ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಕೊರತೆ

Vishwanath S
Updated On : 30 May 2014, 11:46 am

ಕ.ಪ್ರ. ವಾರ್ತೆ , ಸುರಪುರ , ಮೇ 29
ತಾಲೂಕಿನಲ್ಲಿ 446 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 135 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕ್ಷೇತ್ರಕ್ಕೆ ಸಂಬಂಧಿಸಿದ ಸದಸ್ಯರು ನಿವೇಶನ ಒದಗಿಸಿಕೊಟ್ಟರೆ 12 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಿಡಿಪಿಒ ದೇನುಸಿಂಗ ಚವ್ಹಾಣ ತಿಳಿಸಿದರು.
ಇಲ್ಲಿಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಉಚಿತವಾಗಿ ನಿವೇಶನ ನೀಡಿದರೆ ದಾನಿಗಳ ಹೆಸರನ್ನು ಕಟ್ಟಡದ ಮೇಲೆ ಬರೆಸಲಾಗುವುದು. ಸದಸ್ಯರು ನಿವೇಶನ ಕೊಡಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಸಭೆಯಲ್ಲಿ ಕರೆ ನೀಡಿದರು.
ಉತ್ತಮ ಫಲಿತಾಂಶ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.86.60 ರಷ್ಟು ಉತ್ತಮ ಫಲಿತಾಂಶ ಬಂದಿದೆ. ತಾಲೂಕಿನಲ್ಲಿ 1,734 ಶಿಕ್ಷಕರ ಕೊರತೆಯಿದೆ. ಸಮವಸ್ತ್ರ ಮತ್ತು ಪಠ್ಯಪುಸಕ್ತಗಳನ್ನು ಶಾಲೆಯ ಆರಂಭದಲ್ಲಿ ವಿತರಿಸಲಾಗುವುದು ಎಂದು ಶಿಕ್ಷಣಾಧಿಕಾರಿ ನಾಗಪ್ಪ ಮೇದಾರ್ ಸಭೆಯಲ್ಲಿ ತಿಳಿಸಿದರು. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ಇನ್ನೂ 155 ದಿನದೊಳಗಾಗಿ ಜರುಗಲಿವೆ ಎಂದು ತಿಳಿಸಿದರು. ಪೂರಕ ಪರೀಕ್ಷೆಗಳಿಗೆ ಹುಣಸಗಿ ಮತ್ತು ಸುರಪುರ ಸೇರಿದಂತೆ 2 ಕೇಂದ್ರಗಳನ್ನು ಮಾಡಬೇಕು ಎಂದು ಸಿದ್ದಣ್ಣ ಮಲಗಲದಿನ್ನಿ ಮತ್ತು ಖಾಜಾ ಪಟೇಲ ಹೇಳಿದರು.
ಕಾಮಗಾರಿಗಳು ಮಂಜೂರು: ಜಿಪಂ ಎಇಇ ಬಸಯ್ಯ ಹಿರೇಮಠ ಮಾತನಾಡಿ, ಎನ್‌ಆರ್‌ಡಿಪಿಯಲ್ಲಿ 2013-14ನೇ ಸಾಲಿನಲ್ಲಿ 194 ಕಾಮಗಾರಿಗಳು ಮಂಜೂರಾಗಿರುತ್ತವೆ. ಈಗಾಗಲೇ 179 ಪೂರ್ಣಗೊಂಡಿದ್ದು, 15 ಪ್ರಗತಿಯಲ್ಲಿವೆ. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ವಾಟರ್ ಸಪ್ಲೈ ಯೋಜನೆಯಲ್ಲಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಅಸಮಾಧಾನ: ಕಕ್ಕೇರಾ ತಾಪಂ ಸದಸ್ಯ ರಾಜೂ ಹವಾಲ್ದಾರ್ ಮಾತನಾಡಿ, ಬಸವ ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳಿಗೆ ಈಗಾಗಲೇ ಜಿಪಿಆರ್‌ಎಸ್ ಆಗಿದ್ದು, ಅಧಿಕಾರಿಗಳು ಫಲಾನುಭವಿಗಳಿಗೆ ಚೆಕ್ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅನೇಕ ಸದಸ್ಯರು ಪಕ್ಷಭೇದ ಮರೆತು ದನಿ ಗೂಡಿಸಿದರು. ಈ ಕುರಿತಂತೆ ಇಒ ಪ್ರಭಯ್ಯ ಹಿರೇಮಠ ಮಾತನಾಡಿ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ ಎಂದು ತಿಳಿಸಿದರು. ಈ ಕುರಿತಂತೆ ಪರಿಶೀಲಿಸುವ ಭರವಸೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಕೇಸರಸಿಂಗ ಹಜಾರೆ, ತೋಟಗಾರಿಕೆಯ ಶ್ರೀಶೈಲ ವಾಗ್ಮೋರೆ, ಅಕ್ಷರ ದಾಸೋಹದ ಚಂದ್ರಕಾಂತ ಕೊಣ್ಣೂರು, ರೇಷ್ಮೆ, ಸಾಮಾಜಿಕ ಅರಣ್ಯ ಇಲಾಖೆ, ಕೈಗಾರಿಕಾ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement