ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚರಂಡಿ ಕೊಚ್ಚೆ ರಸ್ತೆಗೆ, ಸಂಚಾರ ದುಸ್ತರ

Rashmi Kasaragodu
Updated On : 31 May 2014, 12:42 pm

ಕ.ಪ್ರ. ವಾರ್ತೆ    ಸಿಂಧನೂರು    ಮೇ 30
ನಗರದಲ್ಲಿ ಸಾಯಂಕಾಲ ಸುರಿದ ಭಾರಿ ಮಳೆಗೆ ರಾಯಚೂರು- ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಹಳೆ ಚರಂಡಿಯ ಸಾರ್ವಜನಿಕ ಶೌಚಾಲಯದ ಮಲ- ಮೂತ್ರ ಮತ್ತು ತ್ಯಾಜ್ಯ ವಸ್ತುಗಳು ರಸ್ತೆಗೆ ಹರಿದ ಕಾರಣ ಉಸಿರುಗಟ್ಟಿಸುವಂಥ ದುರ್ವಾಸನೆಯಲ್ಲೇ ಸಾರ್ವಜನಿಕರು ಸಂಚರಿಸಬೇಕಾಯಿತು.
ಶಾಸಕರ ಮನೆಗೆ ಹೋಗುವ ದಾರಿ, ನಗರಸಭೆ ಮುಂದಿನ ಹಾದಿಯಲ್ಲಿ ಚರಂಡಿ ನೀರು ನುಗ್ಗಿದ್ದರಿಂದ ದಾರಿಹೋಕರು ಒಂದು ಗಂಟೆಗೂ ಅಧಿಕ ಕಾಲ ದಾರಿ ಕಾಣದೇ ಪಕ್ಕದಲ್ಲಿನ ಅಂಗಡಿ- ಮುಂಗಟ್ಟುಗಳ ಆಸರೆ ಪಡೆದರು. ನಗರಸಭೆ ಮುಂದೆ ಬೈಕ್ ಹಿಂಬದಿ ಆಸನದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಜಾರಿ ಬಿದ್ದ ಘಟನೆಯೂ ಜರುಗಿತು.
ಜೀವಭಯದಲ್ಲಿ ವಾಹನ ಚಾಲಕರು: ಹಳೆ ಬಜಾರ್ ರಸ್ತೆಯಲ್ಲಿನ ಶಾಂತಿ ಪುಸ್ತಕ ಅಂಗಡಿಯ ಮುಂದೆ ಮಹಿಳೆ ಕೊಚ್ಚೆಯಲ್ಲಿ ಜಾರಿ ಬಿದ್ದು ಮತ್ತೆ ಸಾವರಿಸಿಕೊಂಡು ನಡೆದರು. ರಾಯಚೂರು- ಗಂಗಾವತಿ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಜೀವಭಯದೊಂದಿಗೆ ವಾಹನ ಚಲಾಯಿಸಿದರು.
ಸುಕಾಲಪೇಟೆಗೆ ಹೋಗುವ ರಸ್ತೆಯಲ್ಲಿ ಕನಕದಾಸ ಸರ್ಕಲ್ ಬಳಿ ಚರಂಡಿ ನೀರು ನುಗ್ಗಿದ್ದರಿಂದ ಟಾಟಾ ಏಸ್ ವಾಹನ ಸಿಕ್ಕಿಬಿದ್ದಿತ್ತು.
ರಸ್ತೆಗೆ ಚರಂಡಿ ನೀರು ನುಗ್ಗಿದ್ದರಿಂದ ಕಾಯಿಪಲ್ಲೆ ಮಾರುಕಟ್ಟೆಗೆ ಬಂದಿದ್ದ ನೂರಾರು ಜನ ತೀವ್ರ ತೊಂದರೆ ಅನುಭವಿಸಿದರು. ರಸ್ತೆಯಲ್ಲಿ ಚರಂಡಿ ನೀರು ನಿಂತ ಕಾರಣ ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ರಸ್ತೆಸಂಚಾರ ಸ್ಥಗಿತಗೊಂಡಿತ್ತು.
ಸಾರ್ವಜನಿಕರ ಆಕ್ರೋಶ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಡ್ರೈನೇಜ್ ಕಾಮಗಾರಿಯಿಂದಾಗಿ ಜನತೆ ಪಡಿಪಾಟಲು ಪಡುವಂತಾಗಿದೆ. ಶಾಸಕರ ಮನೆಯ ಮುಂದೆಯೇ ಮಲಮೂತ್ರ ಹಾಗೂ ತ್ಯಾಜ್ಯ ವಸ್ತುಗಳು ಹರಿದರೆ ಇನ್ನೂ ಸಾಮಾನ್ಯರ ಗತಿಯೇನು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement