ಮಹಿಳಾ ಸಂಘಟನೆಗಳ ಮೌನವೇಕೆ?
ಸಿಂಧನೂರು: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬಹಿರ್ದೆಸೆಗೆ(ಶೌಚಕ್ಕೆ) ಹೋಗಲು ಮಹಿಳೆಯರು ಪರದಾಡುತ್ತಿದ್ದರೂ ಕನಿಷ್ಠ ಅವರ ಪರ ಯಾರೂ ಧ್ವನಿ ಎತ್ತುತ್ತಿಲ್ಲ.
ಎಪಿಎಂಸಿ ಗಂಜ್‌ನಿಂದ ಪಿಡಬ್ಲ್ಯೂಡಿ ಕ್ಯಾಂಪ್‌ವರೆಗೆ ಒಂದೂ ಮಹಿಳಾ ಮೂತ್ರಾಲಯವಿಲ್ಲ. ಬೇರೆ ಊರಿಂದ ಬರುವ ಮಹಿಳೆಯರು ಮೂತ್ರಕ್ಕೆ ತೊಂದರೆ ಪಡುವಂತಾಗಿದೆ. ತಾಲೂಕಾಡಳಿತಕ್ಕೆ ಕನಿಷ್ಠ ಕಾಳಜಿ ವಹಿಸದಿರುವುದು ಅತ್ಯಂತ ನೋವಿನ ಸಂಗತಿ.
ಮಹಿಳಾ ಸಬಲೀಕರಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾ ಡುವ ಸಂಘಟನೆಯವರು ಹಾಗೂ ಅಧಿಕಾರಿಗಳು ಕನಿಷ್ಠ ಮೂಲ ಸೌಲಭ್ಯದ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ನಿಜಕ್ಕೂ ಖೇದಕರ.
ಹಣಕಾಸಿನ ವ್ಯವಹಾರಕ್ಕೆ ಸೀಮಿತ: ಮಹಿಳಾ ಸಂಘಟನೆಗಳು ಸಂಪೂರ್ಣ ಮೌನಕ್ಕೆ ಶರಣಾಗಿವೆ. ಮಹಿಳಾ ದಿನಾಚರಣೆ ಕಾರ್ಯಕ್ರಮ ಹೊರತುಪಡಿಸಿ ಉಳಿದಂತೆ ಮಹಿಳೆಯರ ಪರ ಧ್ವನಿ ಎತ್ತುವುದನ್ನೇ ನಿಲ್ಲಿಸಿವೆ. ಇನ್ನೂ ಕೆಲ ಮಹಿಳಾ ಸಂಘಟನೆಗಳು ಸ್ವಸಹಾಯ ಸಂಘಗಳನ್ನು ಅಸ್ತಿತ್ವಕ್ಕೆ ತಂದು ಹಣಕಾಸಿನ ವ್ಯವಹಾರಕ್ಕೆ(ಉಳಿತಾಯ) ಸಿಮೀತವಾಗಿವೆ. ಮೂಲ ಸೌಲಭ್ಯಗಳ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ. ಹೀಗಾಗಿ ಹಲವು ಸಮಸ್ಯೆಗಳು ತಲೆನೋವಾಗಿ ಪರಿಣಮಿಸಿವೆ.
ಸಿಂಧನೂರು ಕೋರ್ಟ್ ಬಳಿಯ ಮಹಿಳಾ ಶೌಚಾಲಯ ಗಬ್ಬು ನಾರುತ್ತಿರುವುದರಿಂದ ನಾಗರಿಕರು ಬೇಸತ್ತಿದ್ದಾರೆ.
ಬಹಿರ್ದೆಸೆಗೆ ಹೋಗುವುದು ಅನಾರೋಗ್ಯಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರೂ, ಅಧಿಕಾರಿಗಳು ಕಣ್ಣು, ಕಿವಿ ಮುಚ್ಚಿ ಕುಳಿತಿದ್ದಾರೆ. ಮತ್ತು ಈ ಬಗ್ಗೆ ಮಹಿಳಾ ಸಂಘಟನೆಗಳು ಸಮಸ್ಯೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ತಾಲೂಕು ಕೇಂದ್ರದಲ್ಲಿಯೇ ಈ ಪರಿಸ್ಥಿತಿಯಾದರೆ ಇನ್ನೂ ಹಳ್ಳಿಗಳ ಸ್ಥಿತಿ ಹೇಳತೀರದು.
ಮಹಿಳಾ ಸಂಘಟನೆಗಳೇಕೆ ಮೌನ?: ತಾಲೂಕಾಡಳಿತಕ್ಕೆ ಮಹಿಳೆಯರ ಬಗ್ಗೆ ಗೌರವವಿಲ್ಲ. ನ್ಯಾಯೋಚಿತವಾಗಿ ಹಕ್ಕಾಗಿರುವ ಮಹಿಳಾ ಮೂತ್ರಾಲಯ ನಿರ್ಮಿಸಲೂ ಆಗಿಲ್ಲ. ನೂರಾರು ಮಹಿಳೆಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೂ ಮಹಿಳಾ ಸಂಘಟನೆಗಳು ನಿರ್ಲಿಪ್ತವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಹಿಳಾ ಸಮಾನತೆ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಸಂಘಟನೆಗಳವರು ಮೌನ ತಾಳಿರುವುದು ಹಿಂದಿನ ಗುಟ್ಟೇನು ಎನ್ನುತ್ತಿರುವ ಸಾರ್ವಜನಿಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಸಹ ಮಹಿಳೆಯರಲ್ಲಿ ಜೃತಿ ಮನೋಭಾವ ಮೂಡಿಸುವಲ್ಲಿ ನಿಷ್ಕಾಳಜಿ ವಹಿಸಿದ್ದಾರೆ. ಮಹಿಳಾ ಸಂಘಟನೆಗಳು ಮೂಲೆಗೆ ಸರಿದರೂ ಇತರೆ ಸಂಘಟನೆಗಳು ಸಹ ಮಹಿಳೆಯರ ಪರ ಧ್ವನಿ ಎತ್ತದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಅನೇಕ ಬಡ ಕುಟುಂಬಗಳಿಗೆ ಶೌಚಾಲಯವೂ ಇಲ್ಲ.
ಇನ್ನು ಸಾರ್ವಜನಿಕ ಶೌಚಾಲಯಗಳು ಅಸ್ತವ್ಯಸ್ತ. ಹೀಗಾಗಿ ಮಳೆಗಾಲದಲ್ಲಿ ಮಹಿಳೆಯರನ್ನು ದೇವರೇ ಕಾಪಾಡಬೇಕು. ಮಹಿಳಾ ಸಂಘಟನೆಗಳು ಇನ್ನಾದರೂ ಎಚ್ಚೆತ್ತು ಮಹಿಳೆಯರಿಗೆ ಮೂಲ ಸೌಲಭ್ಯ ಒದಗಿಸಿಕೊಡಲು ಮುಂದಾಗುವರೇ ಕಾದು ನೋಡಬೇಕು.