟನೆ ಸೋಮವಾರ ಜರುಗಿತು.
ಸ್ಥಳೀಯ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಜರುಗಲಿದ್ದ ಕೆಡಿಪಿ ಸಭೆಗೆ ಮುನ್ನ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ರೈತರು ಶಾಸಕದ್ವಯರನ್ನು ಭೇಟಿ ಮಾಡಿ, ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ವಿವಿಧ ಸಂಘ-ಸಂಸ್ಥೆಗಳು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದರೂ, ಸರ್ಕಾರ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇತ್ತೀಚಿಗೆ ಸುರಿದ ಆಲಿಕಲ್ಲು ಮಳೆಗೆ ಕೃಷಿ ಉತ್ಪನ್ನ ಬೆಳೆಗಳು ಹಾಗೂ ಮನೆಗಳು ಹಾನಿಗೀಡಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಪ್ರಥಮ ಬಾರಿ ರು. 800 ಕೋಟಿ ನಷ್ಟ ಸಂಭವಿಸಿದ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಂತರ ಎರಡನೇ ಬಾರಿ ರು. 200 ಕೋಟಿ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ರೈತರಿಗೆ ಪರಿಹಾರ ಹಣ ನೀಡಿಲ್ಲ. ಹಾನಿಗೀಡಾದ ಮನೆಗಳಿಗೆ ರು. 50 ಲಕ್ಷ ಪರಿಹಾರ ಹಣ ಬಂದಿದ್ದರೂ ತಾಲೂಕು ಆಡಳಿತ ವಿತರಣೆ ಮಾಡಿಲ್ಲ.
ಸರ್ಕಾರ ಒಪ್ಪಿದೆ: ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ರೈತರು ಬಗರ್‌ಹುಕುಂ ಸಾಗುವಳಿ ಮಾಡುತ್ತಾ ಬರುತ್ತಿದ್ದು, ಅರಣ್ಯ ಇಲಾಖೆ ಏಕಾಏಕಿ ಸಾಗುವಳಿ ಜಮೀನು ತಮ್ಮ ಕಬ್ಜಾಕ್ಕೆ ಪಡೆದು ಪ್ಲಾಂಟೇಷನ್ ಮಾಡಲು ಹೊರಟಿದೆ. ಇದರಿಂದ ಸುಮಾರು 2 ಸಾವಿರ ಕುಟುಂಬಗಳು ಬೀದಿ ಪಾಲಾಗಲಿವೆ. ಕೂಡಲೇ ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೊಳಿಸಬೇಕು. ಬೆಳೆ ಮತ್ತು ಮನೆ ಹಾನಿ ಪರಿಹಾರ ಒದಗಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ಒದಗಿಸಬೇಕೆಂಬ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಇದಕ್ಕೆ ಮಾನಪ್ಪ ವಜ್ಜಲ್ ಪ್ರತಿಕ್ರಿಯಿಸಿ, ನಂದವಾಡಗಿ ಏತನೀರಾವರಿ ಯೋಜನೆ ಆರಂಭಕ್ಕೆ ಸರ್ಕಾರದಿಂದ ತಾಂತ್ರಿಕ ಒಪ್ಪಿಗೆ ದೊರೆತಿದೆ. 3.75 ಟಿಎಂಸಿ ನೀರು ಬಳಕೆ ಮಾಡಲು ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭಿಸಿ ಚಾಲನೆ ನೀಡಲಾಗುವುದು ಎಂದರು.
ಯೋಜನೆ ವಿಳಂಬವಾಗಲಿದೆ: ನಂತರ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಲಿಂಗಸ್ಗೂರು ಮತ್ತು ಮಾನವಿ ತಾಲೂಕಿನ ರೈತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಂದವಾಡಗಿ ಏತನೀರಾವರಿ ಯೋಜನೆ ಮೂಲ ನಕ್ಷೆಯಂತೆ ಜಾರಿಗೆ ತರಲು ಸರ್ಕಾರಕ್ಕೆ ಈ ಭಾಗದ ಶಾಸಕರು ಒತ್ತಾಯಿಸಿದ್ದು, ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ತಾಂತ್ರಿಕ ಅಧಿಕಾರಿಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದ್ದಾರೆ. ಹೀಗಾಗಿ ಯೋಜನೆ ಜಾರಿಯಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕದ್ವಯರ ಈ ಭಿನ್ನ ಹೇಳಿಕೆಯಿಂದ ರೈತರಲ್ಲಿ ಗೊಂದಲ ಮೂಡಿಸಿತು.
ಚರ್ಚಿಸಿ ಕ್ರಮ:ಇತ್ತೀಚಿಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ರೈತರ ಬೆಳೆಗಳು ಹಾಗೂ ಮನೆಗಳು ಹಾನಿಗೀಡಾದ ಕುರಿತು ಸರಿಯಾಗಿ ಸಮೀಕ್ಷೆ ಕೈಗೊಂಡಿಲ್ಲವೆಂಬ ದೂರು ಆಧರಿಸಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಪುನಃ ಸರ್ವೆ ಕಾರ್ಯ ಸೂಚನೆ ನೀಡಲಾಗುವುದು. ಮನೆ ಹಾನಿ ಪರಿಹಾರ ಹಣ ಬಂದಿದ್ದರೆ ತಾಲೂಕು ಆಡಳಿತಕ್ಕೆ ಕೂಡಲೇ ವಿತರಿಸುವಂತೆ ಸೂಚನೆ ನೀಡಲಾಗುವುದು.
ಬಗರ್‌ಹುಕುಂ ಸಾಗುವಳಿ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿರುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕದ್ವಯರು ಭರವಸೆ ನೀಡಿದರು.
ಈ ವೇಳೆ ಜಿಪಂ ಸದಸ್ಯರಾದ ಅಧ್ಯಕ್ಷ ಭೂಪನಗೌಡ ಪಾಟೀಲ್, ಎಚ್.ಬಿ. ಮುರಾರಿ, ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್, ಉಪಾಧ್ಯಕ್ಷ ಮಾನಪ್ಪ ಚೌಹಾಣ್, ತಾಪಂ ಇಒ ಶರಣಬಸಪ್ಪ, ಸಿಪಿಐ ವರದರಾಜ್ ಮತ್ತಿತರರು ಇದ್ದರು.