ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉಚಿತ ತರಬೇತಿ

Rashmi Kasaragodu
Updated On : 31 May 2014, 12:42 pm

ಗುಲ್ಬರ್ಗ: ಹಿಂದುಳಿದ ವರ್ಗ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ನಿರುದ್ಯೋಗಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಮೈಸೂರಿನ ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯು 5 ವಿವಿಧ ಕೋರ್ಸುಗಳಲ್ಲಿ ಉಚಿತ ತರಬೇತಿ ನೀಡಲಿದೆ. ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಅರ್ಜಿಸಲ್ಲಿಸಲು ಜೂ.16 ಕೊನೆಯ ದಿನ. ಅರ್ಜಿ ನಮೂನೆ ಮತ್ತು ವಿವರವಾದ ಮಾಹಿತಿಗೆ ಗುಲ್ಬರ್ಗದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ. ವಿವರಕ್ಕೆ ಮೊ. 94483 06066ಗೆ ಸಂಪರ್ಕಿಸಬಹುದು.
ಜೂಜಾಟ: ವ್ಯಕ್ತಿ ಸೆರೆ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದ ಠಾಣಾ ವ್ಯಾಪ್ತಿಯ ಸುಲ್ತಾನಾಪುರದಲ್ಲಿ ಜೂಜಾಟದಲ್ಲಿ ತೊಡಗಿದ್ದ ಅಮರಯ್ಯಸ್ವಾಮಿ, ವಿರುಪಾಕ್ಷಯ್ಯಸ್ವಾಮಿ ಎಂಬಾತನನ್ನು ಬಂಧಿಸಿ, 1,190 ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದೆ ಎಂದು ಪಿಎಸ್‌ಐ ಮಹಾಂತೇಶ ಸಜ್ಜನ್ ತಿಳಿಸಿದ್ದಾರೆ.
ಮದ್ಯದ ಬಾಟಲ್ ವಶ: ಠಾಣಾ ವ್ಯಾಪ್ತಿಯ ಜಂಗಮರಹಟ್ಟಿಯಲ್ಲಿ ಯಂಕಪ್ಪ ಅಲಿಯಾಸ್ ವೆಂಕಟೇಶ ಎಂಬಾತನ ಮನೆಯಲ್ಲಿ 34 ವಿಸ್ಕಿ ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ. ಮಹಾಂತೇಶ ಸಜ್ಜನ್ ಹೇಳಿದ್ದಾರೆ.
ಚೌಡೇಶ್ವರಿ ಜಾತ್ರೆ
ಅಫಜಲ್ಪುರ: ತಾಲೂಕಿನ ಸುಕ್ಷೇತ್ರ ಹಿರೇಜೇವರ್ಗಿಯಲ್ಲಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಮೇ 27ರಿಂದ ಪ್ರಾರಂಭಗೊಂಡಿದ್ದು, ಜೂ.7ರಂದು ಮಹಾಮಂಗಲಗೊಳ್ಳುವುದು ಎಂದು ಲಕ್ಷ್ಮೀಶ ಮಾಲಿಪಾಟೀಲ ತಿಳಿಸಿದ್ದಾರೆ. 9 ದಿನಗಳ ಜಾತ್ರಾ ಮಹೋತ್ಸವವು ವಿವಿಧ ಜಾನಪದ ಕಲಾಪಟುಗಳಿಂದ ವೈವಿಧ್ಯಮಯವಾದ ಕಲಾ ಪ್ರದರ್ಶನಗಳು ಪ್ರತಿದಿನ ಸಾಯಂಕಾಲ 4ರಿಂದ 7ರವರೆಗೆ ಪ್ರದರ್ಶಿಸಲ್ಪಡುವವು. ಸೂರ್ಯಕಾಂತ ಕುಂಬಾರ, ಶ್ರೀಮಂತ ಕುಂಬಾರ, ಮಹಾಂತಪ್ಪ ಕುಂಬಾರ, ಕಲ್ಲಪ್ಪ ಕಟ್ಟಿಮನಿ, ಮಹಾಂತ ಕಟ್ಟಿಮನಿ, ಮಹಿಬೂಬ ಜೇವರ್ಗಿ ಮುಂತಾದ ಸೋಗುಗಾರ ಪ್ರದರ್ಶನ ಜನಮನ ರಂಜಿಸುವುದು. ಮದ್ದು ಸುಡುವ ಕಾರ್ಯಕ್ರಮದೊಂದಿಗೆ ಚೌಡೇಶ್ವರಿದೇವಿ ಜಾತ್ರೆ ಮುಕ್ತಾಯಗೊಳ್ಳಲಿದೆ.
ಹಲವಡೆ ಚೌಡೇಶ್ವರಿ ಜಾತ್ರಾ ಮಹೋತ್ಸವ(ಆಳಂದ ವರದಿ): ತಾಲೂಕಿನಾದ್ಯಂತ ಬುಧವಾರ ಬಾದಮಿಯ ಅಮಾವಾಸ್ಯೆ ಯಂದು ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಅದ್ಧುರಿಯಾಗಿ ನೆರವೇರಿತು. ಆಳಂದ ಪಟ್ಟಣದ ಶರಣನಗರ, ಕುಂಬಾರ ಬಡಾವಣೆ, ಸಾಲೇಗಾಂವ, ಖಜೂರಿ, ಸರಸಂಬಾ, ನಾಗಲೇಗಾಂವ, ಹಿರೋಳಿ, ನರೋಣಾ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಸಂಭ್ರಮ ಸಡಗರದಿಂದ ದೇವಿಯ ಮುಖವಾಡಗಳನ್ನು ಮೆರವಣಿಗೆ ಕೈಗೊಂಡು ಗ್ರಾಮದ ಪ್ರಮುಖ ಬೀದಿ ಮನೆಗಳಿಗೆ ದರ್ಶನ ನೀಡಲಾಯಿತು. ಮಧ್ಯಾಹ್ನ ಚೌಡೇಶ್ವರಿ ಮುಖವಾಡಗಳನ್ನು ಧರಿಸಿಕೊಂಡು ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಕೈಗೊಂಡ ಭಕ್ತರ ಮನೆಗಳಿಗೆ ತೆರಳಿದಾಗ ಉಡಿಯಕ್ಕಿ ಹಾಗೂ ದಂಡಿಕಾಯಿ, ಕರ್ಪೂರ ಅರ್ಪಿಸಿದರು.  ಇದಕ್ಕೂ ಮೊದಲು ರಾತ್ರಿ ಸಾಲೇಗಾಂವ ಸರಸಂಬಾದಲ್ಲಿ ಬೆಳ್ಳಿಬಟ್ಟಲು ಮೆರವಣಿಗೆ ನಡೆಸಲಾಯಿತು. ನರೋಣಾ ಗ್ರಾಮದ ಕುಂಬಾರಗಲ್ಲಿಯ ಚೌಡೇಶ್ವರಿ ಜಾತ್ರೆ ಅಂಗವಾಗಿ ಜೋಡ ಮುಖವಾಡ ಧರಿಸಿಕೊಂಡು ಪ್ರಮುಖ ರಸ್ತೆಗಳ ಮೂಲಕ ಭಕ್ತಾದಿಗಳು ಮೆರವಣಿಗೆ ನಡೆಸಿ ದೇವಿಯ ಹರಕೆ ಕೈಗೊಂಡರು.
ವಿದ್ಯಾರ್ಥಿ ನಾಪತ್ತೆ
ಗುಲ್ಬರ್ಗ: ಸಿಇಟಿ ಫಲಿತಾಂಶ ನೋಡಿಕೊಂಡು ಬರುವುದಾಗಿ ತೆರಳಿದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಪ್ರಕರಣ ನಗರದಲ್ಲಿ ನಡೆದಿದೆ. ಬಸವೇಶ್ವರ ಕಾಳೋನಿಯ ವಿವೇಕ ಶರಣಪ್ಪ ಬಿರಾದಾರ(18) ಮೇ 27ರಂದು ಸಿಇಟಿ ಫಲಿತಾಂಶ ನೋಡಿಕೊಂಡು ಬರಲೆಂದು ಹೋದವನು ಮರಳಿ ಬಂದಿಲ್ಲ ಎಂದು ವಿದ್ಯಾರ್ಥಿ ಪಾಲಕರು ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ನಗರದ ನಿಸರ್ಗ ಕಾಲೇಜಿನಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಶೇ.85ರಷ್ಟು ಅಂಕ ಗಳಿಸಿದ್ದ. ಸಿಇಟಿ ರ್ಯಾಂಕಿಂಗ್‌ನಲ್ಲಿ ತಾನು ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲವೆಂದು ಬೇಸರ ಪಟ್ಟುಕೊಂಡು ಕಾಣೆಯಾಗಿರಬಹುದೆಂದು ವಿದ್ಯಾರ್ಥಿ ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments