ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಠ್ಯಪುಸ್ತಕ ಕೊರತೆ ಮಧ್ಯೆಯೇ ಶಾಲೆ ಆರಂಭ

Rashmi Kasaragodu
Updated On : 31 May 2014, 12:38 pm

ಚ ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ    ರಾಯಚೂರು    ಮೇ 30
ಬೇಸಿಗೆಯ ರಜೆ ಕಳೆದು ಜಿಲ್ಲೆಯಲ್ಲಿ ಮತ್ತೆ ಶಾಲೆಗಳು ಪುನಾರಂಭಕ್ಕೆ ಸಜ್ಜಾಗುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಶೈಕ್ಷಣಿಕ ವರ್ಷಾರಂಭದಲ್ಲೇ ಮಕ್ಕಳಿಗೆ ಪಠ್ಯಪುಸ್ತಕದ ಕೊರತೆ ಎದುರಾಗಿದೆ. ಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ಪಠ್ಯಪುಸ್ತಕ ಸರಬರಾಜಾಗಿಲ್ಲ. ಹಾಗಾಗಿ ಮುಂದಿನ ಕೆಲ ದಿನ ಒಂದೇ ಪುಸ್ತಕದಲ್ಲಿ ಹಲವರು ವಿದ್ಯಾರ್ಥಿಗಳ ಓದು ಅನಿವಾರ್ಯ ಎಂಬಂತಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳ ಕೊರತೆಯ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪುಸ್ತಕಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸುವುದು ಈಗ ತಲೆನೋವಾಗಿದೆ.
ಕಳೆದ ವರ್ಷ ಪಠ್ಯಪುಸ್ತಕಗಳ ಕೊರತೆ ಅರ್ಧ ವರ್ಷವಾದರೂ ಪರಿಹಾರ ಕಂಡಿರಲಿಲ್ಲ. ಈ ಬಾರಿಯೂ ಆರಂಭದಲ್ಲಿಯೇ ಸಮಸ್ಯೆ ಕಾಡತೊಡಗಿದೆ. ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನರಹಿತ ಸೇರಿ ಒಟ್ಟು 1959 ಪ್ರಾಥಮಿಕ ಹಾಗೂ 398 ಪ್ರೌಢಶಾಲೆಗಳಿವೆ.
ಬೇಡಿಕೆ ಸಲ್ಲಿಕೆ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿದೆ. 3, 4, 7 ಮತ್ತು 10ನೇ ತರಗತಿಯ ಪಠ್ಯಕ್ರಮ ಬದಲಾಗಿದ್ದು ಪುಸ್ತಕಗಳಿಗೆ ಕಾಯುವಂತೆ ಮಾಡಿದೆ. ಜಿಲ್ಲೆಗೆ ಇನ್ನೂ 7ನೇ ತರಗತಿಯ ಎರಡನೇ ಸೆಮಿಸ್ಟರ್, 10ನೇ ತರಗತಿಯ ಕನ್ನಡ ಮಾಧ್ಯಮದ ವಿಜ್ಞಾನ, ಆಂಗ್ಲ ಮಾಧ್ಯಮದ ಗಣಿತ ಪಠ್ಯಪುಸ್ತಕ ತಲುಪಿಲ್ಲ. ಹೀಗಾಗಿ ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕಗಳಿಲ್ಲದೇ ಮಕ್ಕಳು ಶಾಲೆಯಲ್ಲಿ ಓದು ನಡೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪೂರೈಕೆ: ಜಿಲ್ಲೆಯ ರಾಯಚೂರು ತಾಲೂಕಿನ ಶಾಲೆಗಳಿಗೆ 4,33,131 ಪುಸ್ತಕಗಳಿಗೆ ಬೇಡಿಕೆಯಿದ್ದು ಅದರಲ್ಲಿ 3,76,324 ಪಠ್ಯಪುಸ್ತಕ ಪೂರೈಸಲಾಗಿದೆ. ಇನ್ನೂ 56,807 ಪುಸ್ತಕಗಳು ಬರಬೇಕಿದೆ. ದೇವದುರ್ಗ ತಾಲೂಕಿನಲ್ಲಿ 3,57,949 ಬೇಡಿಕೆಯಿದ್ದು, ಅದರಲ್ಲಿ 2,98,199 ಪಠ್ಯಪುಸ್ತಕ ಪೂರೈಸಿದ್ದು, 59,750 ಪುಸ್ತಕಗಳು ಬರಬೇಕಿದೆ.
ಲಿಂಗಸ್ಗೂರು ತಾಲೂಕಿನಲ್ಲಿ 4,19,448 ಬೇಡಿಕೆಯ ಪೈಕಿ 3,67,246 ಪೂರೈಸಿದ್ದು, 52,202 ಬರಬೇಕಿದೆ. ಮಾನವಿ ತಾಲೂಕಿನ 4,12,561 ಬೇಡಿಕೆಗೆ ಪ್ರತಿಯಾಗಿ 3,34,444 ಪಠ್ಯಪುಸ್ತಕ ದೊರೆತಿದೆ. 78,117 ಪುಸ್ತಕಗಳು ಬಾಕಿಯಿವೆ. ಹಾಗೆಯೇ ಸಿಂಧನೂರು ತಾಲೂಕಿನಲ್ಲಿ 4,17,538 ಪುಸ್ತಕಗಳ ಪೈಕಿ 3,50,012 ಪಠ್ಯಪುಸ್ತಕಗಳು ಪೂರೈಕೆಯಾಗಿವೆ. 67,526 ಪಠ್ಯಪುಸ್ತಕಗಳು ಬರಬೇಕಿದೆ.
ಪಠ್ಯಕ್ರಮ ಬದಲು ತಂದ ಸಮಸ್ಯೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಈಗಾಗಲೇ ಶೇ.75ರಿಂದ ಶೇ.90ರಷ್ಟು ಬೇಡಿಕೆಗೆ ತಕ್ಕಂತೆ ಪಠ್ಯಪುಸ್ತಕ ಪೂರೈಸಲಾಗಿದೆ. ಆದರೆ ಪಠ್ಯಕ್ರಮದಲ್ಲಿನ ಬದಲಾವಣೆಯಿಂದಾಗಿ 3, 4, 7, 10ನೇ ತರಗತಿಯ ಪಠ್ಯಪುಸ್ತಕಗಳ ಕೊರತೆ ಕಂಡುಬಂದಿದೆ ಎಂದು ತಿಳಿಸಿದೆ.
ಈಗಾಗಲೇ ಮೂಲ ಸೌಲಭ್ಯಗಳ ಕೊರತೆಯಿಂದ ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದರೆ ಪ್ರತಿ ವರ್ಷ ಶಾಲಾ ಪ್ರಾರಂಭೋತ್ಸವದೊಂದಿಗೆ ಪಠ್ಯಪುಸ್ತಕಗಳ ಕೊರತೆಯೂ ಕಾಡುತ್ತಿದೆ. ಪಠ್ಯಪುಸ್ತಕದ ಕೊರತೆಯಿಂದ ಪಾಲಕರು, ಶಿಕ್ಷಕ ವರ್ಗ ಶಾಲೆಯ ಆರಂಭದಲ್ಲಿಯೇ ಆತಂಕಕ್ಕೆ ಸಿಲುಕುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement